ಚನ್ನಪಟ್ಟಣ: ತಾಲ್ಲೂಕಿನ ಗೌಡಗೆರೆ ಗ್ರಾಮದಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿ ಎತ್ತರದ ಚಾಮುಂಡೇಶ್ವರಿ ಪಂಚಲೋಹ ವಿಗ್ರಹವನ್ನು ಭಾನುವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅನಾವರಣಗೊಳಿಸಲಾಯಿತು.
ಸುಮಾರು 60 ಅಡಿ ಎತ್ತರದ ವಿಗ್ರಹದ ಅನಾವರಣ ಅಂಗವಾಗಿ ಶನಿವಾರದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿದ್ದವು. ಭೀಮನ ಅಮಾವಾಸ್ಯೆ ಪ್ರಯುಕ್ತ ದೇವಿಗೆ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗಿನ ಜಾವ 2 ಗಂಟೆಯಿಂದಲೇ ತಾಯಿ ಚಾಮುಂಡೇಶ್ವರಿಗೆ ರುದ್ರಾಭಿಷೇಕ, ಶ್ರೀಚಕ್ರಕ್ಕೆ ಚಕ್ರಾಭಿಷೇಕ ಜೊತೆಗೆ ಮಹಾ ಮಂಗಳಾರತಿ ನಡೆಯಿತು. ನಂತರ ಕ್ಷೇತ್ರದ ಬನ್ನಿಮಂಟಪದಿಂದ ಹಲವು ಜನಪದ ಕಲಾ ತಂಡಗಳ ಮೆರವಣಿಗೆಯಲ್ಲಿ 108 ಹಾಲರಭಿಗಳನ್ನು ತಂದು ಬಸವಣ್ಣನಿಗೆ ಕ್ಷೀರಾಭಿಷೇಕ ನಡೆಸಲಾಯಿತು.
ಗೌಡಗೆರೆ ಕ್ಷೇತ್ರದಲ್ಲಿ ನಿರ್ಮಾಣವಾಗಿರುವ 18 ಭುಜಗಳುಳ್ಳ ಸೌಮ್ಯ ರೂಪದ ತಾಯಿ ಚಾಮುಂಡೇಶ್ವರಿಯ ಪಂಚಲೋಹ ವಿಗ್ರಹವನ್ನು ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು. 60 ಅಡಿ ಎತ್ತರದ 35 ಸಾವಿರ ಕೆ.ಜಿ ತೂಕವಿರುವ ಈ ವಿಗ್ರಹ ವಿಶ್ವದ ಅತಿ ಎತ್ತರದ ಪಂಚಲೋಹ ವಿಗ್ರಹ ಎಂಬ ಖ್ಯಾತಿ ಪಡೆದಿದ್ದು, ಚಿನ್ನ, ಬೆಳ್ಳಿ, ಕಂಚು, ತಾಮ್ರ ಮತ್ತು ಕಬ್ಬಿಣ ಸೇರಿಸಿ ನಿರ್ಮಾಣ ಮಾಡಿರುವುದು ವಿಶೇಷ. ಇಡೀ ವಿಗ್ರಹಕ್ಕೆ ಸ್ವರ್ಣಲೇಪನ ಮಾಡಲಾಗಿದೆ. ಸಿಂಹಾರೂಢ ತಾಯಿಯ ವಿಗ್ರಹ ಮನಮೋಹಕವಾಗಿ ರೂಪುಗೊಂಡಿದೆ.ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಯೋಜಿಸಲಾಗಿತ್ತು. ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು, ಸ್ವಾಮೀಜಿಗಳು, ಅಧಿಕಾರಿಗಳು, ಭಕ್ತಾದಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.