ADVERTISEMENT

ಮಾಗಡಿ: ಮುಂದುವರಿದ ಮಳೆ ಅಬ್ಬರ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 6:53 IST
Last Updated 25 ಅಕ್ಟೋಬರ್ 2021, 6:53 IST
ಕುದೂರು ಗ್ರಾಮದ ರಾಜಕಾಲುವೆಯನ್ನು ಭಾನುವಾರ ಸ್ವಚ್ಛಗೊಳಿಸಲಾಯಿತು
ಕುದೂರು ಗ್ರಾಮದ ರಾಜಕಾಲುವೆಯನ್ನು ಭಾನುವಾರ ಸ್ವಚ್ಛಗೊಳಿಸಲಾಯಿತು   

ಮಾಗಡಿ: ತಾಲ್ಲೂಕಿನಾದ್ಯಂತ ವರುಣನ ಅಬ್ಬರ ಮುಂದುವರಿದಿದ್ದು, ಶನಿವಾರ ರಾತ್ರಿಯೂ ವರ್ಷಧಾರೆ ಆಯಿತು.

ಸತತ ಮಳೆಯಿಂದಾಗಿ ಅನೇಕ ಕೆರೆ, ಕಟ್ಟೆಗಳು ಕೋಡಿ ತುಂಬಿ ಹರಿದಿವೆ. ಭಾರ್ಗಾವತಿ ಕೆರೆ ಕೋಡಿ ಬಿದ್ದಿದೆ. ಕುದೂರಿನ ಕೆಂಚನಪುರ ಕೆರೆ ಕೋಡಿ ಬಿದ್ದಿದ್ದು, ಕೆರೆ ಏರಿ ಕುಸಿಯುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಮನೆ ಕುಸಿತ: ತಾಲ್ಲೂಕಿನ ಉಡುವೆಗೆರೆಯಲ್ಲಿ ಶನಿವಾರ ಸುರಿದ ಮಳೆಯಿಂದ ಚನ್ನಮ್ಮ ಹಾಗೂ ತಿಬ್ಬಮ್ಮ ಎಂಬುವರ ಮನೆಗಳು ಕುಸಿದಿವೆ. ಗ್ರಾ.ಪಂ. ಅಧ್ಯಕ್ಷ ಪುರುಷೋತ್ತಮ ಭೇಟಿ ನೀಡಿ ₹ 5 ಸಾವಿರ ಸಹಾಯಧನ ನೀಡಿದರು. ಗ್ರಾ.ಪಂ. ಸದಸ್ಯರಾದ ಬಸವಲಿಂಗಯ್ಯ, ಶಿವರುದ್ರಮ್ಮ ಹಾಗೂ ಬಸವರಾಜು ಇದ್ದರು.

ADVERTISEMENT

ಕುದೂರು ಗ್ರಾಮದ ಶಿವಗಂಗೆ ರಸ್ತೆಯಲ್ಲಿ ರಾಜಕಾಲುವೆ ಉಕ್ಕಿ ಹರಿದಿದ್ದು, ಮಳೆ ನೀರಿನ ಜೊತೆಗೆ ಚರಂಡಿ ನೀರು ಸೇರಿಕೊಂಡು ಪಕ್ಕದ ಕಲ್ಯಾಣಿ ಕಲುಷಿತಗೊಂಡಿತು. ಭಾನುವಾರ ಬೆಳಿಗ್ಗೆ ರಾಜಕಾಲುವೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆದಿತ್ತು.

‘ರಸ್ತೆ ಪಕ್ಕ ರಾಜಕಾಲುವೆ ಒತ್ತುವರಿ ಮಾಡಿಕೊಂಡು ‍ಪೆಟ್ರೋಲ್ ಬಂಕ್‌ ನಿರ್ಮಿಸಿದೆ. ಹೀಗಾಗಿ ನೀರೆಲ್ಲ ರಸ್ತೆಗೆ ನುಗ್ಗಿದೆ. ಈ ಕುರಿತು ಜಿಲ್ಲಾಧಿಕಾರಿಗೂ ಈ ಹಿಂದೆ ದೂರು ನೀಡಿದ್ದೆವು’ ಎಂದು ಯತಿರಾಜ್‌ ಎಂಬುವರು
ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.