ರಾಮನಗರ: ‘ರಾಜಕಾರಣಿಗಳು ಜಿಲ್ಲೆಯ ಹೆಸರನ್ನು ಹಠ ಮತ್ತು ಕೆಟ್ಟ ದ್ವೇಷದ ಕಾರಣಕ್ಕೆ ಬದಲಾವಣೆ ಮಾಡುವುದು ಬೇಡ. ರಾಮನಗರ ದೇವಸ್ಥಾನವಿದ್ದಂತೆ. ರಾಮನಗರ ಭಾರತದಲ್ಲಿ ಅದ್ಭುತ ಹೆಸರು ಪಡೆದಿರುವ ಜಿಲ್ಲೆಯಾಗಿದೆ. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ರಾಮನಗರ ಎಂಬ ಹೆಸರು ನಾಮಕರಣ ಮಾಡಿದ್ದರು’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಹೇಳಿದರು.
ನಗರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರಾಮನಗರಕ್ಕೆ ಹಿಂದೆ ಕ್ಲೋಸ್‍ಪೇಟೆ ಎಂಬ ಇಂಗ್ಲಿಷ್ ಅಧಿಕಾರಿಯ ಹೆಸರಿತ್ತು. ಸ್ವಾತಂತ್ರ್ಯ ನಂತರ ನಾಡು ಕಂಡ ಪ್ರಾಮಾಣಿಕ ಹಾಗೂ ದಕ್ಷ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಅವರು ಐತಿಹಾಸಿಕ ಹಿನ್ನೆಲೆಯುಳ್ಳ ಐತಿಹಾಸಿಕ ಹೆಸರಿಟ್ಟಿದ್ದರು. ಹಿಂದಿಯ ‘ಶೋಲೆ’ ಸಿನಿಮಾದ ಮೂಲಕ ಇಡೀ ದೇಶಕ್ಕೆ ರಾಮನಗರ ಪರಿಚಿತವಾಗಿದೆ’ ಎಂದರು.
‘ನದಿ ಹಾಗೂ ಬೆಟ್ಟ–ಗುಡ್ಡಗಳಿಂದ ಆವೃತ್ತವಾಗಿರುವ ರಾಮನಗರವನ್ನು ಜಿಲ್ಲೆಯಾಗಿ ರಚಿಸಲಾಗಿತ್ತು. ಹೆಸರು ಬದಲಾವಣೆಯಿಂದ ಕೆಂಗಲ್ ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧೈರ್ಯವಾಗಿ ಮಾತಾಡುವ ಶಕ್ತಿ ಇದ್ದರೆ, ಕೂಡಲೇ ಹೆಸರು ಬದಲಾವಣೆ ಆದೇಶವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದ ಅವರು, ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಾವಾಗಲೂ ರಿಯಲ್ ಎಸ್ಟೇಟ್ ವ್ಯಾಪಾರದ ಚಿಂತನೆ ಹೊಂದಿದ್ದಾರೆ’ ಎಂದು ಕಿಡಿ ಕಾರಿದರು.
‘ಆಂಧ್ರಪ್ರದೇಶಕ್ಕೆ ರಾಜ್ಯದ ಆನೆಗಳನ್ನು ಕೊಟ್ಟಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ವಾಟಾಳ್, ‘ನಮ್ಮ ಆನೆಗಳು ರಾಜ್ಯದಿಂದ ಹೋಗುವಾಗ ಕಣ್ಣೀರು ಹಾಕಿವೆ. ಹಾಗಾಗಿ, ಸರ್ಕಾರ ನಮ್ಮ ಆನೆಗಳನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಐಜೂರು ಜಗದೀಶ್, ಜಿಲ್ಲಾಧ್ಯಕ್ಷ ಜೈ ಕುಮಾರ್, ತಾಲ್ಲೂಕು ಅಧ್ಯಕ್ಷ ವಿ.ಎನ್. ಗಂಗಾಧರ್, ಯುವ ಘಟಕ ಅಧ್ಯಕ್ಷ ಆರ್.ಜೆ. ಅರ್ಜುನ್, ಮುಖಂಡರಾದ ಕೆಂಪರಾಜು, ಭಾಗ್ಯಸುಧಾ, ಮಂಜುನಾಥ್, ಪ್ರಸನ್ನ, ಕೃಷ್ಣಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.