ADVERTISEMENT

ರಾಮನಗರ | ಜಾಲಮಂಗಲ ರಸ್ತೆ ದೂಳಿಗೆ ಮುಕ್ತಿ ಯಾವಾಗ?

ರಸ್ತೆ ಅಗೆದು ಬೇಕಾಬಿಟ್ಟಿ ಮುಚ್ಚಿದರು; ಹದಗೆಟ್ಟ ರಸ್ತೆಯಲ್ಲಿ ಹೆಣಗಾಡುತ್ತಿರುವ ಜನರು

ಓದೇಶ ಸಕಲೇಶಪುರ
Published 1 ಏಪ್ರಿಲ್ 2024, 4:38 IST
Last Updated 1 ಏಪ್ರಿಲ್ 2024, 4:38 IST
ರಾಮನಗರದ ಜಾಲಮಂಗಲ ರಸ್ತೆ ಹದಗೆಟ್ಟಿರುವುದರು ವಿಪರೀತ ದೂಳು ಏಳುತ್ತಿದೆ
ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ರಾಮನಗರದ ಜಾಲಮಂಗಲ ರಸ್ತೆ ಹದಗೆಟ್ಟಿರುವುದರು ವಿಪರೀತ ದೂಳು ಏಳುತ್ತಿದೆ ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ   

ರಾಮನಗರ: ‘ಅಭಿವೃದ್ಧಿ ಕೆಲಸಕ್ಕೆ ನಮ್ಮ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೋರುವ ಉತ್ಸಾಹ, ಕೈಗೊಂಡ ಕೆಲಸವನ್ನು ಸಕಾಲದಲ್ಲಿ ಮುಗಿಸುವುದರಲ್ಲಿ ಕಾಣುವುದಿಲ್ಲ. ಕಾಮಗಾರಿಯಿಂದಾಗಿ ಜನರಿಗಾಗುತ್ತಿರುವ ತೊಂದರೆಗೆ ಅವರ ಕಣ್ಣು ಕುರುಡಾದರೆ, ಕಿವಿ ಕಿವುಡಾಗಿರುತ್ತದೆ. ರಾಮನಗರದಾದ್ಯಂತ ಹದಗೆಟ್ಟಿರುವ ರಸ್ತೆಗಳೇ ಇದಕ್ಕೆ ನಿದರ್ಶನ...’

– ವರ್ಷದಿಂದ ತೀರಾ ಹದಗೆಟ್ಟಿರುವ ಜಾಲಮಂಗಲ ರಸ್ತೆಯ ನಿತ್ಯದ ದೂಳು ಹಾಗೂ ಗುಂಡಿಬಿದ್ದ ರಸ್ತೆಯ ಪ್ರಯಾಸದ ಓಡಾಟ ಕಂಡು ಬೇಸತ್ತಿರುವ ಕೆಂಪೇಗೌಡ ವೃತ್ತದ ಕೆಲ ವ್ಯಾಪಾರಿಗಳು ‘ಪ್ರಜಾವಾಣಿ’ಯೊಂದಿಗೆ ತೋಡಿಕೊಂಡ ಅಸಮಾಧಾನವಿದು.

‘ರಸ್ತೆಯಲ್ಲಿ ಓಡಾಡೋಕೆ ಆಗುತ್ತಿಲ್ಲ, ದುರಸ್ತಿ ಮಾಡಿ ಸ್ವಾಮಿ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹೇಳಿ ಸಾಕಾಗಿದೆ. ಆದರೂ, ರಸ್ತೆಯ ಚಹರೆ ಮಾತ್ರ ಬದಲಾಗಿಲ್ಲ. ನಿತ್ಯ ಸಾವಿರಾರು ವಾಹನಗಳು ಓಡಾಡುವ ರಸ್ತೆಯ ಸ್ಥಿತಿಯೇ ಹೀಗಾದರೆ, ಇನ್ನು ಗಲ್ಲಿ ರಸ್ತೆಗಳ ಪಾಡೇನು?’ ಎಂದು ಅವರು ಪ್ರಶ್ನಿಸಿದರು. ಅವರ ಮಾತಿಗೆ ಅಕ್ಕಪಕ್ಕದ ವ್ಯಾಪಾರಿಗಳು ದನಿಗೂಡಿಸಿದರು.

