ADVERTISEMENT

ಶಿಕ್ಷಕರಿಗೆ ತಪ್ಪದ ಶೈಕ್ಷಣಿಕೇತರ ಕರ್ತವ್ಯದ ಹೊರೆ: ಭಾರವಾದ ಬಿಎಲ್‌ಒ ಹುದ್ದೆ

ಓದೇಶ ಸಕಲೇಶಪುರ
Published 18 ಸೆಪ್ಟೆಂಬರ್ 2025, 2:18 IST
Last Updated 18 ಸೆಪ್ಟೆಂಬರ್ 2025, 2:18 IST
<div class="paragraphs"><p>ಶಿಕ್ಷಕ</p></div>

ಶಿಕ್ಷಕ

   

– ಗೆಟ್ಟಿ ಚಿತ್ರ

ರಾಮನಗರ: ಅನ್ಯ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸಬಾರದು ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿ ಕೇವಲ ಒಂದೂವರೆ ತಿಂಗಳಷ್ಟೇ ಆಗಿದೆ. ಇದೀಗ ಆ ಆದೇಶಕ್ಕೆ ವ್ಯತಿರಿಕ್ತವಾಗಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ, ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಹುದ್ದೆಗೆ ಪ್ರಾಥಮಿಕ ಶಾಲೆಗಳ ಶಿಕ್ಷಕರನ್ನು ನಿಯೋಜಿಸಲಾಗಿದೆ.

ADVERTISEMENT

ಶೈಕ್ಷಣಿಕೇತರ ಕರ್ತವ್ಯಗಳ ಭಾರದಿಂದ ನಲುಗಿದ್ದ ಶಿಕ್ಷಕ ವೃಂದ ಇಲಾಖೆಯ ಆದೇಶದಿಂದ ಖುಷಿಪಟ್ಟು ನಿರಾಳವಾಗಿತ್ತು. ಆದರೆ, ಆ ಖುಷಿ ಹೆಚ್ಚಿ ದಿನ ಉಳಿದಿಲ್ಲ. ಚುನಾವಣಾ ಆಯೋಗದ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಅವರು, ಶಿಕ್ಷಕರನ್ನು ಬಿಎಲ್‌ಒಗಳಾಗಿ ನೇಮಿಸುವಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ (ಡಿಡಿಪಿಐ) ನಿರ್ದೇಶನ ನೀಡಿದ್ದಾರೆ.

ಡಿಡಿಪಿಐ ಸೂಚನೆಯಂತೆ, ಬೆಂಗಳೂರು ದಕ್ಷಿಣ ಜಿಲ್ಲೆಯ ವ್ಯಾಪ್ತಿಯಲ್ಲಿ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಿಎಲ್‌ಒ ಹುದ್ದೆಗೆ ಶಿಕ್ಷಕರನ್ನು ನಿಯೋಜನೆ ಮಾಡಿದ್ದಾರೆ. ಶಿಕ್ಷಕರು ಶೈಕ್ಷಣಿಕ ಚಟುವಟಿಕೆ ತಿಂಗಳುಗಳ ಕಾಲ ಹೆಚ್ಚುವರಿಯಾಗಿ ಬಿಎಲ್‌ಒ ಹುದ್ದೆಯ ಕಾರ್ಯಭಾರ ನಿರ್ವಹಿಸಬೇಕಿದೆ. ಇದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಚುನಾವಣೆಗೆ ಸಿದ್ಧತೆ:

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದೆ. ಹಿಂದೆ ‘ಡಿ’ ದರ್ಜೆಯ ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಎಲ್‌ಒ ಹೊಣೆ ವಹಿಸುತ್ತಿದ್ದ ಆಯೋಗ, ಇತ್ತೀಚೆಗೆ ‘ಸಿ’ ದರ್ಜೆಯ ಶಿಕ್ಷಕರಿಗೆ ವಹಿಸಿದೆ. ಜೊತೆಗೆ ಪಂಚಾಯಿತಿ ಸಿಬ್ಬಂದಿಯನ್ನು ಬಳಸಲಾಗುತ್ತಿದೆ.

