ADVERTISEMENT

ಜೆಡಿಎಸ್‌–ಬಿಜೆಪಿ ಮೈತ್ರಿ ಬಗ್ಗೆ ತಿಳಿದಿಲ್ಲ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 10:15 IST
Last Updated 22 ಡಿಸೆಂಬರ್ 2020, 10:15 IST
   

ರಾಮನಗರ: ‘ಜೆಡಿಎಸ್‌–ಬಿಜೆಪಿ ಮೈತ್ರಿ ವಿಚಾರ ಆಯಾ ‍ಪಕ್ಷಗಳಿಗೆ ಬಿಟ್ಟದ್ದು. ನಾವು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಪತ್ನಿ ಉಷಾ ಜೊತೆಗೂಡಿ ಮತದಾನ ಮಾಡಿದ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು. ‘ಜೆಡಿಎಸ್‌ನವರೇನು ದಡ್ಡರಲ್ಲ. ಅವರಿಗೆ ಅವರದ್ದೇ ಆದ ಅನುಭವ ಇದೆ. ಅವರು ಏನು ಬೇಕಾದರೂ ತೀರ್ಮಾನ ಕೈಗೊಳ್ಳಲಿ. ಅದರಿಂದ ಕಾಂಗ್ರೆಸ್‌ಗೆ ಯಾವುದೇ ತೊಂದರೆ ಇಲ್ಲ. ನಮಗೆ ನಮ್ಮ ಪಕ್ಷ, ಕಾರ್ಯಕರ್ತರಷ್ಟೇ ಮುಖ್ಯ’ ಎಂದರು.

‘ದೇಶದ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ರಾಜಸ್ಥಾನ, ಮಹಾರಾಷ್ಟ್ರ, ಬಿಹಾರದಲ್ಲಿಯೂ ಸಾಕಷ್ಟು ರಾಜಕೀಯ ಸ್ಥಿತ್ಯಂತರಗಳು ನಡೆದಿವೆ. ಹೀಗಾಗಿ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು’ ಎಂದರು.

ADVERTISEMENT

ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಯ ಸೋಲಿಗೆ ಕಾಂಗ್ರೆಸ್‌ನ ಕೆಲವರೂ ಕಾರಣ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು ‘ಕ್ಷೇತ್ರದ ಮೇಲೆ ಸಾಕಷ್ಟು ಹಿಡಿತ ಹೊಂದಿದ್ದ ಸಿದ್ದರಾಮಯ್ಯ ಅವರಿಗೆ ಮತಗಳು ಸಾಕಷ್ಟು ವ್ಯತ್ಯಾಸ ಆಗಿರುವುದು ಗೊತ್ತಾಗಿತ್ತು. ಜೊತೆಯಲ್ಲಿ ಇದ್ದವರೇ ಓಟು ಹಾಕಲಿಲ್ಲ ಎಂದ ಮೇಲೆ ಕಾರ್ಯಕರ್ತರಿಗೆ ಸ್ವಲ್ಪ ಚುರುಕಾಗಿ ಹೇಳಬೇಕಿತ್ತು. ಆ ಕೆಲಸವನ್ನು ಅವರು ಮಾಡಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ವಿರುದ್ಧ ಯಾವ ಮುಖಂಡರೂ ಹೈಕಮಾಂಡ್‌ಗೆ ದೂರು ನೀಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.