ADVERTISEMENT

ನೆಲ್ಲಿಗುಡ್ಡೆ ಕೆರೆ ಏರಿಯಲ್ಲಿ ನೀರು ಸೋರಿಕೆ: ದುರಸ್ತಿಗೆ ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 2:55 IST
Last Updated 2 ಫೆಬ್ರುವರಿ 2022, 2:55 IST

ಬಿಡದಿ: ಕುಡಿಯುವ ನೀರಿಗೆ ಆಸರೆಯಾಗಿರುವ ನೆಲ್ಲಿಗುಡ್ಡೆ ಕೆರೆ ಏರಿಯಲ್ಲಿ ನೀರು ಸೋರಿಕೆಯಾಗುತ್ತಿದೆ.

ಇತ್ತೀಚೆಗೆ ಸುರಿದ ಮಳೆಯಿಂದ ನೆಲ್ಲಿಗುಡ್ಡೆ ಕೆರೆ ಭರ್ತಿಯಾಗಿದೆ. ಈ ಕೆರೆಗೆ ಸುಮಾರು ಒಂದು ಕಿಲೋಮೀಟರ್ ಉದ್ದದ ಬೃಹತ್ ಏರಿ ನಿರ್ಮಿಸಲಾಗಿದೆ. ಕೆರೆಯು ಮಗ್ಗುಲಲ್ಲಿ ಸಾಗುವ ರಸ್ತೆಯು ಬಿಡದಿಯಿಂದ ಶೆಟ್ಟಿಗೌಡನದೊಡ್ಡಿ-ಗಾಣಕಲ್ ಮಾರ್ಗವಾಗಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಏರಿಯ ತಪ್ಪಲಿನಲ್ಲಿ ಇದೀಗ ನೀರು ಸೋರಿಕೆ ಕಾಣಿಸಿಕೊಂಡಿದೆ.

ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಕೆರೆಯ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆಬದಿಯಲ್ಲಿ ಒಂದು ಕಡೆ ಕೆರೆಯ ಏರಿ ಇದ್ದು, ಮತ್ತೊಂದು ಬದಿಯಲ್ಲಿ ಆಲದಮರ ಮರಗಳನ್ನು ಬೆಳೆಸಲಾಗಿದೆ. ಆಲದ ಮರಗಳ ಬೇರುಗಳು ಏರಿಯ ಒಳಗೆ ಹರಡಿಕೊಂಡಿದ್ದು, ಮಣ್ಣನ್ನು ಸಡಿಲಗೊಳಿಸುವುದರಿಂದ ನೀರು ಸೋರಿಕೆ ಆಗುತ್ತಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ: ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ಕೂಡಲೇ ಅಧಿಕಾರಿಗಳು ಗಮನಹರಿಸಿ ನೆಲ್ಲಿಗುಡ್ಡೆ ಕೆರೆ ಏರಿಯ ಕೆಳಗೆ ಸೋರುತ್ತಿರುವ ನೀರನ್ನು ಸರಿಪಡಿಸಿ ಅಪಾಯ ತಪ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಸುಮಾರು 20 ವರ್ಷಗಳ ಹಿಂದೆ ಏರಿ ನಿರ್ಮಿಸಲಾಗಿದೆ. ನೀರು ಸೋರಿಕೆಯಿಂದ ಸಾರ್ವಜನಿಕರು ಆತಂಕಗೊಳಗಾಗಿದ್ದಾರೆ’ ಎಂದು ರೈತ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ನರಸಿಂಹಯ್ಯ ತಿಳಿಸಿದ್ದಾರೆ.

‘ಕೆರೆಯೂ ಸಂಪೂರ್ಣ ನೀರು ತುಂಬಿದಾಗ ಏರ್ ಔಟ್ ಆದಾಗ ನೀರು ಸೋರಿಕೆಯಾಗುವುದು ಸಾಮಾನ್ಯ. ಇದರಿಂದ ಯಾವುದೇ ತೊಂದರೆ ಇಲ್ಲ. ಅಧಿಕಾರಿಗಳೊಂದಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ದುರಸ್ತಿಗೆ ಕ್ರಮವಹಿಸಲಾಗುವುದು’ ಎಂದು ಶಾಸಕ ಎ. ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.