
ಚನ್ನಪಟ್ಟಣ: ಕನ್ನಡಿಗರು ಎಲ್ಲ ಸ್ಥಳಗಳಲ್ಲಿಯೂ ಕನ್ನಡ ಭಾಷೆ ಬಳಕೆ ಬಗೆಗೆ ಹಿಂಜರಿಕೆ ಮನೋಭಾವ ತೋರಬಾರದು. ತೋರಿಕೆ ಪ್ರವೃತ್ತಿ ನಮ್ಮ ಸಂಸ್ಕೃತಿ ವಿನಾಶಕ್ಕೆ ಕಾರಣ ಎಂದು ಸಾಹಿತಿ ಡಾ.ವಿಜಯ್ ರಾಂಪುರ ಅಭಿಪ್ರಾಯಪಟ್ಟರು.
ನಗರದ ಕೋಟೆ ಜ್ಞಾನ ಸರೋವರ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ಕನ್ನಡ ಭಾಷೆ ಮತ್ತು ಸಂಸ್ಕೃತಿ ಇಡೀ ವಿಶ್ವದಲ್ಲೇ ವಿಶೇಷತೆ ಉಳಿಸಿಕೊಂಡು ಬಂದಿದೆ. ಆಂಗ್ಲ ಭಾಷಾ ವ್ಯಾಮೋಹಕ್ಕೆ ಒಳಗಾಗಿ ಮಾತೃ ಭಾಷೆ ತಾತ್ಸಾರ ಸಲ್ಲದು. ಇದರಿಂದ ಭವಿಷ್ಯದಲ್ಲಿ ಕನ್ನಡಿಗರಲ್ಲಿ ಅಭಿಮಾನಕ್ಕೆ ತೊಡಕಾಗಬಹುದು. ಕನ್ನಡಿಗರು ಕನ್ನಡಪರ ಚಟುವಟಿಕೆ ಬೆಳೆಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಕನ್ನಡ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಪ್ರಾಂಶುಪಾಲರಾದ ಬಿ.ಎಸ್.ಹೇಮಲತಾ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ. ಅದು ಆಹಾರ, ಉಡುಗೆ ತೊಡುಗೆ, ಸಂಸ್ಕೃತಿ ಮತ್ತು ಆಚರಣೆಯಾಗಿದೆ. ಕನ್ನಡ ಭಾಷೆ ಉಳಿವಿಗೆ ಯುವಜನರು ಟೊಂಕ ಕಟ್ಟಿ ನಿಲ್ಲಬೇಕು ಎಂದರು.
ಹಿರಿಯ ಜಾನಪದ ಗಾಯಕ ಚೌ.ಪು.ಸ್ವಾಮಿ ಕನ್ನಡ ಗೀತೆಗಳ ಗಾಯನ ನಡೆಸಿಕೊಟ್ಟರು. ವಿದ್ಯಾರ್ಥಿಗಳು ವಿವಿಧ ವೇಷಭೂಷಣ ತೊಟ್ಟು ಗಮನ ಸೆಳೆದರು. ಜೊತೆಗೆ ಕನ್ನಡ ನಾಡು ನುಡಿ ಅಭಿಮಾನ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕರಾದ ಆದರ್ಶಕುಮಾರ್, ಹೊಳಸಾಲಯ್ಯ, ಜಾಕೀರ್ ಹುಸೇನ್, ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.