ADVERTISEMENT

ಪೌರ ಕಾರ್ಮಿಕರ ಮೌನ ಹೋರಾಟ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 4:52 IST
Last Updated 13 ಜೂನ್ 2021, 4:52 IST
ಚನ್ನಪಟ್ಟಣದಲ್ಲಿ ಪೌರ ಕಾರ್ಮಿಕರು ಪೌರಾಯುಕ್ತ ಶಿವನಾಂಕರಿಗೌಡಗೆ ಮನವಿ ಪತ್ರ ನೀಡಿದರು
ಚನ್ನಪಟ್ಟಣದಲ್ಲಿ ಪೌರ ಕಾರ್ಮಿಕರು ಪೌರಾಯುಕ್ತ ಶಿವನಾಂಕರಿಗೌಡಗೆ ಮನವಿ ಪತ್ರ ನೀಡಿದರು   

ಚನ್ನಪಟ್ಟಣ: ರಾಮನಗರದಲ್ಲಿ ಮ್ಯಾನ್‌ಹೋಲ್‌ನಲ್ಲಿ ಮೃತಪಟ್ಟ ಕಾರ್ಮಿಕರ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಪಟ್ಟಣದ ಪೌರ ಕಾರ್ಮಿಕರು ಶುಕ್ರವಾರ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಮೌನ ಪ್ರತಿಭಟನೆ ನಡೆಸಿದರು.

ರಾಮನಗರದ 31ನೇ ವಾರ್ಡಿನಲ್ಲಿ ಮ್ಯಾನ್‌ಹೋಲ್ ಕಾಮಗಾರಿ ನಿರ್ವಹಿಸುವ ವೇಳೆ ಮೂರು ಮಂದಿ ಪೌರ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇಂತಹ ದುರ್ಘಟನೆ ರಾಜ್ಯದಲ್ಲಿ ಮತ್ತೆ ಎಲ್ಲೂ ಮರುಕಳಿಸಬಾರದು. ಆಡಳಿತ ವರ್ಗ ಯಾವುದೇ ಮುನ್ನೆಚ್ಚರಿಕೆ ವಹಿಸದ ಕಾರಣ ಪೌರ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ದೂರಿದರು.

ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಇದೇ ರೀತಿ ಸುಮಾರು 85 ಪೌರ ಕಾರ್ಮಿಕರು ಸಾವನ್ನಪ್ಪಿದ್ದಾರೆ. ರಾಜ್ಯದೆಲ್ಲೆಡೆ ಪೌರ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಹಾಗೆಯೇ ಬಾಕಿ ಉಳಿದಿರುವ ಪೌರ ಕಾರ್ಮಿಕರ ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಜಾರಿಗೊಳಿಸಬೇಕು. ತ್ಯಾಜ್ಯ ಸಾಗಿಸುವ ವಾಹನಗಳ ಚಾಲಕರು, ವಾಟರ್‌ಮನ್, ಡಾಟಾ ಆಪರೇಟರ್‌ಗಳಿಗೆ ಸಕಾಲಕ್ಕೆ ಸೂಕ್ತ ವೇತನ ನೀಡುತ್ತಿಲ್ಲ. ಈ ನೌಕರರಿಗೆ ತಕ್ಷಣ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಪೌರಾಯುಕ್ತ ಶಿವನಾಂಕರಿಗೌಡಗೆ ಮನವಿ ಪತ್ರ ನೀಡಿದರು. ಸಂಘದ ಅಧ್ಯಕ್ಷ ಮಹೇಂದ್ರ, ಪೌರ ಕಾರ್ಮಿಕರಾದ ಮೂರ್ತಿ, ಬಾಲು, ರಾಮಚಂದ್ರು, ಶಿವಕುಮಾರ್, ಮಂಜುಳಾ, ನಿಂಗಮ್ಮ, ಪಾರ್ವತಮ್ಮ, ಶ್ರೀನಿವಾಸ, ಆನಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.