ADVERTISEMENT

ರಾಮನಗರ: ಶಾಸಕರಿಂದ ಸರ್ಕಾರಿ ಶಾಲೆಗಳ ದತ್ತು

ಮಾಗಡಿ ವಿಧಾನಸಭಾ ಕ್ಷೇತ್ರದ ಮೂರು ಶಾಲೆಗಳ ಅಭಿವೃದ್ಧಿಗೆ ಯೋಜನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 10:16 IST
Last Updated 20 ಜುಲೈ 2020, 10:16 IST

ರಾಮನಗರ: ಓದು ಮುಗಿದ ನಂತರವೂ ತಮ್ಮ ಶಾಲೆ ನೆನಪಿಸಿಕೊಳ್ಳುವವರು ವಿರಳ. ಆದರೆ, ಇಲ್ಲೊಬ್ಬರು ತಾವು ಹುಟ್ಟಿದ ಊರಿನ ಶಾಲೆಯನ್ನು ಮಾದರಿಯಾಗಿ ರೂಪಿಸಲು ಯೋಜನೆ ರೂಪಿಸಿ ಇತರರಿಗೂ ಮಾದರಿ ಆಗಿದ್ದಾರೆ.

ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಎ.ಮಂಜುನಾಥ್‌ ಬಿಡದಿ ಬಳಿಯ ಬೈರಮಂಗಲದಲ್ಲಿ ಬೆಳೆದವರು. ಅಲ್ಲಿನ ಸರ್ಕಾರಿ ಶಾಲೆಯಲ್ಲೇ ಓದು ಕಲಿತವರು. ಇದೀಗ ತಮ್ಮ ಶಾಲೆಯನ್ನೇ ದತ್ತು ತೆಗೆದುಕೊಂಡಿದ್ದಾರೆ. ಮಾತ್ರವಲ್ಲ ತಮ್ಮ ಕ್ಷೇತ್ರದ ವ್ಯಾಪ್ತಿಯ ರಾಮನಗರ ತಾಲ್ಲೂಕಿನ ಜಾಲಮಂಗಲ ಸರ್ಕಾರಿ ಶಾಲೆ ಹಾಗೂ ಮಾಗಡಿ ತಾಲ್ಲೂಕಿನ ಹುಲಿಕಲ್ ಸರ್ಕಾರಿ ಶಾಲೆಗಳನ್ನೂ ಅವರು ದತ್ತು ಸ್ವೀಕರಿಸಿದ್ದಾರೆ.

ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುವಂತೆ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಅವರು ಶಾಸಕರಲ್ಲಿ ಮನವಿ ಮಾಡಿದ್ದರು. ಅವರ ಕರೆಗೆ ಸ್ಪಂದಿಸಿರುವ ಮಂಜುನಾಥ್‌ ಶಾಲೆಗಳ ದತ್ತು ಸ್ವೀಕಾರದ ನಿರ್ಧಾರ ಪ್ರಕಟಿಸಿದ್ದರು. ಇನ್ನೂ ಮೂರು ತಿಂಗಳಲ್ಲಿ ಈ ಶಾಲೆಗಳ ಸ್ವರೂಪ ಬದಲಿಸಿ, ಈ ಶೈಕ್ಷಣಿಕ ವರ್ಷದಿಂದಲೇ ಇಲ್ಲಿಗೆ ಹೆಚ್ಚು ಮಕ್ಕಳನ್ನು ಸೆಳೆಯುವ ಗುರಿ ಹೊಂದಲಾಗಿದೆ.

ADVERTISEMENT

ಏನು ಪ್ರಯೋಜನ: ’ದತ್ತು ಎಂದ ಮಾತ್ರ ಶಾಸಕರ ನಿಧಿಯಲ್ಲಿ ಒಂದಿಷ್ಟು ಅನುದಾನ ನೀಡಿ, ಶಾಲಾ ಆವರಣದಲ್ಲಿ ಬೋರ್ಡ್‌ ನೆಟ್ಟು ಸುಮ್ಮನಾಗುವುದಲ್ಲ. ಈ ಶಾಲೆಗಳು ಯಾವ ಖಾಸಗಿ ಕಾನ್ವೆಂಟ್‌ಗಳಿಗೂ ಕಮ್ಮಿ ಇಲ್ಲದಂತೆ ಬೆಳೆದು, ವಿದ್ಯಾರ್ಥಿಗಳಿಗೆ ಅದಕ್ಕಿಂತ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡಬೇಕು. ಆ ರೀತಿಯಲ್ಲಿ ಇವುಗಳನ್ನು ಪೋಷಿಸಲಾಗುವುದು’ ಎಂದು ತಮ್ಮ ಯೋಜನೆ ಕುರಿತು ವಿವರಿಸುತ್ತಾರೆ ಶಾಸಕ ಎ.ಮಂಜುನಾಥ್‌.