‘ಶಿಕ್ಷಕರನ್ನು ಪಾಠ–ಪ್ರವಚನಗಳಂತಹ ಶೈಕ್ಷಣಿಕ ಚಟುವಟಿಕೆಗಳ ಬದಲು, ಶೈಕ್ಷಣಿಕೇತರ ಕರ್ತವ್ಯಗಳಿಗೆ ನಿಯೋಜನೆ ಮಾಡಿರುವ ಚುನಾವಣಾ ಆಯೋಗದ ನಿರ್ಧಾರ ಸರಿಯಲ್ಲ. ಶಿಕ್ಷಕರಿಗೆ ಒಂದೆಡೆ ಶಾಲಾ ಫಲಿತಾಂಶ ಸುಧಾರಿಸುವ ಒತ್ತಡವಾದರೆ, ಮತ್ತೊಂದೆಡೆ ಅನ್ಯ ಕೆಲಸಗಳ ಭಾರಕ್ಕೆ ಸಿಲುಕಿ ನಲುಗುತ್ತಿದ್ದೇವೆ. ನಮ್ಮ ಗೋಳು ಕೇಳುವವರ‍್ಯಾರು’ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ವಿನಾಯಿತಿ ಇಲ್ಲ:

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ ವಿತರಣೆ ಸೇರಿದಂತೆ ಇತರ ಎಲ್ಲಾ ಕೆಲಸಗಳನ್ನು ಸಹ ಶಿಕ್ಷಕರೇ ಮಾಡಬೇಕಿದೆ. ಬಿಸಿಯೂಟಕ್ಕೆ ಸಂಬಂಧಿಸಿದ ವರದಿಯನ್ನು ನಿತ್ಯ ತಪ್ಪದೆ ಆನ್‌ಲೈನ್‌ನಲ್ಲಿ ಅಪ್ಲೋಡ್‌ ಮಾಡಬೇಕು. ಅನ್ಯ ಕೆಲಸಕ್ಕೆ ನಿಯೋಜನೆಗೊಂಡರೂ ವರದಿ ಸಲ್ಲಿಸುವುದರಲ್ಲಿ ಯಾವುದೇ ವಿನಾಯಿತಿ ಇಲ್ಲ.

‘ಶಿಕ್ಷಕರಿಗೆ ಈಗಗಲೇ ಅನ್ಯ ಕೆಲಸಗಳ ಒತ್ತಡ ಹೆಚ್ಚಾಗಿರುವುದರಿಂದ, ಪಾಠ–ಪ್ರವಚನಗಳ ಕಡೆಗೆ ಹೆಚ್ಚು ಗಮನ ಕೊಡಲಾಗುತ್ತಿಲ್ಲ ಎಂಬ ಮಾತು ಜನಜನಿತವಾಗಿದೆ. ಇದೀಗ ಬಿಎಲ್‌ಒ ಆಗಿ ನಿಯೋಜಿಸಲಾಗಿದೆ.ಸದ್ಯದಲ್ಲೇ ಶುರುವಾಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಾಗೂ ನಂತರ ಜನಗಣತಿಗೂ ಶಿಕ್ಷಕರನ್ನೇ ಬಳಸಿಕೊಳ್ಳಲಾಗುತ್ತಿದೆ. ಹೀಗಾದರೆ, ಮಕ್ಕಳ ಶಿಕ್ಷಣದ ಗತಿ ಏನು?’ ಎಂದು ಶಿಕ್ಷಕರೊಬ್ಬರು ಪ್ರಶ್ನಿಸಿದರು.

‘ಕೆಲವೆಡೆ ಏಕ ಶಿಕ್ಷಕರಿರುವ ಶಿಕ್ಷಕರನ್ನು ಸಹ ಬಿಎಲ್‌ಒಗಳಾಗಿ ನಿಯೋಜಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕೆಲಸಕ್ಕೆ ಆ ಶಿಕ್ಷಕರು ಹೋದರೆ, ಶಾಲೆಯಲ್ಲಿರುವ ಮಕ್ಕಳ ಕತೆ ಏನು? ಚುನಾವಣಾ ಆಯೋಗ ಈ ಕುರಿತು ಗಂಭೀರವಾಗಿ ಆಲೋಚಿಸಿ, ಶಿಕ್ಷಕರನ್ನು ಚುನಾವಣಾ ಕೆಲಸಗಳಿಂದ ಮುಕ್ತಗೊಳಿಸಬೇಕು’ ಎಂದು ಒತ್ತಾಯಿಸಿದರು.

