ADVERTISEMENT

ಉಪ ಚುನಾವಣೆ: ಶೇ 71 ಮತದಾನ

6ರಂದು ಮತ ಎಣಿಕೆ ಕಾರ್ಯ: ಕಣದಲ್ಲಿ ಐವರು ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:00 IST
Last Updated 4 ಸೆಪ್ಟೆಂಬರ್ 2021, 3:00 IST
ಜೂನಿಯರ್‌ ಕಾಲೇಜು ಮತಗಟ್ಟೆಗೆ ಬಂದ ಮತದಾರರು
ಜೂನಿಯರ್‌ ಕಾಲೇಜು ಮತಗಟ್ಟೆಗೆ ಬಂದ ಮತದಾರರು   

ರಾಮನಗರ: ಇಲ್ಲಿನ ನಗರಸಭೆಯ ನಾಲ್ಕನೇ ವಾರ್ಡಿಗೆ ಶುಕ್ರವಾರ ನಡೆದ ಮತದಾನ ಶಾಂತಿಯುತವಾಗಿದ್ದು, ಶೇ 70.91 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದರು.

ಜೂನಿಯರ್‌ ಕಾಲೇಜು ಆವರಣದಲ್ಲಿನ ಎರಡು ಮತಗಟ್ಟೆಗಳಲ್ಲಿ ಬೆಳಿಗ್ಗೆ 7ಕ್ಕೆ ಮತದಾನ ಪ್ರಕ್ರಿಯೆಯು ಆರಂಭಗೊಂಡಿತು. ಆರಂಭದಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು. ಆಗಾಗ್ಗೆ ಸುರಿದ ಮಳೆಯು ಮತದಾರರ ಉತ್ಸಾಹಕ್ಕೆ ಅಡ್ಡಿ ಆಗಲಿಲ್ಲ.

ಬೆಳಿಗ್ಗೆ 9 ಗಂಟೆಯ ವೇಳೆ ಶೇ 17.33, 11 ಗಂಟೆ ವೇಳೆಗೆ ಶೇ 37.18, ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 53.99, ಮಧ್ಯಾಹ್ನ 3 ಗಂಟೆ ವೇಳೆಗೆ ಶೇ 64.28 ರಷ್ಟು ಮಂದಿ ಮತದಾನ ಮಾಡಿದರು. ಸಂಜೆ 5ರವರೆಗೆ ಸಾಮಾನ್ಯ ಮತದಾರರು ಹಾಗೂ 5ರಿಂದ 6ರವರೆಗೆ ಕೋವಿಡ್‌ ಸೋಂಕಿತರಿಗೆ ಸಮಯ ಮೀಸಲಿಡಲಾಗಿತ್ತು.

ADVERTISEMENT

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಮತಗಟ್ಟೆಗಳ ಮುಂಭಾಗ ಇದ್ದು, ಕಡೆ ಕ್ಷಣದಲ್ಲಿ ಮತದಾರರನ್ನು ಓಲೈಸುವ ಪ್ರಯತ್ನ ನಡೆಸಿದರು.

ಕಳೆದ ಏಪ್ರಿಲ್‌ನಲ್ಲಿ ರಾಮನಗರ ನಗರಸಭೆಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್‌ನ ಅಭ್ಯರ್ಥಿ ಲೀಲಾವತಿ ಗೋವಿಂದರಾಜು ವಿಜೇತರಾಗಿದ್ದು, ಫಲಿತಾಂಶಕ್ಕೆ ಮುನ್ನವೇ ಅವರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಉಪ ಚುನಾವಣೆ ನಿಗದಿ ಆಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಸೂಯ, ಕಾಂಗ್ರೆಸ್ ಅಭ್ಯರ್ಥಿ ತೇಜಸ್ವಿನಿ ಸುರೇಶ್, ಬಿಜೆಪಿ ಅಭ್ಯರ್ಥಿ ಸವಿತಾ ಸೇರಿದಂತೆ ಐವರು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಮತದಾನ ಪ್ರಕ್ರಿಯೆ ಮುಗಿದ ನಂತರ ಮತ ಪೆಟ್ಟಿಗೆಗಳನ್ನು ನಗರದ ಮಿನಿ ವಿಧಾನಸೌಧದಲ್ಲಿ ಭದ್ರವಾಗಿ ಇರಿಸಲಾಗಿದೆ. ಇದೇ 6ರಂದು ಇಲ್ಲಿಯೇ ಮತ ಎಣಿಕೆ ಕಾರ್ಯವು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.