ADVERTISEMENT

ಜಂಗಮ ಮಠದ ಸಮಾಧಿ ವಿರೂಪ: ಆರೋಪ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 4:30 IST
Last Updated 7 ಏಪ್ರಿಲ್ 2022, 4:30 IST
ಮಾಗಡಿ ತಾಲ್ಲೂಕಿನ ಬ್ಯಾಲಕೆರೆ ಜಂಗಮ ಮಠದ ಆವರಣದೊಳಗೆ ಇದ್ದ ಲಿಂಗೈಕ್ಯ ಬಸವಲಿಂಗಯ್ಯ ಅವರ ಸಮಾಧಿ ಗದ್ದುಗೆಯನ್ನು ವಿರೂಪಗೊಳಿಸಿರುವುದು
ಮಾಗಡಿ ತಾಲ್ಲೂಕಿನ ಬ್ಯಾಲಕೆರೆ ಜಂಗಮ ಮಠದ ಆವರಣದೊಳಗೆ ಇದ್ದ ಲಿಂಗೈಕ್ಯ ಬಸವಲಿಂಗಯ್ಯ ಅವರ ಸಮಾಧಿ ಗದ್ದುಗೆಯನ್ನು ವಿರೂಪಗೊಳಿಸಿರುವುದು   

ಮಾಗಡಿ: ತಾಲ್ಲೂಕಿನ ಬ್ಯಾಲಕೆರೆ ಜಂಗಮ ಮಠದ ಆವರಣದಲ್ಲಿದ್ದ ಲಿಂಗೈಕ್ಯ ಬಸವಲಿಂಗಯ್ಯ ಅವರ ಗದ್ದುಗೆಯನ್ನು ಸೋಮವಾರ ರಾತ್ರಿ ಕಿತ್ತು ಹಾಕಲಾಗಿದೆ ಎಂದು ಮುಖಂಡ ಮಹದೇವಯ್ಯ ಬಿ. ಆರೋಪಿಸಿದರು.

ಮಠದ ಆವರಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಖರಾಬು ಜಮೀನಿನಲ್ಲಿ 300 ವರ್ಷಗಳ ಹಿಂದೆ ಜಂಗಮ ಮಠ ನಿರ್ಮಿಸಲಾಗಿದೆ. ಮುದ್ದುಲಿಂಗಯ್ಯ, ಸಿದ್ದಲಿಂಗಯ್ಯ, ಗುರುಶಾಂತಯ್ಯ, ಬಸವಲಿಂಗಯ್ಯ ಅವರು ಮಠದ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ನನ್ನ ತಂದೆ ಬಸವಲಿಂಗಯ್ಯ ಬದುಕಿದ್ದಾಗ ನಮ್ಮ ದಾಯಾದಿಗಳು ಮತ್ತು ನಾವು ಒಂದೊಂದು ವರ್ಷದಂತೆ ಜಂಗಮ ಮಠದ ಪೂಜೆ, ಉತ್ಸವಾದಿ ನಡೆಸಿಕೊಂಡು ಹೋಗುವಂತೆ ತಿಳಿಸಿದ್ದರು. ಅವರ ಆದೇಶ ಪಾಲಿಸಿಕೊಂಡು ಬರುತ್ತಿದ್ದೇವೆ’ ಎಂದರು.