ಚುನಾವಣಾ ಆಯೋಗದ ಸೂಚನೆ ಮೇರೆಗೆ ಶಿಕ್ಷಕರನ್ನು ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಹುದ್ದೆಗೆ ನಿಯೋಜನೆ ಮಾಡಲಾಗಿದೆ. ಆಯೋಗದ ಆದೇಶವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಲೇಬೇಕು
– ಯಶವಂತ್ ವಿ. ಗುರುಕರ್ ಜಿಲ್ಲಾಧಿಕಾರಿ ಬೆಂಗಳೂರು ದಕ್ಷಿಣ

ಯಶವಂತ್ ವಿ. ಗುರುಕರ್, ಜಿಲ್ಲಾಧಿಕಾರಿ

‘ಅನ್ಯ ಕೆಲಸಗಳ ಭಾರಕ್ಕೆ ನಲುಗಿದ್ದೇವೆ’
‘ಅನ್ಯ ಕೆಲಸಗಳ ಭಾರಕ್ಕೆ ಶಿಕ್ಷಕರು ಈಗಾಗಲೇ ನಲುಗಿದ್ದಾರೆ. ಇದನ್ನು ಮನಗಂಡ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರು ಅನ್ಯ ಕಾರ್ಯಗಳಿಗೆ ಹಾಗೂ ತರಬೇತಿಗಳಿಗೆ ಬಳಸಬಾರದು ಎಂದು ಆದೇಶ ಹೊರಡಿಸಿದ್ದಾರೆ. ಇದರ ನಡುವೆಯೇ ಬಿಎಲ್‌ಒ ಹುದ್ದೆಗೆ ಶಿಕ್ಷಕರನ್ನು ನೇಮಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಶಿಕ್ಷಕರು ಶೈಕ್ಷಣಿಕ ಚಟುವಟಿಕೆ ಬದಲು ಬೇರೆ ಕೆಲಸಗಳಿಗೆ ಹೆಚ್ಚು ಸಮಯ ಕೊಡಬೇಕಾಗುತ್ತದೆ. ಇದರಿಂದ ಮಕ್ಕಳ ಕಲಿಕೆ ಕುಂಠಿತವಾಗಿ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಬಿಎಲ್‌ಒ ಹುದ್ದೆಗಳಿಂದ ಶಿಕ್ಷಕರಿಗೆ ಮುಕ್ತಿ ನೀಡಬೇಕು’ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಆಗ್ರಹಿಸಿದರು.
‘ಶಿಕ್ಷಣ ವ್ಯವಸ್ಥೆ ಮೇಲೆ ಪರಿಣಾಮ’
‘ಜಿಲ್ಲೆಯಲ್ಲಿ ಈಗಾಗಲೇ ಹಲವು ಶಾಲೆಗಳು ಶಿಕ್ಷಕರ ಕೊರತೆಯಿಂದ ನಲುಗುತ್ತಿವೆ. ಶೂನ್ಯ ದಾಖಲಾತಿ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಶಾಲೆಯಲ್ಲಿ ಶಿಕ್ಷಕರೇ ಇರುವುದಿಲ್ಲ ಸರಿಯಾಗಿ ಪಾಠ ಮಾಡುವುದಿಲ್ಲ ಎಂಬ ಆರೋಪ ಪೋಷಕರಿಂದ ಸಾಮಾನ್ಯವಾಗಿದೆ. ಹೀಗಾಗಿ ಗ್ರಾಮೀಣ ಭಾಗದ ಶಾಲೆಗಳ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಇದನ್ನು ತಡೆದು ಸರ್ಕಾರಿ ಶಾಲೆಗಳನ್ನು ಉಳಿಸಿ ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ಬಳಸಬಾರದು. ಹೀಗೆ ಮಾಡುವುದರಿಂದ ಶಿಕ್ಷಣ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ನಿವೃತ್ತ ಮುಖ್ಯ ಶಿಕ್ಷಕ ಸಿದ್ದರಾಜು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.