ADVERTISEMENT

ರಾಮನಗರ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳತ್ತ ಪೋಷಕರ ಒಲವು

ಆರ್.ಜಿತೇಂದ್ರ
Published 23 ನವೆಂಬರ್ 2021, 7:47 IST
Last Updated 23 ನವೆಂಬರ್ 2021, 7:47 IST
ಮಾಗಡಿ ತಾಲ್ಲೂಕಿನ ಶ್ರೀಗಿರಿಪುರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಕ್ಕಳಿಗೆ ನಿರ್ಮಿಸಿರುವ ಶೆಟಲ್‌ ಬ್ಯಾಡ್ಮಿಂಟನ್‌ ಕೋರ್ಟ್‌
ಮಾಗಡಿ ತಾಲ್ಲೂಕಿನ ಶ್ರೀಗಿರಿಪುರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಕ್ಕಳಿಗೆ ನಿರ್ಮಿಸಿರುವ ಶೆಟಲ್‌ ಬ್ಯಾಡ್ಮಿಂಟನ್‌ ಕೋರ್ಟ್‌   

ರಾಮನಗರ: ವರ್ಷ ಕಳೆದಂತೆಲ್ಲ ಪೋಷಕರಿಗೆ ಖಾಸಗಿ ಶಾಲೆಗಳ ಮೇಲಿನ ಮೋಹ ಕಡಿಮೆ ಆಗತೊಡಗಿದ್ದು, ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ಈ ಶಾಲೆಗಳಲ್ಲಿ ಮಕ್ಕಳ ದಾಖಲಾಗಿ ಗಣನೀಯವಾಗಿ ಏರುತ್ತಿದೆ.

ಕಳೆದ ವರ್ಷ ಕೋವಿಡ್ ಕಾರಣಕ್ಕೆ ಖಾಸಗಿ ಶಾಲೆಗಳ ಶುಲ್ಕ ಕಟ್ಟಲು ಸಾಕಷ್ಟು ಪೋಷಕರು ಪರದಾಡಿದ್ದರು. ಇದರಿಂದಾಗಿ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದರು. ಜೊತೆಗೆ ಈಶಾಲೆಗಳಲ್ಲಿನ ಮೂಲ ಸೌಕರ್ಯವೂ ಹೆಚ್ಚುತ್ತಿರುವುದು ಮಕ್ಕಳು ಆಕರ್ಷಿತರಾಗಲು ಕಾರಣ ಆಗಿದೆ.

ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಷ್ಟರ ಮಟ್ಟಿಗೆ ಬೆಳೆಯುತ್ತಿವೆ. ರಾಜ್ಯ ಸರ್ಕಾರ ಕರ್ನಾಟಕ ಪಬ್ಲಿಕ್‌ ಶಾಲೆಗಳ (ಕೆಪಿಎಸ್‌) ಮೂಲಕ ಸರ್ಕಾರಿ ಶಾಲೆಗಳಲ್ಲಿಯೇ ಮಕ್ಕಳಿಗೆ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಆರಂಭಿಸಿದೆ. ಇದರಿಂದ ಇಂಗ್ಲಿಷ್‌ ಮಾಧ್ಯಮದ ಬಗ್ಗೆ ಮೋಹ ಹೊಂದಿರುವ ಪೋಷಕರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆ ಬಿಡಿಸಿ ಈ ಶಾಲೆಗಳಲ್ಲಿ ದಾಖಲು ಮಾಡುತ್ತಿದ್ದಾರೆ. ಈ ವರ್ಷ ಜಿಲ್ಲೆಯ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ನಿರೀಕ್ಷೆಗೂ ಮೀರಿ ದಾಖಲಾತಿ ಆಗಿದೆ.

ADVERTISEMENT

ಸಂಘ ಸಂಸ್ಥೆಗಳ ಕೊಡುಗೆ: ಅನೇಕ ಸಂಘ–ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದು, ಮೂಲ ಸೌಕರ್ಯ ಕಲ್ಪಿಸಿವೆ. ಟೊಯೊಟಾ ಸಂಸ್ಥೆ ಇಚೆಗೆ ರಾಮನಗರದ ಜಿಕೆಎಂಪಿಎಸ್ ಶಾಲೆಗೆ ಬೃಹತ್‌ ಕಟ್ಟಡವನ್ನೇ ಕಟ್ಟಿಸಿಕೊಟ್ಟಿದೆ. ಇನ್ನೂ ಹಲವು ಶಾಲೆಗಳಿಗೆ ದಾನಿಗಳು ಉದಾರ ಕೊಡುಗೆ ನೀಡಿದ್ದಾರೆ.

