ADVERTISEMENT

ವೈರಾಣು ಜ್ವರಕ್ಕೆ ಜನ ಹೈರಾಣ

ಹವಾಮಾನ ಬದಲಾವಣೆ: ಮಕ್ಕಳು, ವಯಸ್ಕರಲ್ಲಿ ಹೆಚ್ಚಿದ ಜ್ವರ, ಕೆಮ್ಮು, ನೆಗಡಿ; ಆಸ್ಪತ್ರೆಗಳಲ್ಲಿ ಹೆಚ್ಚಿದ ಜನಸಂದಣಿ

ಓದೇಶ ಸಕಲೇಶಪುರ
Published 30 ಸೆಪ್ಟೆಂಬರ್ 2025, 2:29 IST
Last Updated 30 ಸೆಪ್ಟೆಂಬರ್ 2025, 2:29 IST
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಚೀಟಿ ಪಡೆಯಲು ಸರದಿಯಲ್ಲಿ ನಿಂತಿರುವ ರೋಗಿಗಳು (ಸಾಂದರ್ಭಿಕ ಚಿತ್ರ)
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಚೀಟಿ ಪಡೆಯಲು ಸರದಿಯಲ್ಲಿ ನಿಂತಿರುವ ರೋಗಿಗಳು (ಸಾಂದರ್ಭಿಕ ಚಿತ್ರ)   

ರಾಮನಗರ: ಆಗಾಗ ಮೋಡ ಕವಿದ ವಾತಾವರಣ ಮತ್ತು ಮೈಗೆ ಬಿಸಿ ತಾಕುವಂತಹ ಬಿಸಿಲು. ಅದರ ನಡುವೆಯೇ ಒಮ್ಮೆ ಜೋರಾಗಿ, ಮತ್ತೊಮ್ಮೆ ಜಿಟಿ ಜಿಟಿಯಾಗಿ ಬಂದು ಹೋಗುವ ಮಳೆ. ಮೈ ತಣ್ಣನೆಗೊಳಿಸುವ ಚಳಿ ಗಾಳಿ. ಹವಾಮಾನದಲ್ಲಿ ಆಗಿರುವ ಇಂತಹ ಬದಲಾವಣೆಯಿಂದಾಗಿ ವೈರಾಣು ಜ್ವರ ಹೆಚ್ಚಾಗಿದೆ. ಜೊತೆಗೆ ಕೆಮ್ಮು, ನೆಗಡಿ, ಮೈ–ಕೈ ನೋವು ಜನರನ್ನು ಹೈರಾಣ ಮಾಡುತ್ತಿದೆ.

ಸಾಂಕ್ರಾಮಿಕದಂತಾಗಿರುವ ಈ ಜ್ವರದಿಂದಾಗಿ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಂದಿಡಿದು ಖಾಸಗಿ ಆಸ್ಪತ್ರೆಗಳಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ರೋಗಿಗಳು ಚಿಕಿತ್ಸೆಗಾಗಿ ಮಾರುದ್ದದ ಕ್ಯೂನಲ್ಲಿ ಕಾಯುತ್ತಿರುವುದು ಸಾಮಾನ್ಯವಾಗಿದೆ. ಮಕ್ಕಳು, ವಯಸ್ಕರು, ವೃದ್ದರೆನ್ನದೆ ಎಲ್ಲಾ ವಯೋಮಾನದವರನ್ನು ಈ ಸೋಂಕು ಬಾಧಿಸುತ್ತಿದೆ.

