ಚನ್ನಪಟ್ಟಣ(ರಾಮನಗರ): ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ತಾಲ್ಲೂಕಿನ ಎಂ.ಕೆ. ದೊಡ್ಡಿ ಪೊಲೀಸರು ಬಂಧಿಸಿದ್ದ ಆರೋಪಿಯ ಶವ ಬುಧವಾರ ಠಾಣೆಯ ಶೌಚಾಲಯದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ.
‘ಪೊಲೀಸರೇ ಹೊಡೆದು ಸಾಯಿಸಿ ನೇಣು ಹಾಕಿದ್ದಾರೆ. ಇದು ಲಾಕಪ್‌ಡೆತ್’ ಎಂದು ಕುಟುಂಬ ಸದಸ್ಯರು ಪೊಲೀಸರ ವಿರುದ್ಧ ನೇರವಾಗಿ ಆರೋಪ ಮಾಡಿದ್ದಾರೆ. ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದುಂಡನಹಳ್ಳಿಯ ರಮೇಶ್ (59) ಶವ ಎಂ.ಕೆ. ದೊಡ್ಡಿ ಠಾಣೆಯ ಬಂದಿಖಾನೆ ಶೌಚಾಲಯದ ಬಾಗಿಲು ಹ್ಯಾಂಡಲ್‌ಗೆ ಲುಂಗಿಯಿಂದ ನೇಣು ಬಿಗಿದು ಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರ ಈ ಹೇಳಿಕೆಯನ್ನು ಕುಟುಂಬ ಸದಸ್ಯರು ಅಲ್ಲಗಳೆದಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಎಂ.ಬಿ. ಹಳ್ಳಿಯ ಶ್ರೀಹೊನ್ನಾರತಿ ಮತ್ತು ಮನೆಯಮ್ಮ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಆರೋಪದ ಮೇಲೆ ರಮೇಶ್ ಮತ್ತು ಆತನ ಪುತ್ರ ಮಂಜು ಹಾಗೂ ಟಿ. ನರಸೀಪುರ ತಾಲ್ಲೂಕಿನ ಬನ್ನೂರಿನ ವೆಂಕಟೇಶ್ ಎಂಬಾತನನ್ನು ಪೊಲೀಸರು ಆ.18 ರಂದು ಬಂಧಿಸಿ ಠಾಣೆಗೆ ಕರೆ ತಂದಿದ್ದರು.
‘ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ ವಿಚಾರಣೆಗಾಗಿ ಮೂರು ದಿನ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು. ಆ ಪೈಕಿ ರಮೇಶ್‌ನನ್ನು ಒಂದು ಬಂಧಿಖಾನೆಯಲ್ಲಿ ಹಾಗೂ ಉಳಿದಿಬ್ಬರನ್ನು ಮತ್ತೊಂದು ಬಂಧಿಖಾನೆಯಲ್ಲಿ ಇಡಲಾಗಿತ್ತು. ಬುಧವಾರ ಬೆಳಗ್ಗೆ 6.45ರ ಸುಮಾರಿಗೆ ಮೂತ್ರ ವಿಸರ್ಜನೆಗಾಗಿ ಶೌಚಾಲಯಕ್ಕೆ ಹೋಗಿದ್ದ ರಮೇಶ್ 20 ನಿಮಿಷವಾದರೂ ಹೊರಕ್ಕೆ ಬಂದಿರಲಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಸುದ್ದಿಗಾರರಿಗೆ ತಿಳಿಸಿದರು.
‘ಒಳಗಿನಿಂದ ನರಳಾಟದ ಶಬ್ದ ಕೇಳಿದ ಕರ್ತವ್ಯದಲ್ಲಿದ್ದ ಸಿಬ್ಬಂದಿ ಕೂಡಲೇ ಬಂದಿಖಾನೆ ಬೀಗ ತೆರೆದು ಶೌಚಾಲಯದ ಒಳ ಹೋಗಿ ನೋಡಿದ್ದಾರೆ. ಆಗ ರಮೇಶ್, ಶೌಚಾಲಯದ ಬಾಗಿಲಿನ ಹ್ಯಾಂಡಲ್‌ಗೆ ತನ್ನ ಲುಂಗಿಯಿಂದ ನೇಣು ಬಿಗಿದುಕೊಂಡಿದ್ದರು. ಕೂಡಲೇ ಲುಂಗಿ ಬಿಚ್ಚಿ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ವಾಹನದಲ್ಲಿ ಕರೆತಂದಿದ್ದಾರೆ. ರಮೇಶ್ ಅವರನ್ನು ತಪಾಸಣೆ ನಡೆಸಿದ ವೈದ್ಯರು ಅದಾಗಲೇ ಮೃತಪಟ್ಟಿದ್ದಾರೆ ಎಂದಿದ್ದಾರೆ. ಬಳಿಕ ಕುಟುಂಬದವರಿಗೆ ಮಾಹಿತಿ ನೀಡಲಾಯಿತು’ ಎಂದು ಹೇಳಿದರು.
‘ಆರೋಪಿಯ ಪೊಲೀಸ್ ಕಸ್ಟಡಿ ಅವಧಿ ಬುಧವಾರ ಅಂತ್ಯಗೊಳ್ಳುತ್ತಿದ್ದರಿಂದ ಮತ್ತೆ ಕೋರ್ಟ್‌ಗೆ ಹಾಜರುಪಡಿಸಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಅದಕ್ಕಾಗಿ ಹಿಂದಿನ ರಾತ್ರಿಯೇ ರಮೇಶ್ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಆಗ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ’ ಎಂದು ಜಿಲ್ಲಾ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಲಾಕ್‌ಅಪ್ ಡೆತ್ ಆರೋಪ ಕೇಳಿ ಬಂದಿರುವುದರಿಂದ ರಮೇಶ್ ಶವದ ಮರಣೋತ್ತರ ಪರೀಕ್ಷೆಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಹಾಗೂ ಕ್ಯಾಮೆರಾ ನಿಗಾದಲ್ಲಿ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಠಾಣೆ ಬಳಿ ರಮೇಶ್ ಕುಟುಂಬದವರು ರೋದನ ಮುಗಿಲು ಮುಟ್ಟಿತ್ತು.
ಏಣಿ ವ್ಯಾಪಾರ ಮಾಡಬೇಕಿದೆ ಎಂದು ತಂದೆಯನ್ನು ಕರೆದೊಯ್ದಿರುವ ಪೊಲೀಸರೇ ತಂದೆಯನ್ನು ಹೊಡೆದು ಸಾಯಿಸಿದ್ದಾರೆ. ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ಇದನ್ನು ನಾವು ಹೇಗೆ ನಂಬೋದು. ನಮಗೆ ನ್ಯಾಯ ಬೇಕು– ಮಂಜುಳಾ ಮೃತ ರಮೇಶ್ ಅವರ ಪುತ್ರಿ
ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದ ರಮೇಶ್ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಠಾಣೆ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದ್ದು ಅವರಿಂದ ಯಾವುದೇ ನಿರ್ಲಕ್ಷ್ಯ ಕಂಡುಬಂದಿಲ್ಲ. ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದ್ದು ತನಿಖೆಯಲ್ಲಿ ಸತ್ಯ ಗೊತ್ತಾಗಲಿದೆ– ಆರ್. ಶ್ರೀನಿವಾಸ ಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.