ADVERTISEMENT

ಚನ್ನಪಟ್ಟಣ: ಕಸ ಸಂಗ್ರಹ ವಾಹನಗಳಿಗೆ ಜಿಪಿಎಸ್

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 2:38 IST
Last Updated 13 ನವೆಂಬರ್ 2025, 2:38 IST
ಕಸ ಸಂಗ್ರಹಣಾ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಕಾರ್ಯವನ್ನು ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ವೀಕ್ಷಿಸಿದರು. ಜಿಲ್ಲಾ ಪಂಚಾಯಿತಿ ಸಿಪಿಒ ಚಿಕ್ಕ ಸುಬ್ಬಯ್ಯ, ಇತರರು ಹಾಜರಿದ್ದರು
ಕಸ ಸಂಗ್ರಹಣಾ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಕಾರ್ಯವನ್ನು ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ವೀಕ್ಷಿಸಿದರು. ಜಿಲ್ಲಾ ಪಂಚಾಯಿತಿ ಸಿಪಿಒ ಚಿಕ್ಕ ಸುಬ್ಬಯ್ಯ, ಇತರರು ಹಾಜರಿದ್ದರು   

ಚನ್ನಪಟ್ಟಣ: ಪ್ರತಿ ದಿನ ಕಸ ಸಂಗ್ರಹಿಸಲು ಸಾರ್ವಜನಿಕರ ಮನೆಯ ಬಳಿಗೆ ಬರುವ ಕಸ ಸಂಗ್ರಹದ ವಾಹನಗಳು ಇನ್ನು ಮುಂದೆ ಕಳ್ಳಾಟ ಆಡುವಂತಿಲ್ಲ. ಸಬೂಬು ಹೇಳುವಂತಿಲ್ಲ. ಪ್ರತಿದಿನ ಬೆಳಗ್ಗೆ ಆಯಾಯ ಮನೆ ಬಳಿಗೆ ತೆರಳಿ ಕಸ ಸಂಗ್ರಹಿಸಲೇಬೇಕು.

ಇದಕ್ಕೆ ಕಾರಣ ಜಿಲ್ಲಾ ಪಂಚಾಯತಿ ಕಸ ಸಂಗ್ರಹ ವಾಹನಗಳಿಗೆ ಅಳವಡಿಸಿರುವ ಜಿಪಿಎಸ್ ಸಾಧನ. ಆ ಮೂಲಕ ಕಸ ಸಂಗ್ರಹಣೆ ಹಾಗೂ ವಿಲೇವಾರಿಗೆ ತ್ವರಿತ ಹಾಗೂ ಪರಿಣಾಮಕಾರಿ ಹೆಜ್ಜೆ ಇಟ್ಟಿದೆ.

ಜಿಲ್ಲಾ ಪಂಚಾಯಿತಿ ಜಿಲ್ಲೆಯ ಐದು ತಾಲ್ಲೂಕುಗಳ ಎಲ್ಲಾ 126 ಗ್ರಾಮ ಪಂಚಾಯತಿಗಳ 126 ಕಸ ಸಂಗ್ರಹ ವಾಹನಗಳಿಗೂ ಜಿಪಿಎಸ್ ಅಳವಡಿಸಲು ಮುಂದಾಗಿದೆ. 

ಕಸ ಸಮಸ್ಯೆಯಿಂದ ಸೃಷ್ಟಿಯಾಗುತ್ತಿರುವ ಅವಾಂತರಗಳನ್ನು ನಿವಾರಿಸಲು ಜಿಲ್ಲಾ ಪಂಚಾಯತಿಯು ಜಿಲ್ಲೆಯ ಎಲ್ಲಾ ಪಂಚಾಯತಿಗಳಲ್ಲಿ ಕಸ ಸಂಗ್ರಹ ವಾಹನಗಳನ್ನು ವ್ಯವಸ್ಥೆ ಮಾಡಿತ್ತು. ಈ ವಾಹನಗಳು ಪ್ರತಿ ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದವು. ಆದರೆ ಕೆಲವು ಕಸದ ವಾಹನ ಕಸ ಸಂಗ್ರಹಿಸಲು ಗ್ರಾಮಗಳಿಗೆ ಹೋಗದೆ ಕಳ್ಳಾಟವಾಡುತ್ತಿದ್ದ ಆರೋಪ ಕೇಳಿಬಂದಿದ್ದವು. ಇದರಿಂದ ಕಸ ಸಂಗ್ರಹ ಕಾರ್ಯಕ್ಕೆ ಹಿನ್ನಡೆಯಾಗಿತ್ತು.  

