ADVERTISEMENT

ಮಾದರಿ ಜಿಲ್ಲಾ ಕೇಂದ್ರವಾಗಿ ಅಭಿವೃದ್ಧಿ: ಡಿಸಿಎಂ ಅಶ್ವತ್ಥನಾರಾಯಣ

ನಗರಸಭೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 4:37 IST
Last Updated 23 ಏಪ್ರಿಲ್ 2021, 4:37 IST
ರಾಮನಗರದಲ್ಲಿ ಗುರುವಾರ ಪ್ರಚಾರದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿದರು
ರಾಮನಗರದಲ್ಲಿ ಗುರುವಾರ ಪ್ರಚಾರದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿದರು   

ರಾಮನಗರ: ಕೋವಿಡ್ ನಡುವೆಯೂ ನಗರಸಭೆ ಚುನಾವಣೆ ಪ್ರಚಾರ ಜೋರಾಗಿದ್ದು, ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ‌ಅಶ್ವತ್ಥನಾರಾಯಣ ವಿವಿಧ ವಾರ್ಡ್‌ಗಳಲ್ಲಿ ಮಿಂಚಿನ ಪ್ರಚಾರ ನಡೆಸಿದರು.

ಬೆಳಿಗ್ಗೆಯಿಂದಲೇ ಪ್ರಚಾರಕ್ಕಿಳಿದ ಅವರು, ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸಿದರು. ಕೋವಿಡ್ ಸೋಂಕಿನ ಕಾರಣಕ್ಕೆ ಯಾವುದೇ ಸಭೆಗಳನ್ನು ನಡೆಸದೆ ಮನೆ ಮನೆ ಪ್ರಚಾರಕ್ಕೆ ಸಚಿವರು ಒತ್ತು ಕೊಟ್ಟರು.

ಪ್ರಚಾರದ ವೇಳೆ ಮಾತನಾಡಿದ ಅಶ್ವತ್ಥನಾರಾಯಣ, ‘ರಾಮನಗರ ಸಮಸ್ಯೆಗಳ ಆಗರವಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಈ ಸಮಸ್ಯೆಗಳ ನಿವಾರಣೆಗೆ ಬಿಜೆಪಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ. ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಆಡಳಿತ ನಡೆಸಲು ಅವಕಾಶ ಕೊಟ್ಟರೆ ಇಡೀ ರಾಜ್ಯದಲ್ಲೇ ಮಾದರಿ ಜಿಲ್ಲಾ ಕೇಂದ್ರವನ್ನಾಗಿ ರಾಮನಗರವನ್ನು ರೂಪಿಸಲಾಗುವುದು. ಜನರು ಈ ಸಲ ನಗರಸಭೆಗೆ ಮತ ಹಾಕಲಿದ್ದು, ಮುಂದಿನ ಬಾರಿ ನಗರಪಾಲಿಕೆಗೆ ವೋಟ್‌ ಮಾಡಲಿದ್ದಾರೆ’ ಎಂದರು.

ADVERTISEMENT

ಶಿಕ್ಷಣ, ಮೂಲಸೌಕರ್ಯ, ಉಪನಗರ ರೈಲು, ಉದ್ಯಾನಗಳ ಅಭಿವೃದ್ಧಿ, ಕೆರೆಗಳ ಜೀರ್ಣೋದ್ಧಾರ, ಉತ್ತಮ ರಸ್ತೆಗಳು, ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಪೂರೈಕೆ ಇತ್ಯಾದಿ ಕೆಲಸಗಳನ್ನು ಮಾಡಲಾಗುವುದು. ಇದು ಕೇವಲ ಭರವಸೆ ಮಾತಲ್ಲ. ನಾವು ಸಾಧಿಸಿ ತೋರಿಸುತ್ತೇವೆ ಎಂದರು.