ADVERTISEMENT

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತದಿಂದ ಶುರುವಾಗುವ ಮಾಗಡಿಯ ರಸ್ತೆಯಿಂದ ಕೆಂಪೇಗೌಡ ವೃತ್ತದವರೆಗೆ ಮತ್ತು ಅಲ್ಲಿಂದ ಆರಂಭವಾಗುವ ಜಾಲಮಂಗಲ ರಸ್ತೆಯ ಜಯಪುರದವರೆಗೆ ಹೋಗಿ ಬಂದರೆ ವ್ಯಾಪಾರಿಗಳ ಮಾತು ಅತಿಶಯೋಕ್ತಿ ಎನಿಸದು. ಸುಮಾರು ಎರಡು ಕಿ.ಮೀ ಉದ್ದದ ಈ ರಸ್ತೆಯು ಯಾವ ಕುಗ್ರಾಮದ ಹದಗೆಟ್ಟ ರಸ್ತೆಗೂ ಕಮ್ಮಿ ಏನಿಲ್ಲ. ಗುಂಡಿ ಬಿದ್ದು ಅಷ್ಟರ ಮಟ್ಟಿಗೆ ಹಾಳಾಗಿದೆ.

ಅಂದಹಾಗೆ, ರಸ್ತೆಯ ಈ ಸ್ಥಿತಿಗೆ ಅಭಿವೃದ್ಧಿ ಕಾಮಗಾರಿ ಕಾರಣ. ನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ ಕಾಮಗಾರಿಗಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯವರು (ಕೆಯುಡಬ್ಲ್ಯೂಎಸ್‌ಡಿಬಿ) ರಸ್ತೆ ಅಗೆದರು. ಬಳಿಕ ಬೇಕಾಬಿಟ್ಟಿಯಾಗಿ ಮುಚ್ಚಿದರು. ಬಳಿಕ, ಅನಿಲ ಪೂರೈಕೆ ಕೊಳವೆ ಮಾರ್ಗಕ್ಕಾಗಿ ಖಾಸಗಿ ಕಂಪನಿಯವರು ಕೆಲವೆಡೆ ಅಗೆದರು. ಅವರು ಸಹ ತೇಪೆ ಹಾಕಿ ಹೋದರು. ಒಂದು ಮಳೆಗಾಲ ಕಳೆದರೂ ರಸ್ತೆ ಚಹರೆ ಬದಲಾಗಿಲ್ಲ.

ದೂಳಿನ ಗೋಳು: ‘ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿರುವುದರಿಂದ ವಿಪರೀತ ದೂಳು ಏಳುತ್ತದೆ. ಬಿಸಿಲ ಬೇಗೆಗೆ ನೆಲವು ಕಾದ ಹೆಂಚಿನಂತಾಗಿರುತ್ತದೆ. ದೊಡ್ಡ ವಾಹನಗಳು ಸಂಚರಿಸುತ್ತಿದ್ದರೆ ಹಿಂದಿನವರೆಗೆ ರಸ್ತೆ ಕಾಣದಷ್ಟು ದೂಳು ಆವರಿಸಿಕೊಳ್ಳುತ್ತದೆ. ರಸ್ತೆ ಅಕ್ಕಪಕ್ಕ ಅಂಗಡಿ–ಮಳಿಗೆಗಳು, ವ್ಯಾಪಾರಿಗಳು ಹಾಗೂ ನಿವಾಸಿಗಳ ಗೋಳು ಹೇಳತೀರದು’ ಎಂದು ಸ್ಥಳೀಯ ನಿವಾಸಿ ಸಿದ್ದಲಿಂಗೇಗೌಡ ಅಳಲು ತೋಡಿಕೊಂಡರು.

