ಹಾರೋಹಳ್ಳಿ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡಗಳು ಹೆಚ್ಚಾಗಿದ್ದು, ಆದರೆ ಅದನ್ನು ತಡೆಯಲು ಸುಸಜ್ಜಿತ ಅಗ್ನಿಶಾಮಕ ಠಾಣೆ ಸನಿಹದಲ್ಲೇ ಇಲ್ಲದೆ ಜನರಲ್ಲಿ ಆತಂಕ ಕಾಡುತ್ತಿದೆ.
400ಕ್ಕೂ ಅಧಿಕ ಕೈಗಾರಿಕೆಗಳಿರುವ ಹಾರೋಹಳ್ಳಿಯಲ್ಲಾಗಲಿ, ಬಿಡದಿಯಲ್ಲಾಗಲಿ ಅಗ್ನಿಶಾಮಕ ಠಾಣೆಯೇ ಇಲ್ಲವಾಗಿದೆ. ಏನೇ ಅಗ್ನಿ ಅವಘಡ ಸಂಭವಿಸಿದರೂ ರಾಮನಗರ ಇಲ್ಲವೇ ಕನಕಪುರದಿಂದ ಅಗ್ನಿಶಾಮಕ ಸಿಬ್ಬಂದಿ ಬರಬೇಕಾಗಿದೆ. ಹೆಚ್ಚುವರಿ ನೆರವು ಬೇಕಾದರಂತೂ ಬೆಂಗಳೂರಿನಿಂದಲೇ ಬರಬೇಕಿದೆ.
ತಿಂಗಳ ಅಂತರದಲ್ಲಿ ಟೈರ್ ಕಾರ್ಖಾನೆ ಮತ್ತು ತ್ಯಾಜ್ಯ ನಿರ್ವಹಣೆ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟ ಆಗಿದೆ. ಇಷ್ಟೆಲ್ಲಾ ಅವಾಂತರ ಆದರೂ ಕೂಡ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿರುವುದು ದುರಂತವೇ ಸರಿ
ಜನತೆ ಆರೋಗ್ಯದ ಮೇಲೆ ಪರಿಣಾಮ: ಕೈಗಾರಿಕೆ ಪ್ರದೇಶದಲ್ಲಿ ಸಂಭವಿಸುವ ಅಗ್ನಿ ದುರಂತಗಳಿಂದ ಕಾರ್ಖಾನೆಯೊಳಗೆ ಸಂಗ್ರಹಿಡಲಾಗಿದ್ದ ವಿಷಕಾರಕ ರಾಸಾಯನಿಕಗಳು ಉರಿದು, ವಿಷಾನಿಲ ಪರಿಸರ ಸೇರಿ ಸುತ್ತಮುತ್ತಲಿನ ಜನತೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಸುತ್ತಮುತ್ತ 10ಕ್ಕೂ ಹೆಚ್ಚು ಹಳ್ಳಿಗಳಿವೆ. ಘಟಕದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದರೂ ಮೊದಲು ಪರಿಣಾಮ ಹಳ್ಳಿಗಳ ಮೇಲೆ ಬೀರುವಂತಾಗಿದೆ.
ಇಚ್ಛಾಶಕ್ತಿ ಕೊರತೆ: ಕಳೆದ ಎರಡು – ಮೂರು ವರ್ಷಗಳ ಹಿಂದೆಯೇ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆ ಮಂಜೂರು ಮಾಡಿ, ಆದೇಶ ಹೊರಡಿಸಲಾಗಿದೆ. ಆದರೆ ಇದುವರೆಗೂ ಜಾಗ ಗುರುತಿಸಿರುವುದು ಬಿಟ್ಟರೆ, ಅನುದಾನ ನೀಡಿ ಠಾಣೆ ನಿರ್ಮಿಸಿ, ಅವಘಡ ಸಂಭವಿಸದಂತೆ ಎಚ್ಚರಿಕೆ ತಗೆದುಕೊಳ್ಳುವ ಇಚ್ಛಾಶಕ್ತಿ ಕೊರತೆ ಇದೆ.
ಹಾರೋಹಳ್ಳಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣವಾಗಿದ್ದರೆ ಅಗ್ನಿ ಅವಘಡ ಸಂಭವಿಸಿದಾಗ ಶೀಘ್ರ ಬೆಂಕಿ ನಂದಿಸಿ ಹೆಚ್ಚು ಅನಾಹುತ ಆಗದಂತೆ ತಪ್ಪಿಸಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಠಾಣೆ ನಿರ್ಮಾಣಕ್ಕೆ ಮನವಿನೀಡಿದರೂ ಪ್ರಯೋಜನವಿಲ್ಲ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಇದುವರೆಗೂ ಜಾಗ ಗುರುತಿಸಿದೆಯೇ ಹೊರತು ನಿರ್ಮಾಣ ಮಾಡಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗುವುದುಪ್ರಮೋದ್ ತಾಂತ್ಯ ಅಧ್ಯಕ್ಷರು ಹಾರೋಹಳ್ಳಿ ಕೈಗಾರಿಕೋದ್ಯಮಿಗಳ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.