ADVERTISEMENT

ಕ್ಷೇತ್ರದ ಅಭಿವೃದ್ಧಿಗೆ ಕಾಳಜಿ ಇದೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 14:05 IST
Last Updated 27 ಜನವರಿ 2020, 14:05 IST
ಚನ್ನಪಟ್ಟಣ ತಾಲ್ಲೂಕಿನಲ್ಲಿ ಶಾಸಕ ಎಚ್.ಡಿ.ಕುಮಾರಸ್ವಾಮಿ ಅವರು ಜನಸಂಪರ್ಕ ಸಭೆ ನಡೆಸಿ ಜನರ ಅಹವಾಲು ಸ್ವೀಕರಿಸಿದರು
ಚನ್ನಪಟ್ಟಣ ತಾಲ್ಲೂಕಿನಲ್ಲಿ ಶಾಸಕ ಎಚ್.ಡಿ.ಕುಮಾರಸ್ವಾಮಿ ಅವರು ಜನಸಂಪರ್ಕ ಸಭೆ ನಡೆಸಿ ಜನರ ಅಹವಾಲು ಸ್ವೀಕರಿಸಿದರು   

ಚನ್ನಪಟ್ಟಣ: ‘ತಾಲ್ಲೂಕಿನ ಸಮಸ್ಯೆಗಳ ಸಂಪೂರ್ಣ ಮಾಹಿತಿ ಇದ್ದು, ಕ್ಷೇತ್ರದ ಅಭಿವೃದ್ಧಿ ಬಗ್ಗೆ ನನಗೆ ಕಾಳಜಿ ಇದೆ’ ಎಂದು ಶಾಸಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ತಾಲ್ಲೂಕಿನಲ್ಲಿ ಎರಡು ದಿನಗಳ ಕಾಲ ಜನಸಂಪರ್ಕ ಸಭೆ ನಡೆಸುತ್ತಿರುವ ಅವರು, ಸೋಮವಾರ ತಾಲ್ಲೂಕಿನ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಾನು ಬರದಿದ್ದರೂ ಅಭಿವೃದ್ಧಿ ಕೆಲಸಗಳಿಗೆ ತಡೆ ಇಲ್ಲ. ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವ ಅವಶ್ಯ ಇಲ್ಲ. ಫೆಬ್ರುವರಿಯಲ್ಲಿ ಮತ್ತೆ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತೇನೆ’ ಎಂದರು.

ADVERTISEMENT

ಹಿಂದಿನ ಶಾಸಕರ ರೀತಿ ಫೋಟೊಗೆ ಫೋಸ್ ಕೊಡುವ ಜಾಯಮಾನ ನನ್ನದಲ್ಲ. ಪ್ರತಿಯೊಂದಕ್ಕೂ ಫೋಟೊ ತೆಗೆಸಿಕೊಳ್ಳುವ ಅವಶ್ಯ ನನಗಿಲ್ಲ. ಇಡೀ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನನಗೆ ಗಮನವಿದೆ ಎಂದು ಯೋಗೇಶ್ವರ್ ಹೆಸರೇಳದೆ ಟೀಕಿಸಿದರು.

‘ಜನರ ಸಮಸ್ಯೆ ಆಲಿಸಲು ಕ್ಷೇತ್ರದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳನ್ನು ಕೇಳಿ ಅವರಿಗೆ ಪರಿಹಾರ ನೀಡಲು ಬಂದಿದ್ದೇನೆ. ಇಲ್ಲಿಯವರೆಗೆ ಕ್ಷೇತ್ರಕ್ಕೆ ಬರಲು ಆಗಿರಲಿಲ್ಲ. ಮುಂದಿನ ದಿನಗಳಲ್ಲಿ ಆಗಾಗ್ಗೆ ಕ್ಷೇತ್ರದ ಪ್ರವಾಸ ಕೈಗೊಂಡು ಸಮಸ್ಯೆಗಳನ್ನು ಆಲಿಸುತ್ತೇನೆ’ ಎಂದು ಹೇಳಿದರು.

ತಾಲ್ಲೂಕಿನ ಹನುಮಂತಪುರ, ಚಂದ್ರಗಿರಿದೊಡ್ಡಿ, ಕರಿಕಲ್ ದೊಡ್ಡಿ, ವಂದಾರಗುಪ್ಪೆ, ಪೌಳಿದೊಡ್ಡಿ, ಚೋಳಮಾರನಹಳ್ಳಿ, ಮಂಗಾಪಟ್ಟಣದೊಡ್ಡಿ, ಕನ್ನಮಂಗಲ, ಅಂಗರಹಳ್ಳಿ, ಗೊಲ್ಲಹಳ್ಳಿದೊಡ್ಡಿ, ಎಲೆಹೊಸಹಳ್ಳಿ, ದೇವರಹೊಸಹಳ್ಳಿ, ಪಾರೆದೊಡ್ಡಿ, ರಾಂಪುರ, ಕೋಮನಹಳ್ಳಿಗಳಲ್ಲಿ ಕುಮಾರಸ್ವಾಮಿ ಜನಸಂಪರ್ಕ ಸಭೆ ನಡೆಸಿದರು.

ಅವರು ಹೋದ ಕಡೆಯೆಲ್ಲೆಲ್ಲಾ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಿದರು. ಜನರ ಸಮಸ್ಯೆಗಳನ್ನು ಕೇಳಿದ ಅವರು ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಯಮುತ್ತು, ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಸೇರಿದಂತೆ ಹಲವು ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.