‘ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕೆಂಪೇಗೌಡ ವೃತ್ತದವರೆಗೆ ಎರಡೂ ರಸ್ತೆಯನ್ನೂ ಒಂದೊಂದು ಭಾಗದಲ್ಲಿ ಅಗೆದು ಹಾಗೆಯೇ ಮಣ್ಣು ಮುಚ್ಚಲಾಗಿದೆ. ವಾಹನಗಳ ಸವಾರರು ಚನ್ನಾಗಿರುವ ಕಡೆಯಷ್ಟೇ ಓಡಾಡುತ್ತಾರೆ. ಉಳಿದ ಭಾಗವು ವಾಹನಗಳ ಪಾರ್ಕಿಂಗ್ ತಾಣವಾಗಿರುವುದರಿಂದ ರಸ್ತೆ ಕಿರಿದಾಗಿದೆ. ಸಂಜೆಯಾದರೆ ಇಲ್ಲಿ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ’ ಎಂದರು.

ವಾಹನಗಳ ಸಂಚಾರ ಮತ್ತು ಪಾದಚಾರಿಗಳ ಓಡಾಟಕ್ಕೆ ಪ್ರಯಾಸವಾಗಿರುವ ರಸ್ತೆಯನ್ನು ಕೂಡಲೇ ದುರಸ್ತಿಪಡಿಸಬೇಕು ಎಂದು ಕೆಲ ದಿನಗಳ ಹಿಂದೆ, ಜಾಲಮಂಗಲ ರಸ್ತೆಯ ಅಕ್ಕಪಕ್ಕದ ಬಡಾವಣೆಗಳ ಸ್ಥಳೀಯ ನಿವಾಸಿಗಳು, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಆದರೂ, ರಸ್ತೆ ಸ್ಥಿತಿ ಮಾತ್ರ ಬದಲಾಗಿಲ್ಲ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಕೆಯುಡಬ್ಲ್ಯೂಎಸ್‌ಡಿಬಿ ಅಧಿಕಾರಿಗಳಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.

ವ್ಯಾಪಾರ–ವಹಿವಾಟಿಗೂ ತೊಂದರೆ

ವಿಪರೀತ ದೂಳಿನಿಂದಾಗಿ ರಸ್ತೆ ಅಕ್ಕಪಕ್ಕದಲ್ಲಿರುವ ಅಂಗಡಿ–ಮಳಿಗೆಗಳು ರಸ್ತೆ ಬದಿ ವ್ಯಾಪಾರಿಗಳು ಹಾಗೂ ಗೂಡಂಗಡಿಗಳ ವ್ಯಾಪಾರ–ವಹಿವಾಟಿಗೆ ತೊಂದರೆಯಾಗಿದೆ. ವ್ಯಾಪಾರಿಗಳು ವಿಧಿ ಇಲ್ಲದೆ ರಸ್ತೆ ದುರಸ್ತಿ ಮಾಡದ ಅಧಿಕಾರಿಗಳ ವಿರುದ್ಧ ಗೊಣಗಿಕೊಂಡೇ ತಮ್ಮ ವ್ಯವಹಾರ ಮುಂದುರಿಸಿಕೊಂಡು ಹೋಗುತ್ತಿದ್ದಾರೆ.

