ADVERTISEMENT

ಬಿಡದಿ: ಕರ್ಫ್ಯೂ ಉಲ್ಲಂಘಿಸಿ ಓಡಾಟ

​ಪ್ರಜಾವಾಣಿ ವಾರ್ತೆ
Published 2 ಮೇ 2021, 5:07 IST
Last Updated 2 ಮೇ 2021, 5:07 IST
ಲಾಕ್‌ಡೌನ್ ನಡುವೆಯೂ ರಸ್ತೆಯಲ್ಲಿ ಸಂಚರಿಸುತ್ತಿರುವ ನಾಗರಿಕರು
ಲಾಕ್‌ಡೌನ್ ನಡುವೆಯೂ ರಸ್ತೆಯಲ್ಲಿ ಸಂಚರಿಸುತ್ತಿರುವ ನಾಗರಿಕರು   

ಬಿಡದಿ: ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕರ್ಫ್ಯೂವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪೊಲೀಸರು ಬಿಗಿಕ್ರಮ ಕೈಗೊಂಡರೂ ನಾಗರಿಕರು ಉದಾಸೀನ ತೋರುವುದನ್ನು ಮಾತ್ರ ಬಿಟ್ಟಿಲ್ಲ.

ಕೋವಿಡ್ ಎರಡನೇ ಅಲೆ ವೇಗವಾಗಿ ಹರಡುತ್ತಿರುವುದನ್ನು ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿದೆ. ಜನರು ಬೀದಿಯಲ್ಲಿ ಬೇಕಾಬಿಟ್ಟಿ ಓಡಾಡುವುದನ್ನು ತಡೆಯಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

ಪಟ್ಟಣದಲ್ಲಿ ಹಾದುಹೋಗುವ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಹಾಗೂ ಸವಾರರನ್ನು ತಪಾಸಣೆ ಮಾಡುವ ಮೂಲಕ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ರಸ್ತೆಯಲ್ಲಿ ಸುಮ್ಮನೆ ಅಡ್ಡಾಡುವವರಿಗೆ ಲಾಠಿ ಬಿಸಿ ಮುಟ್ಟಿಸಿದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ವಿನಾಕಾರಣ ದ್ವಿಚಕ್ರವಾಹನಗಳಲ್ಲಿ ಸುತ್ತಾಡುವವರ ಹಾವಳಿಯೂ ಕಡಿಮೆಯಾಗಿಲ್ಲ.

ADVERTISEMENT

ಅಗತ್ಯ ವಸ್ತು ಖರೀದಿಸಲು ಬೆಳಿಗ್ಗೆ 6ರಿಂದ 10ಗಂಟೆವರೆಗೆ ವಿಧಿಸಿದ್ದ ಗಡುವು ಅಂತ್ಯಗೊಳ್ಳುತ್ತಿದ್ದಂತೆ ರಸ್ತೆಗೆ ಇಳಿಯುವ ಪೊಲೀಸರು ರಸ್ತೆಬದಿ, ಬಸ್‌ನಿಲ್ದಾಣ ಹಾಗೂ ಅಂಗಡಿಗಳ ಮುಂದೆ ನಿಂತು ಟೈಮ್‌ಪಾಸ್ ಮಾಡುವವರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಮನೆಗಳಿಗೆ ತೆರಳುವಂತೆ ದಾರಿ ತೋರಿಸುತ್ತಿದ್ದರೂ ದ್ವಿಚಕ್ರವಾಹನಗಳಲ್ಲಿ ಸಂಚರಿಸಿ ಅನಗತ್ಯವಾಗಿ ಕಾಲಹರಣ ಮಾಡುತ್ತಾರೆ. ಇಲ್ಲಸಲ್ಲದ ನೆಪ ಹೇಳಿ ಮನೆಯಿಂದ ಹೊರಬಂದು ಕೆಲವರು ಬೀದಿ ಸುತ್ತುವ ಚಾಳಿಯನ್ನು ಬದಲಾಯಿಸಿಕೊಂಡಿಲ್ಲ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪೊಲೀಸರು ವಾಹನಗಳು ಹಾಗೂ ಸವಾರರನ್ನು ತಪಾಸಣೆ ನಡೆಸಿದರೂ ಒಬ್ಬೊಬ್ಬರು ಇಲ್ಲಸಲ್ಲದ ನೆಪ ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.