
ರಾಮನಗರದ ಕಂದಾಯ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಜರುಗಿತು. ಜಾನಪದ ವಿದ್ವಾಂಸ ಡಾ. ರವಿ ಯು.ಎಂ, ರಾಮನಗರ ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶೋಭಾ ಹಾಗೂ ಇತರರು ಇದ್ದಾರೆ
ರಾಮನಗರ: ‘ಮನೆಯಲ್ಲಿ ಸಿರಿ ಸಂಪತ್ತು ತುಂಬಿ ತುಳುಕುತ್ತಿದ್ದರೂ ವೇಮನರು ಎಲ್ಲಾ ವೈಭೋಗವನ್ನು ತ್ಯಜಿಸಿ ಲೋಕ ಕಲ್ಯಾಣಕ್ಕೆ ತಮ್ಮನ್ನು ಅರ್ಪಿಸಿಕೊಂಡು ಜ್ಞಾನಯೋಗಿಯಾದರು. ತೆಲುಗು ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾಯೋಗಿ ವೇಮನ ಅವರು ತತ್ವಜ್ಞಾನಿ ಮತ್ತು ಸಮಾಜ ಸುಧಾರಕರಾಗಿದ್ದಾರೆ’ ಎಂದು ಜಾನಪದ ವಿದ್ವಾಂಸ ಡಾ. ರವಿ ಯು.ಎಂ ಬಣ್ಣಿಸಿದರು.
ನಗರದ ಕಂದಾಯ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹದಿನೈದನೇ ಶತಮಾನದಲ್ಲಿ ಆಂಧ್ರಪ್ರದೇಶದ ಕಡಪದಲ್ಲಿ ವೇಮನ ಅವರು ಜನಿಸಿದರು. ಅವರ ಅತ್ತಿಗೆ ಹೇಮರಡ್ಡಿ ಮಲ್ಲಮ್ಮ ಹಾಗೂ ಗುರು ಅಭಿರಾಮಾಚಾರ್ಯ ಅವರ ಪ್ರಭಾವದಿಂದಾಗಿ ವೇಮನ ಅವರು ಬದಲಾದರು. ಮುಂದೆ ತೆಲುಗು ಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಮನೆ ಮಾತಾದವರು’ ಎಂದು ಹೇಳಿದರು.
‘ಕಾಯಕ ತತ್ವ, ಸಾಮಾಜಿಕ ವಿಡಂಬನೆ, ಸತ್ಯ, ಆತ್ಮಶುದ್ಧಿ, ವೈರಾಗ್ಯ ಅವರ ಸಾಹಿತ್ಯದ ಪ್ರಮುಖ ಅಂಶಗಳಾಗಿವೆ. ಮೂಢನಂಬಿಕೆಗಳ ವಿರೋಧಿಯಾಗಿದ್ದ ವೇಮನ ಅವರು, ಜನರಿಗೆ ಅರ್ಥವಾಗುವ ಅತ್ಯಂತ ಸರಳ ಭಾಷೆಯಲ್ಲಿ ತಮ್ಮ ತತ್ವಗಳನ್ನು ಜನರಿಗೆ ಬೋಧನೆ ಮಾಡಿದರು’ ಎಂದರು.
‘ವೇಮನ ಅವರ ನೆನಪಿನಾರ್ಥವಾಗಿ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವೇಮನ ಅಧ್ಯಯನ ಕೇಂದ್ರ ಸ್ಥಾಪಿಸಲಾಗಿದೆ. ಅಲ್ಲಿ ಅವರ ತ್ರಿಪದಿಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಕೆಲಸವಾಗುತ್ತಿದೆ. ಕೇಂದ್ರದ ಎಸ್.ಆರ್. ಪಾಟೀಲ ಅವರು ವೇಮನ ತ್ರಿಪದಿಗಳನ್ನು ಅಧ್ಯಯನ ಮಾಡಿ ಅವುಗಳ ಅರ್ಥವನ್ನು ಕನ್ನಡ ಭಾಷೆಯಲ್ಲಿ ಪಸರಿಸುತ್ತಿದ್ದಾರೆ’ ಎಂದು ತಿಳಿಸಿದರು.
‘ಆತ್ಮಶುದ್ದಿ ಇರದ ಆಚಾರ ಏತಕೆ, ಮಡಿಕೆ ಶುದ್ಧಿ ಇರದ ಅಡುಗೆ ಏತಕೆ, ಚಿತ್ತ ಶುದ್ಧಿ ಇರದ ಶಿವನ ಪೂಜೆ ಏತಕೆ ಎಂದು ಪ್ರಶ್ನಿಸಿದ ವೇಮನ ಅವರು, ನೀರುಕೋಳಿ ಸದಾ ನೀರಿನಲ್ಲಿ ಇರುತ್ತೆ, ಅದಕ್ಕೇನೂ ಪುಣ್ಯ ಲಭಿಸಲಿಲ್ಲ, ಪುಣ್ಯಕ್ಕಾಗಿ ನಾವು ನದಿ ಸ್ನಾನ ಮಾಡುತ್ತೇವೆ, ನಮಗೂ ಪುಣ್ಯ ಸಿಗಲಿಲ್ಲ. ಆತ್ಮ ಜ್ಞಾನವಿಲ್ಲದೆ ಜಲ ಸ್ನಾನದಿಂದೇನೂ ಪ್ರಯೋಜನ? ಎಂದು ವೇಮನ ಅವರು ಕಂದಾಚಾರಗನ್ನು ಪ್ರಶ್ನಿಸಿದರು’ ಎಂದು ಹೇಳಿದರು.
ರಾಮನಗರ ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶೋಭಾ, ಕನ್ನಡಪರ ಹೋರಾಟಗಾರ ಗೋವಿಂದರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಮುದಾಯದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.