’ಮೂರು ಶಾಲೆಗಳ ಅಭಿವೃದ್ಧಿಗೆ ಅದರದ್ದೇ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಪ್ರತಿ ಶಾಲೆಯಲ್ಲೂ ಸುಸಜ್ಜಿತವಾದ ಕಟ್ಟಡ, ಗ್ರಂಥಾಲಯ, ಆಟದ ಮೈದಾನ, ಕಂಪ್ಯೂಟರ್‌ ಪ್ರಯೋಗಾಲಯ ಸೇರಿದಂತೆ ಅಗತ್ಯವಾದ ಎಲ್ಲ ಸೌಲಭ್ಯಗಳೂ ಇರಲಿವೆ. ಸರ್ಕಾರ ನೀಡುವ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ, ಸೈಕಲ್‌ ಎಲ್ಲವನ್ನೂ ಸಕಾಲಕ್ಕೆ ತಲುಪಿಸುವ ಜತೆಗೆ ಅಗತ್ಯವಾದ ಇನ್ನಿತರ ನೆರವನ್ನೂ ನೀಡಲಾಗುವುದು. ಪ್ರತಿ ಹತ್ತು ವಿದ್ಯಾರ್ಥಿಗಳಿಗೆ ಒಂದರಂತೆ ಗುಂಪು ರಚಿಸಿ, ಕಲಿಕೆಯಲ್ಲಿ ಹಿಂದುಳಿದವರನ್ನು ಗುರುತಿಸಿ ಅವರನ್ನೂ ಪ್ರೇರೇಪಿಸಲಾಗುವುದು. ಆಟೋಟ ತರಬೇತಿ, ಪಠ್ಯೇತರ ಚಟುವಟಿಕೆಗಳ ಜತೆಗೆ ಖಾಸಗಿ ಶಾಲೆಗಳಂತೆಯೇ ಪ್ರತಿ ತಿಂಗಳು ಪೋಷಕರ ಸಭೆ ನಡೆಸಿ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಮಾಹಿತಿ ನೀಡಲಾಗುವುದು’ ಎನ್ನುತ್ತಾರೆ ಅವರು.

‘ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಸರ್ಕಾರ ಕೆಲವು ಶಾಲೆಗಳಿಗೆ ಸಾಕಷ್ಟು ಹೂಡಿಕೆ ಮಾಡುತ್ತದೆ. ಆದರೆ, ಅದರ ಸದ್ಬಳಕೆ ಆಗುತ್ತಿಲ್ಲ. ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಹೀಗಾಗಿ ನಾವೆಲ್ಲ ಈ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಗೆ ಕೈ ಜೋಡಿಸುವ ಅಗತ್ಯವಿದೆ. ಈಗಾಗಲೇ ಸಮಾನ ಮನಸ್ಕರ ಜತೆ ಚರ್ಚಿಸಿದ್ದೇನೆ. ಪ್ರತಿ ಶಾಲೆ ಅಭಿವೃದ್ಧಿಗೂ ಮುನ್ನ ಅಲ್ಲಿನ ಸ್ಥಳೀಯರ ಜತೆ ಚರ್ಚಿಸಿ ತಂಡಗಳನ್ನಾಗಿ ಮಾಡಿ ನೀಲನಕ್ಷೆ ರೂಪಿಸಲಾಗುವುದು. ಇದಕ್ಕಾಗಿ ಈಗಾಗಲೇ ಸರ್ಕಾರದ ನಿವೃತ್ತ ಅಧಿಕಾರಿ ಒಬ್ಬರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಿಕೊಂಡಿದ್ದು, ಅವರು ಅಗತ್ಯ ಸಲಹೆ ನೀಡಲಿದ್ದಾರೆ’ ಎನ್ನುತ್ತಾರೆ ಮಂಜುನಾಥ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.