
ರಾಮನಗರ: ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿ (ಸಿಎಸ್‌ಆರ್) ಕೈಗೊಂಡ ಚಟುವಟಿಕೆಗಳಿಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿಯು ಇನ್‌ಸ್ಟಿಟ್ಯೂಟ್ ಆಫ್ ಡೈರೆಕ್ಟರ್ಸ್ (ಐಒಡಿ) ನೀಡುವ ಪ್ರತಿಷ್ಠಿತ ‘ಗೋಲ್ಡನ್ ಪೀಕಾಕ್ ಪ್ರಶಸ್ತಿ–2025’ ಗೌರವಕ್ಕೆ ಪಾತ್ರವಾಗಿದೆ. ಪರಿಸರ ಉಸ್ತುವಾರಿ, ಸಮುದಾಯ ಅಭಿವೃದ್ಧಿ ಹಾಗೂ ಅಂತರ್ಗತ ಬೆಳವಣಿಗೆಗೆ ಕಂಪನಿಯ ಬದ್ಧತೆಗಾಗಿ ಈ ಪ್ರಶಸ್ತಿ ಸಂದಿದೆ.
ಮುಂಬೈನ ಹೋಟೆಲ್ ತಾಜ್ ಲ್ಯಾಂಡ್ಸ್ ಎಂಡ್‍ನಲ್ಲಿ ಶುಕ್ರವಾರ ನಡೆದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕುರಿತ 20ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಬ್ರಿಟನ್‌ನ ಯಾರ್ಕ್ ವಿಶ್ವವಿದ್ಯಾಲಯದ ಉಪ ಕುಲಪತಿ ಮತ್ತು ಅಧ್ಯಕ್ಷ ಪ್ರೊ. ಚಾರ್ಲಿ ಜೆಫ್ರಿ ಅವರು, ಟಿಕೆಎಂ ಕಾರ್ಪೊರೇಟ್ ವ್ಯವಹಾರಗಳು ಮತ್ತು ಆಡಳಿತ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
‘ಸುಸ್ಥಿರ ಮತ್ತು ಅರ್ಥಪೂರ್ಣ ಸಿಎಸ್ಆರ್ ಸಕ್ರಿಯ ಚಟುವಟಿಕೆಗಳಿಗೆ ಸಂದ ಗೌರವ ಇದಾಗಿದೆ. ಸಾಮಾಜಿಕ ಜವಾಬ್ದಾರಿಯ ಬದ್ಧತೆ ನಮ್ಮ ಕಾರ್ಪೊರೇಟ್ ಸಿದ್ದಾಂತದ ಅವಿಭಾಜ್ಯ ಅಂಗವಾಗಿದೆ. ಇದು ಸಮುದಾಯ ಉಪಕ್ರಮಗಳ ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆಯನ್ನು ರೂಪಿಸುತ್ತದೆ’ ಎಂದು ಪ್ರಶಸ್ತಿ ಸ್ವೀಕರಿಸಿದ ವಿಕ್ರಮ್ ಗುಲಾಟಿ ಹೇಳಿದರು.
ಕಾರ್ಪೊರೇಟ್ ಶ್ರೇಷ್ಠತೆ, ನಾವೀನ್ಯತೆ, ನಿರ್ವಹಣೆ, ಸುಸ್ಥಿರತೆ ಹಾಗೂ ಪರಿಸರ ಸ್ನೇಹಿ ಅಭ್ಯಾಸಗಳಿಗೆ ನೀಡಲಾಗುವ ಪ್ರಶಸ್ತಿಗೆ ಸಾರ್ವಜನಿಕ, ಖಾಸಗಿ ಹಾಗೂ ಸರ್ಕಾರಿ ಉದ್ಯಮಗಳ ಕಾರ್ಪೊರೇಟ್‌ಗಳಿಂದ 447ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ನಿವೃತ್ತ ಮುಖ್ಯ ನ್ಯಾಯಮೂರ್ತಿ ಉದಯ್ ಯು. ಲಲಿತ್ ಅಧ್ಯಕ್ಷತೆಯ ತೀರ್ಪುಗಾರರ ಸಮಿತಿಯು ಅಂತಿಮವಾಗಿ ಟಿಕೆಎಂ ಅನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.