ADVERTISEMENT

ಹಾರೋಹಳ್ಳಿ | ನಿಂತಲ್ಲೇ ತುಕ್ಕು ಹಿಡಿದ ಕಸ ವಿಲೇವಾರಿ ವಾಹನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 6:28 IST
Last Updated 20 ಡಿಸೆಂಬರ್ 2023, 6:28 IST
ಜಕ್ಕಸಂದ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸ
ಜಕ್ಕಸಂದ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸ    

ಹಾರೋಹಳ್ಳಿ: ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಉದ್ದೇಶದಿಂದ ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆಯಿಂದ ಒಣ, ಹಸಿ ಕಸ ಹಾಕಲು ಗ್ರಾಮ ಪಂಚಾಯಿತಿಗಳಿಗೆ ವಾಹನ ವ್ಯವಸ್ಥೆ ಮಾಡಿದೆ. ಆದರೆ, ವಾಹನ ಬಳಕೆಯಾಗದೆ ನಿಂತಲ್ಲಿ ತುಕ್ಕು ಹಿಡಿಯುತ್ತಿದೆ.

ಹಾರೋಹಳ್ಳಿ 11 ಗ್ರಾಮ ಪಂಚಾಯಿತಿ ಹಾಗೂ ಒಂದು ಪಟ್ಟಣ ಇದೆ. ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ನಿರಂತರವಾಗಿ ಕಸ ಸಂಗ್ರಹವಾಗುತ್ತಿದ್ದು ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 6-7 ತಿಂಗಳಿಂದ ಗ್ರಾಮಗಳಿಗೆ ತೆರಳಿ ಕಸ ಸಂಗ್ರಹ ಮಾಡಿಲ್ಲ. ಪಿಡಿಒಗಳಿಗೆ ಈ ಬಗ್ಗೆ ಮಾಹಿತಿ ಕೇಳಿದರೆ ವಾಹನ ರಿಪೇರಿ ಇತ್ತು ಎಂದು ಹೇಳುತ್ತಾರೆ. 

ಜಾಗೃತಿ ಕೊರತೆ

ADVERTISEMENT

ಹಸಿ ಹಾಗೂ ಒಣ ಕಸ ಹಾಕಲು ಎರಡು ಬೇರೆ ಬೇರೆ ಬಕೆಟ್ ಕೊಡಲಾಗಿದೆ. ಆದರೆ, ಜನರು ಮಾತ್ರ ಬಕೆಟ್‌ಗಳಲ್ಲಿ ಕಸ ಹಾಕುವುದನ್ನು ಬಿಟ್ಟು ಅವುಗಳನ್ನು ಬೇರೆ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ.

ಸಾರ್ವಜನಿಕರು ಕಸ ಬೇರ್ಪಡಿಸುತ್ತಿಲ್ಲ ಹಾಗೂ ಗ್ರಾ.ಪಂನಿಂದ ನೀಡಿದ ಬಕೆಟ್‌ಗಳಲ್ಲಿ ಕಸ ಹಾಕುತ್ತಿಲ್ಲ ಎಂಬ ಮಾಹಿತಿ ಅಧಿಕಾರಿಗಳಿಗೆ ಇದ್ದರೂ ಹಸಿ ಹಾಗೂ ಒಣ ಕಸ ಬೇರೆ ಬೇರೆ ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿಲ್ಲ. ಇದರಿಂದ ಗ್ರಾಮಸ್ಥರು ಚರಂಡಿ ಹಾಗೂ ಖಾಲಿ ಜಾಗದಲ್ಲಿ ಕಸ ಎಸೆಯುತ್ತಿದ್ದಾರೆ.

ಸಮರ್ಪಕವಾಗಿ ನಡೆಯದ ಸಂಗ್ರಹ

ಗ್ರಾಮಸ್ಥರಿಂದ ಸಂಗ್ರಹಿಸಿದ ಕಸ ಹಾಕಲು ಸಮೀಪದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿದೆ. ಗ್ರಾ.ಪಂನಿಂದ ಸಂಗ್ರಹವಾದ ಕಸ ತೆಗೆದುಕೊಂಡು ಹೋಗಲು ಕಳೆದ ಕೆಲವು ತಿಂಗಳ ಹಿಂದೆ ಕಸದ ವಾಹನ ಕೂಡ ನೀಡಲಾಗಿತ್ತು. ಆದರೆ, ಒಂದು ದಿನವೂ ಕಸ ವಿಲೇವಾರಿ ಮಾಡಿಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ.

ತುಕ್ಕು ಹಿಡಿಯುತ್ತಿರುವ ವಾಹನಗಳು

ತಾಲ್ಲೂಕಿನ ಕೆಲವೆಡೆ ಕಸ ಸಂಗ್ರಹ ವಾಹನಗಳು ತುಕ್ಕು ಹಿಡಿಯುವ ಸ್ಥಿತಿಗೆ ಬಂದಿವೆ. ವಾಹನಗಳು ಮುಖ್ಯ ಬೀದಿಗಳಲ್ಲಿ ಮಾತ್ರ ಸಂಚರಿಸಿ ಕಸ ಸಂಗ್ರಹ ಮಾಡುತ್ತಿವೆ. ಒಳ ರಸ್ತೆಗಳಲ್ಲಿ ಸಂಚಾರ ಮಾಡುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ವಾಹನಗಳ ನಿರ್ವಹಣೆ ಕಷ್ಟ

ಆದಾಯ ಇಲ್ಲದ ಗ್ರಾಮ ಪಂಚಾಯಿತಿಗಳಲ್ಲಿ ನಿರ್ವಹಣೆ ಕಷ್ಟ ಎನ್ನುತ್ತಾರೆ ಸಿಬ್ಬಂದಿ. 

ನಿರಂತರವಾಗಿ ಕಸ ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗುವುದು.
ಬೈರಪ್ಪ, ತಾಲ್ಲೂಕು ಪಂಚಾಯಿತಿ ಇಒ
ಕಳೆದ ಆರು ತಿಂಗಳಿನಿಂದ ಕಸ ವಿಲೇವಾರಿ ಮಾಡದೆ ವಾಹನ ನಿಲ್ಲಿಸಲಾಗಿತ್ತು. ಈಗ ವಿಲೇವಾರಿ ನಡೆದಿದೆ
ಶ್ರೀದೇವಿ, ಪಿಡಿಒ, ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿ
ರಿಪೇರಿಯಿಂದಾಗಿ ಕಸ ಸಂಗ್ರಹ ನಿಲ್ಲಿಸಲಾಗಿದೆ. ಶೀಘ್ರ ವಿಲೇವಾರಿ ಮಾಡಲಾಗುವುದು
ಮಹದೇವ್, ಪಿಡಿಒ, ಚೀಲೂರು
3-4 ತಿಂಗಳಿನಿಂದ ಕಸ ಸಂಗ್ರಹ ವಾಹನ ಗ್ರಾಮಕ್ಕೆ ಬರುತ್ತಿಲ್ಲ.
ಕುಮಾರ್ ದೇವರಹಳ್ಳಿ, ಗ್ರಾಮಸ್ಥ
ಕಸ ಸಂಗ್ರಹ ಮಾಡಿರುವ ವಾಹನ
ದೊಡ್ಡ ಮರಳವಾಡಿ ಕಸ ವಿಲೇವಾರಿ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.