ತಕ್ಷಣಕ್ಕೆ ಕಡಿಮೆಯಾಗದ ಜ್ವರ: ‘ಎರಡೂವರೆ ವರ್ಷದ ನನ್ನ ಮಗುವಿಗೆ ಜ್ವರ ಕಾಣಿಸಿಕೊಂಡಿತು. ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬಂದರೂ ಕಡಿಮೆಯಾಗದೆ, ನಂತರ ಕೆಮ್ಮು ಹಾಗೂ ನೆಗಡಿ ಸಹ ಶುರುವಾಯಿತು. ಆಹಾರವನ್ನು ಸಹ ಸರಿಯಾಗಿ ತಿನ್ನುತ್ತಿರಲಿಲ್ಲ. ಮಕ್ಕಳ ತಜ್ಞ ವೈದ್ಯರು ನೀಡಿದ ಔಷಧವನ್ನು ಮೂರ್ನಾಲ್ಕ ದಿನ ಕೊಟ್ಟ ಬಳಿಕ ಜ್ವರ ಮತ್ತು ನೆಗಡಿ ಕಡಿಮೆಯಾಯಿತು. ಕೆಮ್ಮು ನಿಲ್ಲಲು ಹತ್ತು ದಿನ ಬೇಕಾಯಿತು’ ಎಂದು ಗೃಹಿಣಿ ಸಂಗೀತಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮಕ್ಕಳನ್ನು ಚನ್ನಾಗಿಯೇ ನೋಡಿಕೊಳ್ಳುತ್ತೇವೆ. ಪೌಷ್ಠಿಕ ಆಹಾರವನ್ನೇ ಕೊಡುತ್ತೇವೆ. ಕಾಯಿಸಿ ಆರಿಸಿದ ನೀರನ್ನೇ ಕುಡಿಸುತ್ತೇವೆ. ನಾವು ನಗರದಲ್ಲಿ ವಾಸವಾಗಿರುವುದರಿಂದ ಮಕ್ಕಳು ಮಣ್ಣಿನಲ್ಲಿ ಸಹ ಆಟವಾಡುವುದಿಲ್ಲ. ಆದರೂ, ಮಗುವಿನಲ್ಲಿ ವೈರಾಣು ಸೋಂಕಿನ ಜ್ವರ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿತು. ಮಗುವಿಗೆ ಕಮ್ಮಿಯಾದ ಬಳಿಕ, ಮನೆಯಲ್ಲಿರುವ ವಯಸ್ಕರಿಗು ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿತು. ಎಲ್ಲರೂ ಆಸ್ಪತ್ರೆ ಮೆಟ್ಟಿಲು ಹತ್ತಿ ಬಂದೆವು’ ಎಂದು ಹೇಳಿದರು.

ಜ್ವರದ ರೋಗಿಗಳೇ ಹೆಚ್ಚು: ‘ಈ ವಾತಾವರಣವು ವೈರಾಣು ಸೋಂಕಿಗೆ ಪೂರಕವಾಗಿದೆ. ಜಿಲ್ಲಾಸ್ಪತ್ರೆಗೆ ಇತ್ತೀಚೆಗೆ ವೈರಾಣು ಜ್ವರ ಮತ್ತು ಕೆಮ್ಮಿನ ಕಾರಣಕ್ಕೆ ಬರುತ್ತಿರುವವರು ಹೆಚ್ಚಾಗಿದ್ದಾರೆ. ಇದು ಬೇಗನೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಹೆಚ್ಚಿನ ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ’ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಮಂಜುನಾಥ್ ಹೇಳಿದರು.

‘ಜಿಲ್ಲಾಸ್ಪತ್ರೆಯಲ್ಲಿ ಜ್ವರಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕೆಮ್ಮು ಸೇರಿದಂತೆ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರನ್ನು ಆಸ್ಪತ್ರೆಯಲ್ಲೇ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರೋಗಿಗಳಿಗೆ ರಕ್ತ ಪರೀಕ್ಷೆ ನಡೆಸಿ, ಡೆಂಗಿ ಅಥವಾ ಇತರ ಆರೋಗ್ಯ ಸಮಸ್ಯೆಗಳಿವೆಯೇ ಎಂಬುದನ್ನು ಸಹ ಪರೀಕ್ಷಿಸಲಾಗುತ್ತಿದೆ’ ಎಂದು ತಿಳಿಸಿದರು.