ಕಸ ಸಂಗ್ರಹ ವಾಹನ ಬಾರದಿದ್ದಾಗ ಜನರು ಪಂಚಾಯತಿ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡುತ್ತಿದ್ದರು. ಈ ಬಗ್ಗೆ ವಾಹನ ಚಾಲಕರನ್ನು ವಿಚಾರಿಸಿದರೆ ‘ಅಲ್ಲಿ ಕಸ ಇರಲಿಲ್ಲ. ನಾನು ಹೋಗಿದ್ದೆ. ಜನರು ಸುಳ್ಳು ಹೇಳುತ್ತಿದ್ದಾರೆ’ ಮುಂತಾದ ಸಬೂಬು ಹೇಳುತ್ತಿದ್ದರು.  ಅಧಿಕಾರಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಲಕ್ಷಾಂತರ ರೂಪಾಯಿ ಹಣ ನೀಡಿ ಖರೀದಿಸಿದ ವಾಹನ, ವೇತನ ನೀಡಿ ನೇಮಿಸಿರುವ ಚಾಲಕರಿದ್ದರೂ ಕಸ ಸಂಗ್ರಹ ನಿರೀಕ್ಷಿತ ಗುರಿ ಮುಟ್ಟದಿರುವುದನ್ನು ಮನದಟ್ಟು ಮಾಡಿಕೊಂಡ ಅಧಿಕಾರಿಗಳು ಕಸ ಸಂಗ್ರಹಿ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಚಿಂತನೆ ನಡೆಸಿದ್ದರು.

ADVERTISEMENT

126 ವಾಹನಗಳಿಗೆ ಜಿಪಿಎಸ್‌

ಜಿಲ್ಲೆಯ ರಾಮನಗರ ಚನ್ನಪಟ್ಟಣ ಮಾಗಡಿ ಕನಕಪುರ ಹಾಗೂ ಹಾರೋಹಳ್ಳಿ ತಾಲ್ಲೂಕಿನ 126 ಗ್ರಾಮ ಪಂಚಾಯಿತಿಗಳ 126 ಕಸದ ವಾಹನಗಳಿಗೂ ಜಿಪಿಎಸ್ ಅಳವಡಿಸಿ ಕಸ ಸಂಗ್ರಹ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಮುಂದಾಗಿದ್ದಾರೆ. ಕಸದ ವಾಹನಗಳಿಗೆ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಅಳವಡಿಸುವುದರಿಂದ ಕಸದ ವಾಹನ ಎಲ್ಲಿದೆ ಎಲ್ಲಿ ಹೋಗುತ್ತಿದೆ ಯಾವ ಸಮಯಕ್ಕೆ ಹೋಗಿ ಎಷ್ಟು ಸಮಯದಲ್ಲಿ ವಾಪಸ್ ಬಂದಿದೆ ಎಂಬುದನ್ನು ತಿಳಿಯಬಹುದಾಗಿದೆ. ಇದರಿಂದ ಚಾಲಕರ ಕಳ್ಳಾಟ ಸ್ಥಗಿತವಾಗುವುದರ ಜೊತೆಗೆ ತ್ಯಾಜ್ಯ ಸಂಗ್ರಹ ಸಹ ಸಮರ್ಪಕವಾಗಿ ಸಾಗಲಿದೆ. ಕಸ ಸಂಗ್ರಹ ವಾಹನಗಳ ಚಲನವಲನವನ್ನು ಪರಿಶೀಲಿಸುವ ಸಲುವಾಗಿಯೇ ಆ್ಯಪ್‌ ರೂಪಿಸಲಾಗಿದೆ. ಪ್ರತಿದಿನ ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರಿಗಳು ಕಸ ಸಂಗ್ರಹ ವಾಹನಗಳ ಕಾರ್ಯಚಟುವಟಕೆಗಳನ್ನು ವೀಕ್ಷಣೆ ಮಾಡುತ್ತಾರೆ. ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹ ಮಾಡುತ್ತಿರುವ ವಾಹನಗಳ ಮೇಲೆ ಅಧಿಕಾರಿಗಳು ನಿಗಾ ಇಡುವ ಕಾರಣ ಕಸ ಸಂಗ್ರಹ ವಾಹನಗಳು ಕಳ್ಳಾಟವಾಡಲು ಸಾಧ್ಯವಾಗುವುದಿಲ್ಲ.

ಜಿಲ್ಲೆಯ ಎಲ್ಲಾ ಕಸ ಸಂಗ್ರಹ ವಾಹನಗಳಿಗೂ ಜಿಪಿಎಸ್ ಅಳವಡಿಸುವ ಮೂಲಕ ಅವುಗಳ ನಿಖರವಾದ ಚಲನವಲನ ಹಾಗೂ ಸಿಬ್ಬಂದಿ ಮೇಲೆ ನಿಗಾ ವಹಿಸಲು ಜಿಲ್ಲಾ ಪಂಚಾಯತಿ ಕ್ರಮ ಕೈಗೊಂಡಿದೆ. ಇದು ಗ್ರಾಮಗಳಲ್ಲಿ ಕಸ ಸಂಗ್ರಹವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಕಾರಿಯಾಗಲಿದೆ.
– ಚಿಕ್ಕಸುಬ್ಬಯ್ಯ, ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಪಂಚಾಯತಿ.
ಕಸ ಸಂಗ್ರಹಣಾ ವಾಹನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.