ADVERTISEMENT

ಗ್ರಾಮಸ್ಥರಿಂದ ತಿರುಕಲ್ಯಾಣ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 13:56 IST
Last Updated 12 ಜುಲೈ 2019, 13:56 IST
ಸಂಜೀವರಾಯ ಸ್ವಾಮಿ
ಸಂಜೀವರಾಯ ಸ್ವಾಮಿ   

ಚನ್ನಪಟ್ಟಣ: ಇತಿಹಾಸ ಹಾಗೂ ಪುರಾಣಪ್ರಸಿದ್ಧ ದೇವರಹೊಸಹಳ್ಳಿ ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಶ್ರೀಸಂಜೀವರಾಯಸ್ವಾಮಿ ತೋಮಾಲ ಸೇವೆ, ವೈಕುಂಠ ಸೇವಾದರ್ಶನ ಶನಿವಾರ (ಜು.13) ನಡೆಯಲಿದೆ.

ಆಷಾಢ ಮಾಸದ ಜಾತ್ರಾಮಹೋತ್ಸವ ಎಂದೇ ಪ್ರಸಿದ್ಧಿ ಹೊಂದಿರುವ ದೇವರಹೊಸಹಳ್ಳಿ ಬ್ರಹ್ಮರಥೋತ್ಸವ ಅಂಗವಾಗಿ ಈಗಾಗಲೇ ದೇವತಾ ಕಾರ್ಯಗಳು ಆರಂಭವಾಗಿವೆ. ಗುರುವಾರ ಅಭಿಷೇಕ, ಮಹಾಮಂಗಳಾರತಿ, ಸಾಯಂಕಾಲ ಅಂಕುರಾರ್ಪಣ, ರಕ್ಷಾಬಂಧನ, ಪ್ರಾಕಾರೋತ್ಸವ, ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಕನಕಸ್ವಾಮಿ ವೃಂದದವರಿಂದ ಸಂಗೀತ ಕಾರ್ಯಕ್ರಮ, ಉತ್ಸವ, ಧ್ವಜಾರೋಹಣ, ನಂತರ ದೇವರಹೊಸಹಳ್ಳಿ ಗ್ರಾಮಸ್ಥರಿಂದ ಕಾಶಿಯಾತ್ರೆ ಉತ್ಸವ, ತಿರುಕಲ್ಯಾಣ ಮಹೋತ್ಸವ ನಡೆಯಿತು. .

ಜುಲೈ13ರ ಶನಿವಾರ ಬೆಳಿಗ್ಗೆ ಸಂಜೀವರಾಯಸ್ವಾಮಿ ವೈಕುಂಠ ಸೇವಾದರ್ಶನ, ತೋಮಾಲ ಸೇವೆ, ಮಹಾಮಂಗಳಾರತಿ, ರಾಷ್ಟಾಶೀರ್ವಾದ, ಪ್ರಸಾದ ವಿನಿಯೋಗ, ವಿಮಾನ ಗೋಪುರಕ್ಕೆ ವಿದ್ಯುತ್ ಲಕ್ಷದೀಪೋತ್ಸವ, ಪುಷ್ಪಾಲಂಕಾರ, ನಂತರ ಉಷಃಕಾಲ ಸುಪ್ರಭಾತ, ವಿಶ್ವರೂಪ ದರ್ಶನ ಸೇವೆ, ನಂತರ ತಿರುಪ್ಪಾವಡೆ ಸೇವೆ, ಗೋವು, ಅಶ್ವ, ಗಜಪೂಜೆ ನಡೆಯಲಿದೆ.

ADVERTISEMENT

ಮಧ್ಯಾಹ್ನ 1.30ರಿಂದ 2.30ರವರೆಗೆ ಸರ್ಕಾರಿ ಸೇವೆ ಬ್ರಹ್ಮರಥೋತ್ಸವ ನಡೆಯಲಿದೆ. ಜನಪ್ರತಿನಿಧಿಗಳು, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು,ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಭಾಗವಹಿಸಲಿದ್ದಾರೆ.

ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಡೋಲೋತ್ಸವ ಮತ್ತು ಮಂದಹಾಸ ದೀಪೋತ್ಸವ, ರಾತ್ರಿ ತೆಪ್ಪೋತ್ಸವ ಮತ್ತು ವರ್ಣರಂಜಿತ ಬಾಣ ಬಿರುಸುಗಳ ಪ್ರದರ್ಶನ, ನಂತರ ವಿದ್ಯುತ್ ದೀಪದೊಂದಿಗೆ ಚಂದ್ರಮಂಡಲ ಪಲ್ಲಕ್ಕಿ ಉತ್ಸವ, ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ.

ಜುಲೈ 4ರ ಭಾನುವಾರ ಬೆಳಿಗ್ಗೆ ಶಾಂತಿಹೋಮ, ಕಳಸಪೂಜೆ, ಅಷ್ಟೋತ್ತರ ಶತ, ಅಮೃತ ಕಲಶ ಪೂಜೆ, ಮಹಾಕುಂಭಾಭಿಷೇಕ, ನೈವೇದ್ಯ, ಸಾಯಂಕಾಲ ಪೂರ್ಣಾಹುತಿ, ಧ್ವಜಾವರೋಹಣ, ಅಷ್ಟಾವಧಾನ ಸೇವೆ, ರಾತ್ರಿ ಪುಷ್ಪಯಾಗ ಜರುಗಲಿದೆ. ಜುಲೈ 15ರ ಸೋಮವಾರ ಬೆಳಿಗ್ಗೆ ಅಭಿಷೇಕ ಮತ್ತು ಮಹಾಮಂಗಳಾರತಿ ರಾತ್ರಿ ಶಯನೋತ್ಸವ, ನಂತರ ನಾದಸ್ವರ ಕಾರ್ಯಕ್ರಮ ನೆರವೇರಲಿವೆ.

ಈ ಗ್ರಾಮ ಸ್ಥಳೀಯ ಪಾಳೇಗಾರ ಜಗದೇವರಾಯನ ಆಡಳಿತದಲ್ಲಿತ್ತು. ಪಾಳೇಗಾರ ಬೇಟೆ ಆಡಲು ಕಾಡಿಗೆ ಬರುತ್ತಿದ್ದುದ್ದು ವಾಡಿಕೆ. ಆಗ ಸಂಜೀವರಾಯಸ್ವಾಮಿ ಮೂರ್ತಿಯನ್ನು ಕಂಡು ಆಕರ್ಷಿತನಾದ ಪಾಳೇಗಾರ, ಅಲ್ಲೊಂದು ಗುಡಿ ಕಟ್ಟಿದ ಎಂಬುದು ಅಲ್ಲಿಯ ಇತಿಹಾಸ.

ಜೀವಕಳೆ ತುಂಬಿದಂತಿರುವ ಮೂರ್ತಿಯ ರತ್ನಖಚಿತ ನೇತ್ರಗಳು, ಪಚ್ಚೆ ವೈಡೂರ್ಯದ ರಾಮತಿಲಕ, ನವರತ್ನ ಖಚಿತ ಸ್ವರ್ಣ ಕರ್ಣ ಮಂಡಲಗಳು, ನಳಿನಾಕ್ಷಿ ಮಾಲೆ, ಅಮೃತಾನುಗ್ರಹ ಅಭಯಹಸ್ತ, ಅಜಾನುಬಾಹು ಆಂಜನೇಯ ಮೂರ್ತಿ ನೋಡುವ ಭಕ್ತರನ್ನು ಆಕರ್ಷಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.