ADVERTISEMENT

ಮತದಾರ ಪಟ್ಟಿ ಪರಿಷ್ಕರಣೆ ಹುನ್ನಾರ

ಕಾನೂನು ಹೋರಾಟ ನಡೆಸಲು ಬಿ.ಎಸ್‌.ದೊಡ್ಡಿ ಮುಖಂಡ ಜೈರಾಮೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 8:21 IST
Last Updated 12 ಅಕ್ಟೋಬರ್ 2020, 8:21 IST
ಬಿಎಸ್‌ ದೊಡ್ಡಿ ಗ್ರಾಮದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಜೈರಾಮೇಗೌಡ ಮಾತನಾಡಿದರು
ಬಿಎಸ್‌ ದೊಡ್ಡಿ ಗ್ರಾಮದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಜೈರಾಮೇಗೌಡ ಮಾತನಾಡಿದರು   

ಕನಕಪುರ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಲ್ಲಿ ತಮ್ಮ ಕೈವಾಡವಿದೆ ಎಂದು ಗ್ರಾಮದ ರವಿಕುಮಾರ್‌ ಆರೋಪ ಮಾಡಿ ತೇಜೋವಧೆ ಮಾಡಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಕಾನೂನು ಹೋರಾಟ ನಡೆಸುವುದಾಗಿ ಬಿ.ಎಸ್‌.ದೊಡ್ಡಿ ಜೈರಾಮೇಗೌಡ ತಿಳಿಸಿದರು.

ಬಿಎಸ್‌ದೊಡ್ಡಿ, ಗಂಗಯ್ಯನದೊಡ್ಡಿ, ಜಯಲಕ್ಷ್ಮಿಪುರ, ಹೊಸದೊಡ್ಡಿ, ಬೇವಿನಮರದೊಡ್ಡಿ ಐದು ಗ್ರಾಮಗಳ ಮತಗಟ್ಟೆ ಒಂದೇ ಆಗಿದ್ದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಎಸ್‌ ದೊಡ್ಡಿ ಒಂದನ್ನು ಪತ್ರೇಕಿಸಿ ಉಳಿದ 4 ಗ್ರಾಮಗಳ ಮತಗಟ್ಟೆಯನ್ನು ಒಂದು ಮಾಡಲಾಗಿದೆ ಎಂದು ತಿಳಿಸಿದರು.

ಕ್ಷೇತ್ರ ವಿಂಗಡಣೆ ಮಾಡುವಾಗ ರವಿಕುಮಾರ್‌ ಅವರ ಒತ್ತಡದಿಂದ ಉದ್ದೇಶಪೂರ್ವಕವಾಗಿ ಬಿಎಸ್‌ದೊಡ್ಡಿ ಮತದಾರರನ್ನು ಗಂಗಯ್ಯನದೊಡ್ಡಿಗೆ, ಗಂಗಯ್ಯನದೊಡ್ಡಿ, ಜಯಲಕ್ಷ್ಮೀಪುರ, ಬೇವಿನಮರದೊಡ್ಡಿ, ಹೊಸದೊಡ್ಡಿ ಮತದಾರರನ್ನು ಬಿ.ಎಸ್‌ ದೊಡ್ಡಿ ಮತದಾರರ ಪಟ್ಟಿಯಲ್ಲಿ ಸೇರಿಸಿ ಗೊಂದಲ ಸೃಷ್ಟಿಸಲಾಗಿದೆ.

ADVERTISEMENT

ಆಯಾ ಗ್ರಾಮದ ಮತದಾರರನ್ನು ಅದೇ ಗ್ರಾಮದ ಮತದಾರರ ಪಟ್ಟಿಗೆ ಸೇರಿಸಬೇಕೆಂದು 41 ಮಂದಿ ಮತದಾರರು ಚುನಾವಣೆ ಇಲಾಖೆ ಹಾಗೂ ತಾಲ್ಲೂಕು ಆಡಳಿತಕ್ಕೆ ಅರ್ಜಿ ನೀಡಿ ಮನವಿ ಮಾಡಿದ್ದರು. ಆದರೆ, ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಬಿಎಲ್‌ಒ ಸೌಭಾಗ್ಯಮ್ಮ ಅವರಿಗೂ ಮತದಾರರ ಪಟ್ಟಿ ಸರಿಪಡಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ಯಾರದೋ ಒತ್ತಡಕ್ಕೆ ಮಣಿದು ಅರ್ಜಿದಾರರ ಮನವಿ ಪುರಸ್ಕರಿಸದೆ ನಿರ್ಲಕ್ಷ ಮಾಡಲಾಗಿದೆ ಎಂದು ದೂರಿದರು.

’ರವಿಕುಮಾರ್‌ ಪ್ರತಿ ಚುನಾವಣೆಯಲ್ಲೂ ಅಕ್ರಮ ಮೂಲಕ ಚುನಾವಣೆ ಗೆಲ್ಲುತ್ತಿದ್ದಾರೆ. ಉದ್ಧೇಶ ಪೂರ್ವಕವಾಗಿ ಗ್ರಾಮದಲ್ಲಿ ವಾಸಿಸುವವರನ್ನು ಬೇರೆ ಗ್ರಾಮದ ಮತದಾರರ ಪಟ್ಟಿಗೆ ಸೇರಿಸುವ ಕುತಂತ್ರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

’2015ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನನ್ನ ಹೆಸರು ಬೇರೆ ಗ್ರಾಮದ ಮತದಾರರ ಪಟ್ಟಿಗೆ ಸೇರಿಸಿದ್ದು ಕೇಳಲು ಹೋದಾಗ ಹಲ್ಲೆ ಮಾಡಿದ್ದರು’ ಎಂದು ದೂರಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಚಿಕ್ಕಪುಟ್ಟೇಗೌಡ, ದೊಡ್ಡವೀರೇಗೌಡ, ರವಿಕುಮಾರ್‌, ಈರೇಗೌಡ, ಲಿಂಗೇಗೌಡ, ಚಿಕ್ಕಣ್ಣ, ಕಾಳಿರೇಗೌಡ ತಮ್ಮ ಹೆಸರು ಬೇರೆ ಗ್ರಾಮದ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದರು.

ಗ್ರಾಮದ ಶಿವರುದ್ರೇಗೌಡ ಮಾತನಾಡಿ, ಕೆಲವರ ಸ್ವಾರ್ಥಕ್ಕಾಗಿ ಗ್ರಾಮದಲ್ಲಿ ರಾಜಕೀಯ ನಡೆಯುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.