324 ಶಾಲೆಗಳಲ್ಲಿ ಏರಿಕೆ: ಈ ವರ್ಷ ಜಿಲ್ಲೆಯ ಒಟ್ಟು 324 ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಏರಿಕೆ ಆಗಿದೆ. ಅದರಲ್ಲೂ ಕೆಲವು ಶಾಲೆಗಳಲ್ಲಿ ಸಂಖ್ಯೆ ಸಾಕಷ್ಟು ಹೆಚ್ಚಳ ಆಗಿದೆ. ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ 263 ವಿದ್ಯಾರ್ಥಿಗಳು ದಾಖಲಾಗಿದ್ದು, ಈ ವರ್ಷ ಈ ಸಂಖ್ಯೆ 341ಕ್ಕೆ ಏರಿಕೆ ಆಗಿದೆ. ಹಾರೋಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿನ ಮಕ್ಕಳ ಸಂಖ್ಯೆ 460ರಿಂದ 558ಕ್ಕೆ ಏರಿಕೆ ಆಗಿದೆ. ಕುದೂರು ಕೆಪಿಎಸ್ ಶಾಲೆಯಲ್ಲೂ ವಿದ್ಯಾರ್ಥಿಗಳ ಸಂಖ್ಯೆ 272ರಿಂದ 325ಕ್ಕೆ ಏರಿದೆ.
ರಾಮನಗರ ಟೌನ್‌ನಲ್ಲಿರುವ ಜಿಕೆಎಂಪಿಎಸ್ ಶಾಲೆಯಲ್ಲಿ ಈಚೆಗಷ್ಟೇ ಹೊಸ ಕಟ್ಟಡದೊಂದಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಇಲ್ಲಿ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ 481ರಿಂದ 583ಕ್ಕೆ ಏರಿಕೆ ಕಂಡಿದೆ.

ನರೇಗಾ ಅಡಿ ಅಭಿವೃದ್ಧಿ: ಜಿಲ್ಲಾ ಪಂಚಾಯಿತಿಯು ನರೇಗಾ ಯೋಜನೆಯನ್ನು ಬಳಸಿಕೊಂಡು ಸರ್ಕಾರಿ ಶಾಲೆಗಳಿಗೆ ಹೊಸ ರೂಪ ನೀಡುತ್ತಿದೆ. ಕೊಠಡಿ, ಕಾಂಪೌಂಡ್ ಸೇರಿದಂತೆ ಹಲವು ಸೌಕರ್ಯ ನಿರ್ಮಿಸಲಾಗಿದೆ. ಈಚೆಗೆ ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ವ್ಯವಸ್ಥಿತವಾದ ಆಟದ ಮೈದಾನ ನಿರ್ಮಾಣಗೊಂಡಿದೆ.

ನೀಗಲಿ ಶಿಕ್ಷಕರ ಕೊರತೆ

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿದ್ದೇ ಆದಲ್ಲಿ ಇನ್ನಷ್ಟು ಗುಣಮಟ್ಟದ ಶಿಕ್ಷಣ ದೊರೆಯುವುದು ಸಾಧ್ಯವಾಗಲಿದೆ.
ಜಿಲ್ಲೆಯಲ್ಲಿ 1ರಿಂದ 10ನೇ ತರಗತಿ ವರೆಗೆ ಸದ್ಯ 877 ಶಿಕ್ಷಕರ ಕೊರತೆ ಇದೆ. ಪ್ರಾಥಮಿಕ ಶಾಲೆಗಳಿಗೆ 686 ಹಾಗೂ ಪ್ರೌಢಶಾಲೆಗಳಿಗೆ 191 ಶಿಕ್ಷಕರು ಬೇಕಿದ್ದಾರೆ. ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದೆಯಾದರೂ ಅದರಿಂದ ಸಮಸ್ಯೆ ಬಗೆಹರಿಯುತ್ತಿಲ್ಲ. 66 ಶಾಲೆಗಳಿಗೆ ಖಾಯಂ ಶಿಕ್ಷಕರೇ ಇಲ್ಲದಾಗಿದೆ. ಹೀಗಾಗಿ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಶಿಕ್ಷಕರ ನೇಮಕಾತಿ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.