ADVERTISEMENT

ಮೌಲ್ಯ ಉಳಿಸಿಕೊಂಡ ಕ್ಷೇತ್ರ ಶಿಕ್ಷಣ

ಗುರುವಂದನಾ ಸಮಾರಂಭದಲ್ಲಿ ಶಿಕ್ಷಕರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 14:03 IST
Last Updated 9 ಫೆಬ್ರುವರಿ 2020, 14:03 IST
ಕಬ್ಬಾಳು ಶಾಲೆಯಲ್ಲಿ ನಡೆದ ಗುರುವಂದನಾ ಸಮಾರಂಭವನ್ನು ಮುಖಂಡ ಎಚ್‌.ಕೆ.ಶ್ರೀಕಂಠು ನೆರವೇರಿಸಿದರು
ಕಬ್ಬಾಳು ಶಾಲೆಯಲ್ಲಿ ನಡೆದ ಗುರುವಂದನಾ ಸಮಾರಂಭವನ್ನು ಮುಖಂಡ ಎಚ್‌.ಕೆ.ಶ್ರೀಕಂಠು ನೆರವೇರಿಸಿದರು   

ಸಾತನೂರು (ಕನಕಪುರ): ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಶಿಕ್ಷಕ ವೃತ್ತಿಯೂ ಸಮಾಜದಲ್ಲಿ ಪವಿತ್ರ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ಕುರುಬಳ್ಳಿ ಶಂಕರ್‌ ತಿಳಿಸಿದರು.

ಇಲ್ಲಿನ ಸಾತನೂರು ಹೋಬಳಿ ಹೊಸ ಕಬ್ಬಾಳು ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರೌಢಶಾಲೆಯಲ್ಲಿ ನಡೆದ ಗುರುವಂದನಾ ಸಮಾರಂಭದಲ್ಲಿ ಶಿಕ್ಷಕರನ್ನು ಅಭಿನಂದಿಸಿ ಮಾತನಾಡಿದರು.

ಸಮಾಜದಲ್ಲಿ ಇಂದಿಗೂ ಮೌಲ್ಯ ಉಳಿಸಿಕೊಂಡಿರುವ ಕ್ಷೇತ್ರ ಶಿಕ್ಷಣ. ಯಾವುದೇ ಫಲಾಪೇಕ್ಷೆಯಿಲ್ಲದೆ ಶಿಕ್ಷಕರು ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆದುಕೊಡುತ್ತಿದ್ದಾರೆ. ಆ ಕಾರಣದಿಂದಲೇ ಶಿಕ್ಷಕರಿಗೆ ಸಮಾಜದಲ್ಲಿ ಗೌರವ ಸಿಗುತ್ತಿದೆ ಎಂದರು.

ADVERTISEMENT

ವಿದ್ಯೆ ಹೇಳಿಕೊಟ್ಟ ಗುರು ಯಾರು ಮರೆಯುವುದಿಲ್ಲ. ಆ ಕಾರಣದಿಂದಲೇ ಈ ಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಗುರುಗಳನ್ನು ಅಭಿನಂದಿಸುವ ಕೆಲಸ ನಡೆದಿದೆ ಎಂದರು.

ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಮಕ್ಕಳ ಭವಿಷ್ಯ ರೂಪಿಸುವ ಕಡೆಗೆ ಹೆಚ್ಚು ಒತ್ತು ಕೊಡಬೇಕು. ಇಂದಿನ ಪ್ರಸ್ತುತ ಸಮಾಜದ ಸ್ಪರ್ಧೆಗಳಿಗೆ ಅನುಗುಣವಾಗಿ ಮಕ್ಕಳನ್ನು ತಯಾರುಗೊಳಿಸಬೇಕಿದೆ ಎಂದರು.

ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಶ್ರೀಕಂಠು ಮಾತನಾಡಿ, ಸಮಾಜದಲ್ಲಿ ಮೊದಲು ಮನುಷ್ಯರಾಗಬೇಕು. ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯೆ ಕಲಿಸಿದ ಗುರುವನ್ನು ಎಂದೂ ಮರೆಯದೆ ಪೂಜ್ಯ ಸ್ಥಾನದಲ್ಲಿ ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.

ಸೇವೆಯಿಂದ ನಿವೃತ್ತರಾದ ಎಸ್‌.ಸಿದ್ದಪ್ಪ, ಬೇರೆ ಶಾಲೆಗೆ ವರ್ಗಾವಣೆಯಾದ ಎಂ.ಶಂಕರ್‌, ಶಿವಲಿಂಗಯ್ಯ, ವೇಣುಗೋಪಾಲ್‌, ರಂಗರಾಜು ಅವರನ್ನು ಸನ್ಮಾನಿಸಿ ಗೌರವದಿಂದ ಬೀಳ್ಕೊಡುಗೆ ನೀಡಲಾಯಿತು.

ಕಾಂಗ್ರೆಸ್‌ ಹಿರಿಯ ಮುಖಂಡ ಸೂರ‍್ನಳ್ಳಿ ಜಯರಾಮ್‌, ಕುರುಬಳ್ಳಿದೊಡ್ಡಿ ಧನಂಜಯ, ಗ್ರಾಮ ಪಂಚಾಯಿತಿ ಸದಸ್ಯ ಕಾಂತರಾಜು, ಮುಖ್ಯ ಶಿಕ್ಷಕ ಸಿ.ಪುಟ್ಟಸ್ವಾಮಿ, ಸಹ ಶಿಕ್ಷಕರಾದ ರಾಮದಾಸ್, ದಯಾನಂದ, ನಾಗಮ್ಮ, ರಾಮಣ್ಣ, ಶಿವಲಿಂಗಯ್ಯ, ಹಿರಿಯ ವಿದ್ಯಾರ್ಥಿಗಳಾದ ಪುರುಷೋತ್ತಮ್‌, ಹನುಮಂತೇಗೌಡ, ನಾಗರಾಜು, ಸುರೇಶ್‌ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.