- ಜಿಲ್ಲಾಸ್ಪತ್ರೆಯಲ್ಲಿ ವೈರಾಣು ಜ್ವರಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿನ ತೀವ್ರತೆ ಹೆಚ್ಚಾಗಿರುವವರನ್ನು ಎರಡ್ಮೂರು ದಿನ ದಾಖಲಿಸಿಕೊಳ್ಳಲಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ಔಷಧಗಳ ದಾಸ್ತಾನು ಸಹ ಇದೆ
ಡಾ. ಸಿ. ಮಂಜುನಾಥ್ ಜಿಲ್ಲಾ ಶಸ್ತ್ರಚಿಕಿತ್ಸಕ ರಾಮನಗರ ಜಿಲ್ಲಾಸ್ಪತ್ರೆ

‘ಮಕ್ಕಳಿಗೆ ಬೇಗ ಹರಡುತ್ತದೆ’

‘ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ವೈರಾಣು ಸೋಂಕು ಬೇಗನೆ ಹರಡುತ್ತದೆ. ಶಾಲೆಯಲ್ಲಿ ಯಾರಿಗಾದರೂ ಸೋಂಕು ಇದ್ದರೂ ಪಕ್ಕದವರಿಗೆ ಹರಡುವ ಸಾಧ್ಯತೆ ಇರುತ್ತದೆ. ಮಕ್ಕಳಿಗೆ ಜ್ವರ ಮತ್ತು ಕೆಮ್ಮು ಇದ್ದರೆ ಗುಣಮುಖ ಆಗುವವರೆಗೆ ಕಳಿಸಬಾರದು. ಸೋಂಕು ಕಡಿಮೆಯಾಗಲು ಸ್ವಲ್ಪ ದಿನಗಳು ಬೇಕಾಗುತ್ತದೆ. ಕೆಲವೊಮ್ಮೆ ಶ್ವಾಸಕೋಸಕ್ಕೆ ಹರಡಿದಾಗ ಕೆಮ್ಮು ಹೆಚ್ಚಾಗುತ್ತದೆ. ಆಗ ಮಕ್ಕಳನ್ನು ದಾಖಲಿಸಿಕೊಂಡು ಎರಡ್ಮೂರು ದಿನ ಸತತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಮಕ್ಕಳಿಗೆ ಸೋಂಕು ಬಾರದಂತೆ ತಡೆಯಲು ಪೌಷ್ಠಿಕ ಆಹಾರ ನೀಡಬೇಕು. ಪ್ರಯಾಣ ಕಡಿಮೆ ಮಾಡಬೇಕು. ರೆಫ್ರಿಜರೇಟರ್‌ಗಳಲ್ಲಿ ಇಟ್ಟಿರುವ ತಣ್ಣನೆಯ ಆಹಾರ ಪದಾರ್ಥಗಳನ್ನು ಕೊಡಬಾರದು. ತುಪ್ಪ ಮೊಸರು ಬಾಳೆಹಣ್ಣು ಎಣ್ಣೆಯಲ್ಲಿ ಕರಿದ ತಿನಿಸುಗಳನ್ನು ನೀಡಬಾರದು’ ಎಂದು ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞೆ ಡಾ. ಶಶಿರೇಖಾ ಸಲಹೆ ನೀಡಿದರು.

ವೈದ್ಯರ ಸಲಹೆಗಳೇನು?

ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಮನೆಯೊಳಗೆ ಮತ್ತು ವೈಯಕ್ತಿಕವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಾಯಿಲೆ ಇರುವವರು ಕೆಮ್ಮುವಾಗ ಕರವಸ್ತ್ರ ಬಳಸಬೇಕು. ಅನಾರೋಗ್ಯ ಇರುವವರು ಮನೆ ಆವರಣದಲ್ಲಿ ಎಲ್ಲೆಂದರಲ್ಲಿ ಉಗುಳಬಾರದು. ಅಸ್ತಮಾ ರೋಗಿಗಳು ಗರ್ಭಿಣಿಯರು ವೃದ್ಧರು ರಕ್ತದೊತ್ತಡ (ಬಿ.ಪಿ.) ರೋಗಿಗಳು ಹೆಚ್ಚಿನ ಜಾಗ್ರತೆ ವಹಿಸಬೇಕು. ಐಸ್‌ಕ್ರೀಮ್‌ ಹಾಗೂ ಇತರ ತಂಪು ಪಾನೀಯಗಳನ್ನು ಸೇವಿಸಬಾರದು. ಬಿಸಿಯಾದ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಬೆಚ್ಚಗಿನ ಉಡುಪುಗಳನ್ನು ಧರಿಸಬೇಕು. ಕೆಮ್ಮು ಮತ್ತು ಜ್ವರ ಕಡಿಮೆಯಾಗುವವರೆಗೆ ಮಾಸ್ಕ್ ಧರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.