ADVERTISEMENT

3–4 ದಿನ ನೀರು ಪೂರೈಕೆ ಬಂದ್‌

ಒಡೆದ ಪೈಪ್‌ ದುರಸ್ತಿ ಕಾರ್ಯ: ನೀರು ಸರಬರಾಜಿನಲ್ಲಿ ಮತ್ತೆ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 14:51 IST
Last Updated 19 ಡಿಸೆಂಬರ್ 2019, 14:51 IST

ರಾಮನಗರ: ಚನ್ನಪಟ್ಟಣ, ರಾಮನಗರ ನಗರಗಳಿಗೆ ಮತ್ತೆ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. ಈ ಬಾರಿ ಮೂರ್ನಾಲ್ಕು ದಿನ ಕಾಲ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ಇದೇ 20 ರಿಂದ 23 ರವರೆಗೆ ರಾಮನಗರಕ್ಕೆ ಹಾಗೂ ಚನ್ನಪಟ್ಟಣ ನಗರಕ್ಕೆ ಇದೇ 20 ರಿಂದ 22ರ ವರೆಗೆ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ. ಹೀಗಾಗಿ ಜನರು ಮನೆಯಲ್ಲಿ ಸಂಗ್ರಹಗೊಂಡ ನೀರನ್ನೇ ಮಿತವ್ಯಯವಾಗಿ ಬಳಸುವುದು ಅನಿವಾರ್ಯ ಆಗಲಿದೆ.

ಈ ಎರಡೂ ನಗರಗಳಿಗೆ ತೊರೆಕಾಡನಹಳ್ಳಿಯಿಂದ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ. ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿ ಪಂಚಾಯಿತಿ ಎದುರು ಮತ್ತು ರಾಮನಗರ ನಗರಕ್ಕೆ ಸರಬರಾಜು ಮಾಡುವ ಕೆಂಗಲ್ ದೇವಸ್ಥಾನದ ಸೇತುವೆ ಹತ್ತಿರ 600 ಎಂ.ಎಂ. ವ್ಯಾಸ ಮತ್ತು 450 ಎಂ.ಎಂ. ವ್ಯಾಸದ ಏರು ಕೊಳವೆ ಮಾರ್ಗಗಳ ಎರಡು ಕಡೆಗಳಲ್ಲಿ ಅಧಿಕವಾಗಿ ನೀರಿನ ಸೋರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಶುಕ್ರವಾರ ಮುಂಜಾನೆಯಿಂದಲೇ ಈ ಕಾಮಗಾರಿಯು ಆರಂಭಗೊಳ್ಳಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಚನ್ನಪಟ್ಟಣ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.

ADVERTISEMENT

ದುರಸ್ತಿ ಕಾಮಗಾರಿಯ ಕಾರಣ ನೀಡಿ ಜಲಮಂಡಳಿಯು ಈಚೆಗಷ್ಟೇ ಈ ಎರಡೂ ನಗರಗಳಿಗೆ ಮೂರು ದಿನ ಕಾಲ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ನೀರು ಬಂದ್‌ ಆಗುತ್ತಿರುವ ಕಾರಣ ಜನರಿಗೆ ತೊಂದರೆ ಆದಂತೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.