ADVERTISEMENT

‘ನಮ್ಮ ದಾಯಾದಿ ಜಯಣ್ಣ ಮತ್ತು ಅವರ ಮಕ್ಕಳು ಏಕಾಏಕಿ ಮಠದ ಆವರಣದಲ್ಲಿದ್ದ ನನ್ನ ತಂದೆಯ ಸಮಾಧಿಯನ್ನು ಕಿತ್ತುಹಾಕಿ ವಿರೂಪಗೊಳಿಸಿದ್ದಾರೆ. ಸಮಾಧಿ ಸ್ಥಳವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಈ ಸಂಬಂಧ ತಹಶೀಲ್ದಾರ್‌ ಮತ್ತು ಪೊಲೀಸರಿಗೆ ದೂರು ನೀಡಿದ್ದೇವೆ. ಈ ಕೃತ್ಯ ಎಸಗಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಅರ್ಚಕ ಚಂದ್ರಶೇಖರಯ್ಯ, ಲಿಂಗೈಕ್ಯ ಬಸವಲಿಂಗಯ್ಯ ಅವರ ಪುತ್ರರಾದ ವೀರುಪಾಕ್ಷಯ್ಯ, ಚಂದ್ರಶೇಖರಯ್ಯ, ಮಹದೇವಯ್ಯ ಕುಟುಂಬದವರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಸಮಾಧಿ ಜಾಗ ನಮಗೆ ಸೇರಿದ್ದು: ‘ಬ್ಯಾಲಕೆರೆ ಸರ್ವೆ ನಂ. 158ರಲ್ಲಿ 21.31 ಎಕರೆ ಜಮೀನಿದೆ. ಈ ಜಮೀನಿನಲ್ಲಿ ಜಂಗಮ ಮಠಕ್ಕೆ 4 ಗುಂಟೆ ದೇವಾಲಯ ಮತ್ತು ಗುಂಟೆ ಕಲ್ಯಾಣಿ ಇದ್ದು, ಮುಜರಾಯಿ ಇಲಾಖೆಗೆ ಸೇರಿದೆ. ನಮಗೆ ಸೇರಿರುವ ಸರ್ವೆ ನಂಬರ್‌ 158ರಲ್ಲಿ ಜಂಗಮ ಮಠಕ್ಕೆ 12 ಗುಂಟೆ ಜಮೀನು ನೀಡಿದ್ದೇವೆ’ ಎಂದು ಲಿಂಗೈಕ್ಯ ಗುರುಶಾಂತಯ್ಯ ಅವರ ಪುತ್ರ ಜಯಣ್ಣ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

ದೇವಾಲಯದ ಪಕ್ಕದಲ್ಲಿರುವ ನಮ್ಮ ಸ್ವಂತ ಜಮೀನಿನಲ್ಲಿ ಬಸವಲಿಂಗಯ್ಯ ಅವರ ಸಮಾಧಿ ಇದೆ. ಸಮಾಧಿಗೆ ಯಾವುದೇ ರೀತಿಯ ಕಟ್ಟಡವಿಲ್ಲ. ವಿರೂಪಾಕ್ಷಯ್ಯ, ಚಂದ್ರಶೇಖರಯ್ಯ, ಮಹದೇವಯ್ಯ ಈಗ ಹೊಸದಾಗಿ ಸಮಾಧಿ ಕಟ್ಟಡ ಕಟ್ಟಲು ಬಂದಿದ್ದಾರೆ. ಈ ಸಂಬಂಧ ತಹಶೀಲ್ದಾರ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಮಾಗಡಿ ಸಿವಿಲ್‌ ಕೋರ್ಟ್‌ನಲ್ಲಿಯೂ ದಾವೆ ಹೂಡಿದ್ದೇವೆ ಎಂದು
ತಿಳಿಸಿದ್ದಾರೆ.

‘ನಾವು ಯಾರೂ ಇಲ್ಲದ ಸಮಯದಲ್ಲಿ ಸಮಾಧಿ ಕಟ್ಟಲು ಬಂದಿದ್ದಾರೆ. ವಿಷಯ ತಿಳಿದ ಕೂಡಲೇ ತಹಶೀಲ್ದಾರ್‌ ಗಮನಕ್ಕೆ ತಂದಿದ್ದು, ಕಂದಾಯಾಧಿಕಾರಿ ಅವರನ್ನು ಸ್ಥಳ ಪರಿಶೀಲನೆಗೆ ಕಳುಹಿಸಿದ್ದರು’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.