ADVERTISEMENT

ಸಿದ್ದರಾಮಯ್ಯ ಬದ್ಧತೆ ಕಡಿಮೆಯಾಗುತ್ತಿದೆ: ವಾಟಾಳ್ ನಾಗರಾಜ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 2:35 IST
Last Updated 12 ಅಕ್ಟೋಬರ್ 2025, 2:35 IST
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜ ವಿರೋಧಿಸಿ ರಾಮನಗರದ ಐಜೂರು ವೃತ್ತದಲ್ಲಿ ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜ ವಿರೋಧಿಸಿ ರಾಮನಗರದ ಐಜೂರು ವೃತ್ತದಲ್ಲಿ ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು   

ರಾಮನಗರ: ‘ಮೇಯರ್ ಕುಳಿತುಕೊಳ್ಳಬೇಕಾದ ಸ್ಥಾನದಲ್ಲಿ ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಕುಳಿತಿರುವುದು ಅವರ ಹುದ್ದೆ ಮತ್ತು ಘನತೆಗೆ ಶೋಭೆ ತರುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ಬದ್ಧತೆ ಕಡಿಮೆಯಾಗುತ್ತಿದೆ’ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಜಿಬಿಎ ಹಾಗೂ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜ ವಿರೋಧಿಸಿ ನಗರದ ಐಜೂರು ವೃತ್ತದಲ್ಲಿ ಶನಿವಾರ ಪ್ರತಿಭಟಿಸಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಯಾರು, ಏನು ಹೇಳುತ್ತಾರೊ ಅದನ್ನೇ ಮಾಡುತ್ತಾರೆ. ಏನೊ ನಡೆದುಕೊಂಡು ಹೋಗಲಿ ಎಂದು ದಿನಗಳನ್ನು ದೂಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಯಾರ ಮಾತನ್ನೂ ಕೇಳುತ್ತಿಲ್ಲ’ ಎಂದರು.

‘ಶಿವಕುಮಾರ್ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ನಾನು ಅಂದುಕೊಂಡಿದ್ದನ್ನು ಮಾಡಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಬೆಂಗಳೂರನ್ನು ಚೂರು ಮಾಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಾಡಿರುವುದು ಅನಗತ್ಯವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಒಂದೇ ಸಾಕಿತ್ತು. ಅದನ್ನು ಐದಾರು ಭಾಗ ಮಾಡುವುದು ಬೇಕಿರಲಿಲ್ಲ. ಕೆಂಪೇಗೌಡರು ಕಟ್ಟಿನ ನಗರ ಅಖಂಡವಾಗಿ ಉಳಿಯಬೇಕು’ ಎಂದು ಹೇಳಿದರು.

ADVERTISEMENT

‘ಜಿಬಿಎಯಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ರಿಯಲ್ ಎಸ್ಟೇಟ್ ಮಾಡುವವರಿಗೆ ಮಾತ್ರ ಅನುಕೂಲವಾಗಲಿದೆ. ಭೂಗಳ್ಳರಿಗೆ ಅನುಕೂಲ ಮಾಡಿಕೊಡುವ ಜಿಬಿಎ ಬಿಟ್ಟು ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಹದಗೆಟ್ಟಿರುವ ಬೆಂಗಳೂರಿನ ರಸ್ತೆಗಳನ್ನು ಮೊದಲು ದುರಸ್ತಿ ಮಾಡಬೇಕು. ತ್ಯಾಜ್ಯ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರುನಾಡ ಸೇವೆ ರಾಜ್ಯ ಉಪಾಧ್ಯಕ್ಷ ಐಜೂರು ಜಗದೀಶ್, ಜಿಲ್ಲಾಧ್ಯಕ್ಷ ಸಿ.ಎಸ್.ಜಯಕುಮಾರ್, ಪದಾಧಿಕಾರಿಗಳಾದ ಗಂಗಾಧರ್, ಮುದ್ದುಮಲ್ಲಯ್ಯ, ಸಂತೋಷ್ ಗೌಡ, ಕುಮಾರ್, ಶಿವಮೂರ್ತಿ, ಕೆಂಪರಾಜು, ಮಂಜುನಾಥ್, ಭಾಗ್ಯ, ಅರ್ಜುನ್,ಕೃಷ್ಣಮೂತಿ, ಪಾರ್ಥಸಾರಥಿ, ಸುಧಾ, ಕೆ.ಜಯರಾಜು ಹಾಗೂ ಇತರರು ಇದ್ದರು.

ರಿಯಲ್ ಎಸ್ಟೇಟ್‌ನವರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಬಿಡದಿ ಬಳಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ನಿರ್ಮಾಣಕ್ಕೆ ಮುಂದಾಗಿದೆ. ಇದರಿಂದ ರೈತರು ಬೀದಿಗೆ ಬೀಳುತ್ತಾರೆ. ಭೂ ಸ್ವಾಧೀನ ವಿರುದ್ದದ ಅವರ ಹೋರಾಟವನ್ನು ಬೆಂಬಲಿಸುವೆ
– ವಾಟಾಳ್ ನಾಗರಾಜ್ ಕನ್ನಡ ಚಳವಳಿ ವಾಟಾಳ್ ಪಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.