ರಾಮನಗರ: ಕ್ಷುಲ್ಲಕ ಕಾರಣಕ್ಕೆ ಕುಟುಂಬವೊಂದರ ಮೇಲೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಲ್ಲಿ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ, ತಾಲ್ಲೂಕಿನ ತಮ್ಮನಾಯಕನಹಳ್ಳಿ ಕಾಲೊನಿ ಜನರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಕಚೇರಿ ಎದುರು ಗ್ರಾಮಸ್ಥರು ಜಮಾಯಿಸಿ ಪ್ರತಿಭಟಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಗ್ರಾಮಾಂತರ ಪೊಲೀಸರು, ಕೂಡಲೇ ಸ್ಥಳಕ್ಕೆ ದೌಡಾಯಿಸಿದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸುವ ಭರವಸೆ ನೀಡಿ ಗ್ರಾಮಸ್ಥರ ಮನವೊಲಿಸಿದರು. ಬಳಿಕ, ಠಾಣೆಗೆ ಕರೆದೊಯ್ದು ದೂರು ಸ್ವೀಕರಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.
ನಡೆದಿದ್ದೇನು?: ಕಾಲೊನಿಯ ಪುಟ್ಟಸ್ವಾಮಯ್ಯ ಎಂಬುವರ ಮನೆ ಮುಂದೆ ಬೆಳೆದಿದ್ದ ಹೂವಿನ ಗಿಡಗಳಿಗೆ ತುಂಬೇನಹಳ್ಳಿ ಗ್ರಾಮದ ರಾಜಣ್ಣ ಎಂಬುವರು ಬುಧವಾರ ತಮ್ಮ ಮೇಕೆಗಳನ್ನು ಬಿಟ್ಟು ಮೇಯಿಸುತ್ತಿದ್ದರು. ಇದೇ ಕಾರಣಕ್ಕಾಗಿ ಪುಟ್ಟಸ್ವಾಮಯ್ಯ ಅವರ ಅಕ್ಕ ಲಕ್ಷ್ಮಮ್ಮ ಹಾಗೂ ರಾಜಣ್ಣ ನಡುವೆ ಜಗಳವಾಗಿತ್ತು.
ಮಾರನೆಯೇ ದಿನ ಬೆಂಗಳೂರಿನಲ್ಲಿರುವ ರಾಜಣ್ಣನ ಮಕ್ಕಳಾದ ಸುನೀಲ್ ಮತ್ತು ಶಶಿಕುಮಾರ್ ಇಬ್ಬರೂ, ಪುಟ್ಟಸ್ವಾಮಯ್ಯ ಅವರ ಮನೆಗೆ ಬೆಳಿಗ್ಗೆ 6.30ರ ಸುಮಾರಿಗೆ ಬಂದು ಗಲಾಟೆ ಮಾಡಿ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದರು. ಬಿಡಿಸಲು ಬಂದ ಪತ್ನಿ ಕಾಂತಾ ಲಕ್ಷ್ಮಮ್ಮ, ಅಕ್ಕ ಲಕ್ಷ್ಮ್ಮ ಹಾಗೂ ಪುತ್ರ ಹರೀಶ್‌ಗೂ ಹೊಡೆದು ಕೊಲೆ ಬೆದರಿಕೆ ಹಾಕಿದ್ದರು.
ಕೂಗಾಟ ಕೇಳಿ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಪೊಲೀಸರಿಗೆ ಕರೆ ಮಾಡಿದ್ದರು. ಹಲ್ಲೆ ನಡೆಸಿದ್ದ ಸುನೀಲ್ ಮತ್ತು ಶಶಿಕುಮಾರ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ, ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸದೆ ಬಿಟ್ಟು ಕಳಿಸಿದ್ದಾರೆ. ಆರೋಪಿಗಳಿಬ್ಬರು ಬೆಂಗಳೂರಿನಿಂದ ಹುಡುಗರನ್ನು ಕರೆಯಿಸಿ ಆಗಾಗ ಗಲಾಟೆ ಮಾಡುತ್ತಾರೆ ಎಂದು ಗ್ರಾಮಸ್ಥರು ದೂರಿದರು.
ಘಟನೆಯಲ್ಲಿ ಗಾಯಗೊಂಡಿರುವರ ಕುಟುಂಬದವರು ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಪೈಕಿ ಪುಟ್ಟಸ್ವಾಮಿ ಅವರ ತಲೆಗೆ ಹೆಚ್ಚು ಪೆಟ್ಟು ಬಿದ್ದಿದ್ದು ಹೊಲಿಗೆ ಹಾಕಲಾಗಿದೆ. ಆರೋಪಿಗಳು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲರಾಗಿದ್ದಾರೆ. ಹಾಗಾಗಿ, ನಮಗೆ ಜೀವ ಭಯವಿದ್ದು, ಪೊಲೀಸರು ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಘಟನೆಗೆ ಸಂಬಂಧಿಸಿದಂತೆ ಕುಟುಂಬದವರು ನೀಡಿದ ದೂರಿನ ಮೇರೆಗೆ ಹಲ್ಲೆ ನಡೆಸಿದ ಶಶಿಕುಮಾರ್ ಮತ್ತು ಸುನೀಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆಜಿ.ಪಿ. ರಮೇಶ್ ಇನ್‌ಸ್ಪೆಕ್ಟರ್ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.