ADVERTISEMENT

ವೀರಶೈವ ಸಮಾಜ ಸಂಘಟಿತರಾಗಬೇಕು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 13:35 IST
Last Updated 5 ಅಕ್ಟೋಬರ್ 2019, 13:35 IST
ಚನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭಾದ ನೂತನ ಜಿಲ್ಲಾಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅಭಿನಂದಿಸಲಾಯಿತು
ಚನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭಾದ ನೂತನ ಜಿಲ್ಲಾಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅಭಿನಂದಿಸಲಾಯಿತು   

ಚನ್ನಪಟ್ಟಣ: ವೀರಶೈವ ಸಮಾಜದ ಜನತೆ ಸಹಬಾಳ್ವೆ, ಸಹಕಾರ ತತ್ವದ ಮೂಲಕ ಒಗ್ಗೂಡಿ ಸಂಘಟಿತರಾಗಬೇಕು ಎಂದು ಕನಕಪುರ ದೇಗುಲಮಠದ ಕಿರಿಯ ಸ್ವಾಮೀಜಿ ಚನ್ನಬಸವ ಸ್ವಾಮೀಜಿ ಕರೆ ನೀಡಿದರು.

ಪಟ್ಟಣದ ಕುಡಿನೀರು ಕಟ್ಟೆ ಬಳಿಯ ವಿರಕ್ತ ಮಠದ ಆವರಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರಮಾಣಪತ್ರ ವಿತರಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಹಾಸಭಾದ ಪದಾಧಿಕಾರಿಗಳು ಹೆಚ್ಚಿನ ಆಸಕ್ತಿ ಶ್ರಮವಹಿಸಿ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಸಮಾಜದ ಅಭಿವೃದ್ಧಿಯಲ್ಲಿ ರಾಜಕೀಯ ಪ್ರವೇಶ ಮಾಡಬಾರದು. ಸಂಘಟನೆಯಲ್ಲಿ ಯಾವುದೇ ವ್ಯಕ್ತಿ ಮುಖ್ಯವಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಜಿಲ್ಲಾಮಟ್ಟದಲ್ಲಿ ಸೂಕ್ತ ನಿವೇಶನ ಪಡೆದು ಸಂಘದ ಭವನ ಹಾಗೂ ಸಮಾಜದ ಬಡವರ್ಗದ ಜನತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಹಕಾರ ಬ್ಯಾಂಕ್ ಸ್ಥಾಪಿಸುವತ್ತ ನೂತನ ಪದಾಧಿಕಾರಿಗಳು ಮುಂದಾಗಬೇಕು ಎಂದರು.

ವಿರಕ್ತಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಗುರುಮಠಗಳಿಗೆ ಅಗೌರವ ಸೂಚಿಸುವುದು, ಸಂಘಸಂಸ್ಥೆಗಳಲ್ಲಿ ರಾಜಕೀಯ ನಡೆಸುವುದು ಸೂಕ್ತವಲ್ಲ. ನೂತನ ಮಹಾಸಭಾದ ಪದಾಧಿಕಾರಿಗಳು ಆಸಕ್ತಿ ಹಾಗೂ ಕ್ರೀಯಾಶೀಲತೆಯಿಂದ ಕಾರ್ಯನಿರ್ವಹಿಸಿ ಸಮಾಜ ಕಟ್ಟುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ADVERTISEMENT

ಮಹಾಸಭಾ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಪಿ.ಗುರುಮಾದಯ್ಯ ಮಾತನಾಡಿ, ಮಹಾಸಭಾದ ಕಾರ್ಯಚಟುವಟಿಕೆಯನ್ನು ಗ್ರಾಮೀಣ ಪ್ರದೇಶಕ್ಕೆ ತಲುಪಿಸಿ, ಜಿಲ್ಲಾದ್ಯಂತ ಇರುವ ಸಮಾಜದ ಬಂಧುಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯ ಸಂಚಾಲಕ ನಂಜುಂಡೇಶ್, ರಾಮನಗರ ತಾಲ್ಲೂಕು ಅಧ್ಯಕ್ಷ ಶಂಕರಪ್ಪ, ಮಾಗಡಿ ತಾಲ್ಲೂಕು ಅಧ್ಯಕ್ಷ ಸಾಂಬ ಶಿವಣ್ಣ, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷೆ ಶಾರದ ನಾಗೇಶ್, ಮುಖಂಡರಾದ ಬೃಗೇಶ್, ಯೋಗಾನಂದ್, ಕೆ.ಎಸ್.ಶಂಕರಪ್ಪ, ರಾಜಶೇಖರ್, ರೇಣುಕಾರಾಧ್ಯ, ಹೊನ್ನಶೆಟ್ಟಿ ರಾಜಣ್ಣ, ರುದ್ರೇಶ್, ರೇವಣ್ಣ, ವಿಜಯಕುಮಾರ್, ಶಿವಸ್ವಾಮಿ, ಗಣೇಶ್ ಭಾಗವಹಿಸಿದ್ದರು.

ಮಹಾಸಭಾದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚನ್ನಪಟ್ಟಣ ತಾಲ್ಲೂಕಿನ ಎ.ಪಿ. ರುದ್ರೇಶ್, ಎಂ. ಸುನೀತ, ಕನಕಪುರ ತಾಲ್ಲೂಕಿನ ಪಿ.ಬಿ. ಪರಮೇಶಯ್ಯ, ಕೆ.ವಿ. ನಟರಾಜು, ಕೆ.ಎನ್. ಮಹೇಶ್, ಮಾಗಡಿ ತಾಲ್ಲೂಕಿನ ಶಂಕರಪ್ಪ, ಚಂದ್ರಶೇಖರಯ್ಯ, ಜಗದೀಶ್, ಅನಿಲ್ ಕುಮಾರ್, ಎನ್. ಮಧು, ಶಾರದಮ್ಮ, ರಾಮನಗರ ತಾಲ್ಲೂಕಿನ ಎಂ.ಮಹೇಶ್, ಸೋಮೇಶ್ ಮೂರ್ತಿ, ಸರಸ್ವತಮ್ಮ, ಶಿವರಾಜಮ್ಮ, ಶೋಭ, ನಾಗರತ್ನ, ಶಶಿಕಲಾ ಪ್ರಮಾಣವಚನ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.