ರಾಮನಗರ: ರೂಪವಷ್ಟೇ ಅಲ್ಲದೆ ನಟನೆ ಮೂಲಕವೂ ಅಭಿಮಾನಿಗಳ ಸ್ಮೃತಿಯಲ್ಲಿ ಸದಾ ಕಾಲ ಉಳಿಯಬಲ್ಲ ಸಿನಿಮಾ ನಟಿಯರಲ್ಲಿ ಬಿ. ಸರೋಜಾ ದೇವಿ ಪ್ರಮುಖರು. ಚನ್ನಪಟ್ಟಣ ತಾಲ್ಲೂಕಿನ ದಶಾವರ ಗ್ರಾಮದಲ್ಲಿ ಬೈರಪ್ಪ ಮತ್ತು ರುದ್ರಮ್ಮ ದಂಪತಿಯ ನಾಲ್ಕನೇ ಪುತ್ರಿಯಾಗಿ 1937ರಲ್ಲಿ ಸರೋಜಾ ದೇವಿ ಜನಿಸಿದರು.
ಅದಾಗಲೇ ಮೂವರು ಹೆಣ್ಣು ಮಕ್ಕಳನ್ನು ಹೆತ್ತಿದ್ದ ದಂಪತಿಗೆ ನಾಲ್ಕನೇ ಮಗು ಸಹ ಹೆಣ್ಣಾಗಿತ್ತು. ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಕುಟುಂಬದವರು ಮತ್ತು ಸಂಬಂಧಿಕರಲ್ಲಿ ನಿರಾಶೆ ಮೂಡಿತ್ತು. ಬೇಸರಗೊಂಡಿದ್ದ ಕೆಲ ಸಂಬಂಧಿಕರು ಯಾರಿಗಾದರೂ ಈ ಮಗುವನ್ನು ಕೊಟ್ಟುಬಿಡು ಎಂದು ರುದ್ರಮ್ಮ ಅವರಿಗೆ ಸಲಹೆ ನೀಡಿದ್ದರಂತೆ.
ಅವರ ಸಲಹೆಯನ್ನು ರುದ್ರಮ್ಮ ನಯವಾಗಿಯೇ ನಿರಾಕರಿಸಿದ್ದರು. ಪುತ್ರಿಗೆ ಹೆಚ್ಚಿನ ಪ್ರೀತಿ ಮತ್ತು ಅಕ್ಕರೆ ತೋರಿ ಬೆಳೆಸಿದರು. ‘ಬೆಳೆಯುವ ಸಿರಿ ಮೊಳಕೆಯಲ್ಲೇ’ ಎಂಬ ಮಾತಿನಂತೆ ಚಿಕ್ಕಂದಿನಿಂದಲೇ ಸರೋಜಾ ದೇವಿ ಅವರು ಚೂಟಿಯಾಗಿದ್ದರು.
ಪೊಲೀಸ್ ಇಲಾಖೆಯಲ್ಲಿದ್ದ ಬೈರಪ್ಪ ಅವರು ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಪುತ್ರಿಯ ಪ್ರತಿಭೆಗೆ ದಂಪತಿ ನೀರೆರೆದು ಪೋಷಿಸಿದರು. ನೃತ್ಯ, ನಟನೆ, ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಸರೋಜಾ ದೇವಿ, ಮುಂದೆ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಹಿಂದಕ್ಕೆ ತಿರುಗಿ ನೋಡಲಿಲ್ಲ.
ನೋಡ ನೋಡುತ್ತಲೇ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಚತುರ್ಭಾಷ ನಟಿಯಾಗಿ ಬೆಳೆದರು. ಸಿನಿ ರಸಿಕರಿಂದ ‘ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ’, ‘ಅಭಿನಯ ಸರಸ್ವತಿ’ ಎಂಬ ಮೆಚ್ಚುಗೆಗೆ ಪಾತ್ರವಾಗಿದ್ದರು.
