ADVERTISEMENT

ಸ್ವಾಮಿ ವಿವೇಕಾನಂದ ಜಯಂತಿ: ಸ'ಹೋದರತೆ ಸಂದೇಶ ಸಾರಿದ ಮಹಾಪುರುಷ'

ಸ್ವಾಮಿ ವಿವೇಕಾನಂದ ಜಯಂತಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 7:34 IST
Last Updated 14 ಜನವರಿ 2022, 7:34 IST
ಚನ್ನಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಕೆ.ಎನ್. ರಮೇಶ್, ಸಮಾಜ ಸೇವಕಿ ರೇಖಾ ಲೋಕೇಶ್, ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ ಗುರೂಜಿ ಭಾಗವಹಿಸಿದ್ದರು
ಚನ್ನಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಕೆ.ಎನ್. ರಮೇಶ್, ಸಮಾಜ ಸೇವಕಿ ರೇಖಾ ಲೋಕೇಶ್, ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ ಗುರೂಜಿ ಭಾಗವಹಿಸಿದ್ದರು   

ಚನ್ನಪಟ್ಟಣ: ‘ಸ್ವಾಮಿ ವಿವೇಕಾನಂದರು ಭಾರತೀಯರ ಬಗ್ಗೆ ವಿದೇಶಿಗರಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಿ ವಿಶ್ವಕ್ಕೆ ಸಹೋದರತೆಯ ಸಂದೇಶ ಸಾರಿದ ಮಹಾಪುರುಷ’ ಎಂದು ಡಿವೈಎಸ್‌ಪಿ ಕೆ.ಎನ್. ರಮೇಶ್ ಅಭಿಪ್ರಾಯಪಟ್ಟರು.

ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಭಾರತ್ ವಿಕಾಸ್ ಪರಿಷತ್ ಕಣ್ವ ಶಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಕೌಟುಂಬಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಮಾಮಿ ವಿವೇಕಾನಂದರ ದಿವ್ಯವಾಣಿಗಳು ಯುವಜನತೆಗೆ ಸ್ಫೂರ್ತಿ ನೀಡುತ್ತವೆ. ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಐತಿಹಾಸಿಕವಾಗಿದೆ ಎಂದರು.

ADVERTISEMENT

ಭಾರತವನ್ನು ಪ್ರತಿನಿಧಿಸಿದ್ದ ಅವರು ತಮ್ಮ ಉದಾತ್ತ ಮಾತುಗಳಿಂದಲೇ ದೇಶದ ಘನತೆ ಎತ್ತಿ ಹಿಡಿದ ಮಹಾನ್ ದಾರ್ಶನಿಕರಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ಕಟ್ಟಲು ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.

ಸಮಾಜ ಸೇವಕಿ ರೇಖಾ ಲೋಕೇಶ್ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ತಮ್ಮ ಶಕ್ತಿಯುತ ವ್ಯಕ್ತಿತ್ವದ ಮೂಲಕ ಪ್ರಭಾವ ಪೂರ್ಣ ಮಾತುಗಳ ಮೂಲಕ ಯುವಕರಲ್ಲಿ ನವೋತ್ಸಾಹವನ್ನು ಕೆರಳಿಸಿದರು ಎಂದು ಹೇಳಿದರು.

ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ ಗುರೂಜಿ ಮಾತನಾಡಿ, ಇಂದು ನಮ್ಮ ಯುವಜನರಲ್ಲಿ ಉತ್ತಮ ವಿಚಾರಧಾರೆಗಳು ಕಡಿಮೆಯಾಗುತ್ತಿವೆ. ಯುವಜನತೆ ತಪ್ಪುದಾರಿ ಹಿಡಿಯುತ್ತಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಯುವಜನತೆ ವಿವೇಕಾನಂದರ ತತ್ವಗಳನ್ನು ಅನುಸರಿಸಬೇಕು ಎಂದು ಹೇಳಿದರು.

ಭಾವಿಪ ಅಧ್ಯಕ್ಷ ವಸಂತ್ ಕುಮಾರ್ ಅಧ್ಯಕ್ಷತೆವಹಿಸಿದ್ದರು. ನಗರಸಭಾ ಸದಸ್ಯೆ ಸುಮಾ ರವೀಶ್, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಸಿಂ.ಲಿಂ. ನಾಗರಾಜು, ಶಿಕ್ಷಣಾಧಿಕಾರಿ ಶಿವಪ್ಪ, ಭಾವಿಪ ಪ್ರಾಂತ ಸಂಚಾಲಕ ಗೋವಿಂದಯ್ಯ, ಖಜಾಂಚಿ ತಿಪ್ರೇ ಗೌಡ, ಮುಖಂಡ ವಿ.ಟಿ. ರಮೇಶ್, ಉಪನ್ಯಾಸಕ ಶಿವರಾಮ ಭಂಡಾರಿ, ಪದಾಧಿಕಾರಿಗಳಾದ ಬೆಸ್ಕಾಂ ಶಿವಲಿಂಗಯ್ಯ, ಕೃಷ್ಣಕುಮಾರ್, ತೊರೆ ಹೊಸೂರು ರಂಗಸ್ವಾಮಿ ಹಾಜರಿದ್ದರು.

ಭಾವಿಪ ಪತ್ರಿಕಾ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ ನಿರೂಪಿಸಿದರು. ಕಾರ್ಯದರ್ಶಿ ಬಿ.ಎನ್. ಕಾಡಯ್ಯ ಸ್ವಾಗತಿಸಿದರು. ಪ್ರಾಂತ ಸಂಚಾಲಕ ಗುರುಮಾದಯ್ಯ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಕರಿಯಪ್ಪ ವಂದಿಸಿದರು.

ನಿವೃತ್ತ ಉಪನ್ಯಾಸಕ ಡಿ. ಪುಟ್ಟಸ್ವಾಮಿಗೌಡ, ಪ್ರಾಂಶುಪಾಲ ಸುರೇಶ್, ಸಂಗೀತ ಶಿಕ್ಷಕಿ ಚಂದ್ರಿಕಾ ಗೀತ ಗಾಯನ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.