ADVERTISEMENT

ಚುನಾವಣೆ ರದ್ದು ಮಾಡಿ: ವಾಟಾಳ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 13:31 IST
Last Updated 23 ಏಪ್ರಿಲ್ 2019, 13:31 IST
ರಾಮನಗರ ಬಸ್ ನಿಲ್ದಾಣದಲ್ಲಿ ಮಂಗಳವಾರ ವಾಟಾಳ್‌ ನಾಗರಾಜು ಸಾಂಕೇತಿಕ ಪ್ರತಿಭಟನೆ ನಡೆಸಿದರು
ರಾಮನಗರ ಬಸ್ ನಿಲ್ದಾಣದಲ್ಲಿ ಮಂಗಳವಾರ ವಾಟಾಳ್‌ ನಾಗರಾಜು ಸಾಂಕೇತಿಕ ಪ್ರತಿಭಟನೆ ನಡೆಸಿದರು   

ರಾಮನಗರ: ರಾಜ್ಯದಲ್ಲಿ ಸದ್ಯ ನಡೆದಿರುವ ಲೋಕಸಭಾ ಚುನಾವಣೆಯನ್ನು ರದ್ದು ಮಾಡಿ ಹೊಸತಾಗಿ ಚುನಾವಣೆ ನಡೆಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜು ಆಗ್ರಹಿಸಿದರು.

ಇಲ್ಲಿನ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಪ್ರತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ತಲಾ ₹50 ಕೋಟಿಯನ್ನು ಚುನಾವಣೆಗೆ ವೆಚ್ಚ ಮಾಡಿದ್ದಾರೆ. 28 ಕ್ಷೇತ್ರದಲ್ಲಿ ಸುಮಾರು ₹4 ಸಾವಿರ ಕೋಟಿ ಹೀಗೆ ವ್ಯಯವಾಗಿದೆ. ಇನ್ನೆಲ್ಲಿ ಪ್ರಮಾಣಿಕ ಚುನಾವಣೆ ನಡೆಸಲು ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ದೇಶದ ಎಲ್ಲೆಡೆ ಇದೇ ಪರಿಸ್ಥಿತಿ ಚುನಾವಣಾ ಆಯೋಗವು ಪ್ರತಿ ಅಭ್ಯರ್ಥಿಗೆ ₹70 ಲಕ್ಷ ಖರ್ಚಿನ ಮಿತಿ ವಿಧಿಸಿರುವುದೇ ಸರಿಯಲ್ಲ. ಜನಸಾಮಾನ್ಯರು ಚುನಾವಣೆಗೆ ನಿಲ್ಲಲು ₹25 ಸಾವಿರ ಠೇವಣಿ ಇಡುವುದೇ ಕಷ್ಟ. ಹೀಗಿರುವಾಗ ₹70 ಲಕ್ಷ ಖರ್ಚು ಮಾಡಲು ಆಗದು. ಅಷ್ಟು ಖರ್ಚು ಮಾಡಿ ಗೆದ್ದವರು ಪ್ರಾಮಾಣಿಕವಾಗಿ ಉಳಿಯಲು ಸಾಧ್ಯವಿಲ್ಲ’ ಎಂದರು.

‘ಚುನಾವಣೆ ಪದ್ಧತಿಯಲ್ಲೂ ಕೆಲವು ಬದಲಾವಣೆ ಆಗಬೇಕು. ಮತ ಚೀಟಿಯನ್ನು ಆಯೋಗವೇ ಮನೆಗಳಿಗೆ ಹಂಚಬೇಕು. ಮನೆಗಳಿಗೆ ಅಭ್ಯರ್ಥಿ ಇಲ್ಲವೇ ಕಾರ್ಯಕರ್ತರ ಹೋಗಬಾರದು. ಕಡ್ಡಾಯ ಮತದಾನ ಪದ್ಧತಿ ಜಾರಿಯಾಗಬೇಕು. ಮತದಾನದ ಸಮಯವನ್ನು ವಿಸ್ತರಿಸಬೇಕು. ಕನಿಷ್ಟ 2 ದಿನಗಳ ಕಾಲ ಮತದಾನ ನಡೆಯಬೇಕು’ ಎಂದು ಆಗ್ರಹಿಸಿದರು.

‘ಪಕ್ಷಾಂತರಿಗಳನ್ನು ಜೈಲಿಗೆ ಕಳುಹಿಸಬೇಕು. ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಬೇಕು. ಮತಕ್ಕಾಗಿ ಹಣ ಪಡೆಯುವ ಮತದಾರರಿಗೂ ಜೈಲು ಶಿಕ್ಷೆ ಆಗಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಪಾರ್ಥ, ಕರುನಾಡ ಸೇನೆಯ ಜಗದೀಶ್‌ ಇದ್ದರು.

ಪ್ರತಿಭಟನೆಯೂ ಸಾಂಕೇತಿಕ!
ಬಸ್ ನಿಲ್ದಾಣದಲ್ಲಿ ಕೇವಲ ಮಾಧ್ಯಮದ ಮುಂದಷ್ಟೇ ವಾಟಾಳ್‌ ತಮ್ಮ ಪ್ರತಿಭಟನೆಯನ್ನು ಸೀಮಿತಗೊಳಿಸಿದರು. ಮಧ್ಯಾಹ್ನ 1 ಗಂಟೆಗೆ ನಿಲ್ದಾಣಕ್ಕೆ ಬಂದ ಅವರು ಮೊದಲಿಗೇ ಮಾಧ್ಯಮಗಳ ಮುಂದೆ ಮಾತನಾಡಿದರು. ನಂತರ ಚುನಾವಣಾ ಆಯೋಗದ ವಿರುದ್ಧವೇ ಘೋಷಣೆ ಕೂಗಿ, ನಿಮಿಷದ ಒಳಗೇ ಪ್ರತಿಭಟನೆ ಮುಕ್ತಾಯಗೊಳಿಸಿ ಅಲ್ಲಿಂದ ನಿರ್ಗಮಿಸಿದರು.

***
ಅಭ್ಯರ್ಥಿಗಳು ಪ್ರಚಾರದ ವೇಳೆ ದೇವಸ್ಥಾನಗಳಿಗೆ ಹೋಗಿದ್ದಾರೆ. ಈಗ ಅದೇ ಅಭ್ಯರ್ಥಿ ತಾನು ಬರೀ ₹70 ಲಕ್ಷ ಖರ್ಚು ಮಾಡಿದೆ ಎಂದು ದೇವರ ಮುಂದೆ ಪ್ರಮಾಣ ಮಾಡಲಿ.
-ವಾಟಾಳ್‌ ನಾಗರಾಜು, ಕನ್ನಡಪರ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.