‘ಅಂಗಡಿ ಮುಂದೆ ಬಟ್ಟೆ ನೇತು ಹಾಕಿದರೆ ಮಧ್ಯಾಹ್ನದ ಹೊತ್ತಿಗೆ ಅದರ ಬಣ್ಣವೇ ಬದಲಾಗಿರುತ್ತದೆ. ಅಂಗಡಿ ಮುಂದೆ ಸಾಮಗ್ರಿ ಮತ್ತು ಸಾಮಾನು ಇಟ್ಟರೆ ದೂಳಿನ ಕಾರಣಕ್ಕಾಗಿ ಗ್ರಾಹಕರು ಮುಟ್ಟುವುದಿಲ್ಲ. ಮಾಸ್ಕ್‌ ಇಲ್ಲದೆ ಅಂಗಡಿಯಲ್ಲಿ ಕೂರಲಾಗುತ್ತಿಲ್ಲ. ಪ್ರತಿ ಐಟಂನಲ್ಲೂ ದೂಳು. ತಿಂಡಿ ತಿನಿಸು ಹಾಗೂ ಹಣ್ಣು ವ್ಯಾಪಾರಿಗಳ ಕಥೆ ಹೇಳತೀರದು. ಅವರ ಬಳಿ ಖರೀದಿಸಲು ಜನ ಹಿಂದೇಟು ಹಾಕುತ್ತಾರೆ. ರಸ್ತೆ ಹದಗೆಟ್ಟಾಗಿನಿಂದ ನಮ್ಮ ವ್ಯಾಪಾರವೂ ಕುಸಿದಿದೆ. ಕೆಮ್ಮು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆ ಕೂಡ ಎದುರಾಗಿವೆ’ ಎಂದು ಬೀದಿ ವ್ಯಾಪಾರಿಗಳು ಹೇಳಿದರು.

ದೂಳು ನಿಯಂತ್ರಣಕ್ಕೆ ನೀರು ರಸ್ತೆಯಲ್ಲಿ ದೂಳು ನಿಯಂತ್ರಿಸುವುದಕ್ಕಾಗಿ ನಗರಸಭೆಯವರು ಬೆಳಿಗ್ಗೆ ಮಧ್ಯಾಹ್ನ ಹಾಗೂ ಸಂಜೆ ಟ್ರಾಕ್ಟರ್‌ನಲ್ಲಿ ರಸ್ತೆಯುದ್ದಕ್ಕೂ ನೀರು ಹಾಯಿಸುತ್ತಾರೆ. ರಸ್ತೆ ಗುಂಡಿಗಳಲ್ಲಿ ಸಂಗ್ರಹಗೊಳ್ಳುವ ನೀರಿನಿಂದಾಗಿ ರಸ್ತೆಯು ಕೆಲ ಹೊತ್ತು ಕೆಸರಿನ ರಾಡಿಯಾಗುತ್ತದೆ. ಪಾದಚಾರಿಗಳು ನಡೆದುಕೊಂಡು ಹೋಗುವುದಕ್ಕೆ ಹೆಣಗಾಡಬೇಕಾಗುತ್ತದೆ. ನೀರು ಹೀರಿಕೊಳ್ಳುವವರೆಗೆ ರಸ್ತೆಯು ಕೆಸರಿನಂತಾಗಿರುತ್ತದೆ. ಒಣಗಿದ ಬಳಿಕ ಮತ್ತದೆ ದೂಳಿನ ಮಜ್ಜನ. ಒಟ್ಟಿನಲ್ಲಿ ಈ ರಸ್ತೆಯಲ್ಲಿ ಓಡಾಡುವುದು ಸಾರ್ವಜನಿಕರಿಗೆ ಒಂದು ರೀತಿಯ ನರಕಯಾತನೆಯ ಅನುಭವವಾಗುತ್ತದೆ.

‘ಮಂಡಳಿಯದ್ದೇ ದುರಸ್ತಿ ಹೊಣೆ’

‘ನಿರಂತರ ನೀರು ಪೂರೈಕೆ ಕಾಮಗಾರಿಗಾಗಿ ಅಗೆದಿರುವ ರಸ್ತೆಗಳನ್ನು ಮುಂಚಿನಂತೆ ದುರಸ್ತಿ ಮಾಡುವುದು ಕೆಯುಡಬ್ಲ್ಯೂಎಸ್‌ಡಿಬಿ ಹೊಣೆ. ಸದ್ಯ ಕೆಲವೆಡೆ ರಸ್ತೆ ಗುಂಡಿ ಮುಚ್ಚಿದ್ದಾರೆ. ಜಾಲಮಂಗಲ ರಸ್ತೆ ಸೇರಿದಂತೆ ಇನ್ನುಳಿದೆಡೆಯೂ ಶೀಘ್ರ ದುರಸ್ತಿ ಮಾಡುವಂತೆ ಸೂಚನೆ ನೀಡಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ಎಲ್. ನಾಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾರು ಏನಂದರು?