ಉಪನಗರ ರೈಲು ಯೋಜನೆಯಿಂದ ರಾಮನಗರಕ್ಕೆ ಹೆಚ್ಚು ಅನುಕೂಲವಾಗುತ್ತದೆ. ರಾಮನಗರದಿಂದ ನೇರವಾಗಿ ಬೆಂಗಳೂರಿನ 57 ರೈಲು ನಿಲ್ದಾಣಗಳಿಗೆ ತಲುಪಬಹುದು. ಇನ್ನೇನು ಬೆಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರವನ್ನು ಕೆಲವು ದಿನಗಳಲ್ಲಿ ಸ್ವತಂತ್ರ ವಿಶ್ವವಿದ್ಯಾಲಯವನ್ನಾಗಿ ಮಾಡುತ್ತೇವೆ. ಮೆಡಿಕಲ್ ಕಾಲೇಜು‌ ಕೂಡ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.

ಇದುವರೆಗೂ ಕಾಂಗ್ರೆಸ್‌, ಜೆಡಿಎಸ್‌ ಆಡಳಿತ ನಡೆಸಿದ್ದು, ನಗರಸಭೆಯಲ್ಲಿ ಏನೆಲ್ಲ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಸಲ ಬದಲಾವಣೆಗಾಗಿ ಮತ‌ ನೀಡಿ ಎಂದು ಜನರನ್ನು ಕೋರುತ್ತೇನೆ ಎಂದರು.

ಎಲ್ಲೆಲ್ಲಿ ಭೇಟಿ: ಮೊದಲಿಗೆ 31ನೇ ವಾರ್ಡ್ ವ್ಯಾಪ್ತಿಯ ಹನುಮಂತನಗರದ ಮದ್ದೂರು ದೇವಸ್ಥಾನದ ಸಮೀಪ ಡಿಸಿಎಂ ಮತಯಾಚನೆ ಮಾಡಿದರು. ಬಿಜೆಪಿ ಅಭ್ಯರ್ಥಿ ಚೈತ್ರಾ ನರೇಂದ್ರ ಹಾಜರಿದ್ದರು. ಬಳಿಕ ಸಚಿವರು ರಂಗರಾಯನಕೆರೆಗೆ ತೆರಳಿ ಕೆರೆಯನ್ನು ವೀಕ್ಷಣೆ ಮಾಡಿದರು. ಈ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ನಂತರ ರಂಗರಾಯನದೊಡ್ಡಿಗೆ ತೆರಳಿ ಪ್ರಚಾರ ನಡೆಸಿದ ಅವರು, ‘ಈ ಪ್ರದೇಶದ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು. ದಿನದ 24 ಗಂಟೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆ. ಬೀದಿದೀಪ, ನಿವೇಶನಗಳಿಗೆ ಖಾತೆ ಕೊಡಿಸುವ ಕೆಲಸವನ್ನು ಆರು ತಿಂಗಳಲ್ಲಿ ಮಾಡಿಸುತ್ತೇನೆ’ ಎಂದರು.

ಅರ್ಚಕರ ಹಳ್ಳಿಯಲ್ಲಿ ಪ್ರಚಾರ ನಡೆಸಿದ ಅವರು, ಬಳಿಕ 25 ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ‌ಹರೀಶ್ ಹಾಗೂ 26ನೇ ವಾರ್ಡ್‌ನಲ್ಲಿ ಕೃಷ್ಣಪ್ಪ ಪರ ರಸ್ತೆಯಲ್ಲೇ ನಿಂತು ಪ್ರಚಾರ ನಡೆಸಿದರು. 1ನೇ ವಾರ್ಡ್‌ ಚಾಮುಂಡಿಪುರದಲ್ಲಿ ಅಭ್ಯರ್ಥಿ ಸವಿತಾ ನಂದೀಶ್‌ ಪರ ಹಾಗೂ 2ನೇ ವಾರ್ಡ್‌ ಅಂಬೇಡ್ಕರ್‌ ನಗರದಲ್ಲಿ ಸಾವಿತ್ರಮ್ಮ ಪರ ಮತಯಾಚನೆ ಮಾಡಿದರು.

ಬಿಜೆಪಿ‌ ಜಿಲ್ಲಾ ಘಟಕದ ಅಧ್ಯಕ್ಷ ಹುಲವಾಡಿ ದೇವರಾಜು, ಪಕ್ಷದ ಮುಖಂಡರು ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.