ಮಕ್ಕಳಿಲ್ಲವೆಂಬ ಕೊರಗು: ಎಂಜಿನಿಯರ್ ಆಗಿದ್ದ ಹರ್ಷ ಅವರನ್ನು ಮದುವೆಯಾಗಿದ್ದ ಸರೋಜಾ ದೇವಿ ಅವರು, ಮದುವೆ ಬಳಿಕವೂ ನಟನೆ ಮುಂದುವರಿಸಿದ್ದರು. ಆ ಮೂಲಕ ಚಿತ್ರರಂಗದಲ್ಲಿ ಸಾಮಾನ್ಯವಾಗಿದ್ದ ‘ನಟಿಯರು ಮದುವೆಯಾದರೆ ಅವರ ವೃತ್ತಿ ಜೀವನ ಮುಗಿದಂತೆ’ ಎಂಬ ಮಾತಿಗೆ ಸಡ್ಡು ಹೊಡೆದರು.
ಸರೋಜಾ ದೇವಿ ಅವರಿಗೆ ಚಿತ್ರರಂಗದಲ್ಲಿನ ಯಶಸ್ಸು, ಜನಪ್ರಿಯತೆ, ಹಣ, ಅಂತಸ್ತು ಎಲ್ಲವೂ ಇದ್ದರೂ ಮಕ್ಕಳಿಲ್ಲವೆಂಬ ಕೊರಗು ಸದಾ ಕಾಡುತ್ತಿತ್ತು. ಭುವನೇಶ್ವರಿ ಎಂಬ ಹುಡುಗಿಯನ್ನು ದತ್ತು ಪಡೆದು ಸಾಕಿದರೂ ಆಕೆ ಮುಂದೆ ತೀರಿಕೊಂಡಳು. ಬಳಿಕ, ಸಹೋದರಿಯರ ಮಕ್ಕಳನ್ನೇ ತಮ್ಮ ಮಕ್ಕಳಂತೆ ಕಂಡರು. ಪತಿ ತೀರಿಕೊಂಡ ಬಳಿಕ ಅವರ ಮನಸ್ಸು ಅಧ್ಯಾತ್ಮದತ್ತ ಹೆಚ್ಚು ಹರಿಯಿತು ಎನ್ನುತ್ತಾರೆ ಗ್ರಾಮಸ್ಥರು.
‘ಸರೋಜಾ ದೇವಿ ಅವರು ಊರಿಗೆ ಬಂದಾಗಲೆಲ್ಲಾ ಎರಡ್ಮೂರು ದಿನ ಇದ್ದು ಹೋಗುತ್ತಿದ್ದರು. ಅವರೊಂದಿಗೆ ಎರಡ್ಮೂರು ಜನ ಜೊತೆಗಿರುತ್ತಿದ್ದರು. ಅದರಲ್ಲಿ ಅವರ ಮನೆಯ ಅಡುಗೆಯವರು ಇರುತ್ತಿದ್ದರು. ಉಪ್ಪುಸಾರು ಮುದ್ದೆ ಜೊತೆಗೆ ಮಾಂಸಾಹಾರ ಸಹ ಇಷ್ಟಪಡುತ್ತಿದ್ದರು. ಅವರ ತಾಯಿ ಸಮಾಧಿ ಇರುವ ತೋಟದಲ್ಲಿ ಸುತ್ತಾಡುತ್ತಿದ್ದರು’ ಎಂದು ಅವರ ಮನೆಯನ್ನು ನೋಡಿಕೊಳ್ಳುತ್ತಿದ್ದ ಡಿ.ಎಂ. ಕೃಷ್ಣಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಬಿಡದ ಊರಿನ ನಂಟು
ಸರೋಜಾ ದೇವಿ ಅವರು ತಾವು ದೊಡ್ಡ ಸ್ಟಾರ್ ಆಗಿದ್ದರೂ ತಮ್ಮೂರಿನ ನಂಟು ಬಿಟ್ಟಿರಲಿಲ್ಲ. ಆಗಾಗ ಊರಿಗೆ ಬಂದು ಹೋಗುತ್ತಿದ್ದರು. ತೋಟದಲ್ಲಿ ಸುತ್ತಾಡುತ್ತಿದ್ದರು. ತಾಯಿ ರುದ್ರಮ್ಮ ಅವರ ಮೇಲೆ ಅತೀವ ಪ್ರೀತಿ ಹೊಂದಿದ್ದ ಅವರು ತಮ್ಮ ತೋಟದಲ್ಲೇ ಅವರ ಅಂತ್ಯಕ್ರಿಯೆ ನೆರವೇರಿಸಿದ್ದರು. ಪಿತೃ ಪಕ್ಷದ ಸಂದರ್ಭದಲ್ಲಿ ಊರಿಗೆ ಬಂದಾಗಲೆಲ್ಲಾ ತಾಯಿ ಸೇರಿದಂತೆ ಪೂರ್ವಿಕರಿಗೆ ಎಡೆ ಇಟ್ಟು ಪೂಜೆ ಸಲ್ಲಿಸುತ್ತಿದ್ದರು. ತಾಯಿಯೊಂದಿಗೆ ಅತಿಯಾದ ಬಾಂಧವ್ಯದ ಕಾರಣಕ್ಕೆ ತಮ್ಮ ಅಂತಿಮ ವಿರಾಮವನ್ನು ಸಹ ತಾಯಿ ಜೊತೆಯಲ್ಲೇ ಬಯಸಿದ್ದರು. ಅವರ ಇಚ್ಛೆಯಂತೆ ತಾಯಿ ಸಮಾಧಿ ಪಕ್ಕವೇ ಅಂತ್ಯಕ್ರಿಯೆ ನಡೆಯುತ್ತಿದೆ. ಕೆರೆ ಬಾಗೀನಕ್ಕೆ ಬಂದಿದ್ದರು ಚನ್ನಪಟ್ಟಣ ತಾಲ್ಲೂಕಿನ ಕೆರೆಗಳಿಗೆ 2015ರಲ್ಲಿ ನೀರು ತುಂಬಿಸಿದ್ದ ಶಾಸಕ ಸಿ.ಪಿ. ಯೋಗೇಶ್ವರ್ ಅವರು ಮಳೂರು ಕೆರೆಗೆ ಬಾಗೀನ ಅರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದಕ್ಕೆ ಸರೋಜಾ ದೇವಿ ಅವರನ್ನು ಸಹ ಆಹ್ವಾನಿಸಿ ಸನ್ಮಾನಿಸಿದ್ದರು. ಆಗ ತಾವು ಹುಟ್ಟಿ ಬೆಳೆದ ಊರಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಉಳಿದಂತೆ ಅವರು ತಾಲ್ಲೂಕಿನಲ್ಲಿ ಅಷ್ಟಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ ಎನ್ನುತ್ತಾರೆ ಸ್ಥಳೀಯರು.
‘ಚಿತ್ರರಂಗಕ್ಕೆ ಬರಲು ಸ್ಫೂರ್ತಿಯಾಗಿದ್ದರು’
‘ಭಾರತೀಯ ಚಿತ್ರರಂಗದಲ್ಲಿ ಸರೋಜಾ ದೇವಿ ಅವರು ದೊಡ್ಡ ಹೆಸರು ಮಾಡಿದ್ದರು. ನಾನು ಚಿತ್ರರಂಗ ಪ್ರವೇಶಿಸಲು ಸ್ಫೂರ್ತಿಯಾಗಿದ್ದರು. ಕೆರೆಗಳನ್ನು ತುಂಬಿಸುವ ಮೂಲಕ ತಾಲ್ಲೂಕಿನಲ್ಲಿ ನಾನು ಕೈಗೊಂಡಿದ್ದ ನೀರಾವರಿ ಕೆಲಸಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಅವರ ನಿಧನ ನನಗೆ ನೋವುಂಟು ಮಾಡಿದ್ದು ಇಡೀ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ದಶಾವರಕ್ಕೆ ಭೇಟಿ ನೀಡಿ ಅಂತ್ಯಕ್ರಿಯೆ ಸಿದ್ದತೆಗಳನ್ನು ಪರಿಶೀಲಿಸಿದ ಶಾಸಕ ಸಿ.ಪಿ. ಯೋಗೇಶ್ವರ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.