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೇವಲ ಭರವಸೆ ನೀಡುತ್ತಲೇ ಬಂದಿದ್ದಾರೆಯೇ ಹೊರತು ವರ್ಷದಿಂದ ಹದಗೆಟ್ಟಿರುವ ಜಾಲಮಂಗಲ ರಸ್ತೆಯನ್ನು ಇದುವರೆಗೆ ದುರಸ್ತಿ ಮಾಡಿಲ್ಲ – ರಾಜು ಮಂಜುನಾಥ ನಗರ

ವಾಹನಗಳ ಮಾಲೀಕರಿಂದ ರಸ್ತೆ ತೆರಿಗೆ ವಸೂಲಿ ಮಾಡುವ ಸರ್ಕಾರದವರು ಅದಕ್ಕೆ ತಕ್ಕಂತೆ ರಸ್ತೆಗಳನ್ನು ಸುಸ್ಥಿತಿಯಲ್ಲಿಡಬೇಕು. ಇಲ್ಲದಿದ್ದರೆ ಮಾಲೀಕರಿಂದ ಕಟ್ಟಿಸಿಕೊಳ್ಳಬಾರದು – ಲೋಕೇಶ್ ಎಂ ಸ್ಥಳೀಯ ವ್ಯಾಪಾರಿ

ದೂಳಿನ ರಸ್ತೆಯಲ್ಲಿ ಓಡಾಡಿ ಸಾಕಾಗಿದೆ. ಇನ್ನಾದರೂ ಸಂಬಂಧಪಟ್ಟವರು ರಸ್ತೆಗೆ ಡಾಂಬರು ಹಾಕಿ ದುರಸ್ತಿ ಮಾಡಬೇಕು. ಇಲ್ಲದಿದ್ದರೆ ಸ್ಥಳೀಯರು ಸಿಡಿದೆದ್ದು ಬೀದಿಗಿಳಿಯುತ್ತಾರೆ– ಸಿದ್ದರಾಜು ಎಸ್ ಹನುಮಂತನಗರ

ಕಾಮಗಾರಿಗಾಗಿ ಅಗೆದು ಸರಿಯಾಗಿ ದುರಸ್ತಿ ಮಾಡದಿರುವುದರಿಂದ ಹದಗೆಟ್ಟಿರುವ ರಾಮನಗರದ ಜಾಲಮಂಗಲ ರಸ್ತೆಯ ಸ್ಥಿತಿ
ರಾಮನಗರದ ಕೆಂಪೇಗೌಡ ವೃತ್ತದ ಬಳಿ ಹದಗೆಟ್ಟ ರಸ್ತೆಯ ದೂಳು ನಿಯಂತ್ರಣಕ್ಕೆ ಟ್ಯಾಂಕರ್‌ನಿಂದ ರಸ್ತೆಗೆ ನೀರು ಹಾಯಿಸಿಕೊಂಡು ಹೋಗುತ್ತಿದ್ದ ದೃಶ್ಯ
ರಾಮನಗರದ ಕೆಂಪೇಗೌಡ ವೃತ್ತದ ಬಳಿಯ ಮಾಗಡಿ ರಸ್ತೆಯನ್ನು ಕುಡಿಯುವ ನೀರು ಕಾಮಗಾರಿಗಾಗಿ ಅಗೆದು ಸರಿಯಾಗಿ ಮುಚ್ಚದೆ ಹಾಗೆಯೇ ಬಿಟ್ಟಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.