ADVERTISEMENT

‘ಸಸಿ ನೆಟ್ಟರೆ ಸಾಲದು, ಪೋಷಿಸಬೇಕು’

ಕರ್ಲಹಳ್ಳಿ ಬಸವೇಶ್ವರ ದೇವಾಲಯದ ಆವರಣದಲ್ಲಿ ವನಮಹೋತ್ಸವ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 13:43 IST
Last Updated 3 ಜುಲೈ 2019, 13:43 IST
ಮಾಗಡಿ ತಾಲ್ಲೂಕಿನ ಕರ್ಲಹಳ್ಳಿ ಬಸವೇಶ್ವರ ದೇವಾಲಯದ ಬಳಿ ನಡೆದ ವನಮಹೋತ್ಸವದಲ್ಲಿ ಅರಣ್ಯ ಅಧಿಕಾರಿ ತಿಮ್ಮರಾಯಪ್ಪ ಸಸಿ ವಿತರಿಸಿದರು
ಮಾಗಡಿ ತಾಲ್ಲೂಕಿನ ಕರ್ಲಹಳ್ಳಿ ಬಸವೇಶ್ವರ ದೇವಾಲಯದ ಬಳಿ ನಡೆದ ವನಮಹೋತ್ಸವದಲ್ಲಿ ಅರಣ್ಯ ಅಧಿಕಾರಿ ತಿಮ್ಮರಾಯಪ್ಪ ಸಸಿ ವಿತರಿಸಿದರು   

ಮಾಡಬಾಳ್‌ (ಮಾಗಡಿ): ‘ಸಸಿ ನೆಟ್ಟರೆ ಸಾಲದು, ಅದನ್ನು ಬೆಳೆಸಿ ಮರವನ್ನಾಗಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು’ ಎಂದು ತಿರುಮಲೆ ಕನ್ನಡ ಕೂಟದ ಸಂಚಾಲಕ ಟಿ.ಎಂ.ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಕರ್ಲಹಳ್ಳಿ ಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ವನಮಹೋತ್ಸವದ ಅಂಗವಾಗಿ ಸಸಿ ನೆಟ್ಟು ನೀರೆರೆದು ಅವರು ಮಾತನಾಡಿದರು.

‘ಸಾವನದುರ್ಗ ಅಭಯಾರಣ್ಯದ ಅಕ್ರಮ ಒತ್ತುವರಿಯನ್ನು ತಡೆಗಟ್ಟಬೇಕು. ಮಳೆ ಇಲ್ಲದೆ ಕುಡಿಯುವ ನೀರಿಗೆ ಹರಸಾಹಸ ಪಡಬೇಕಿದೆ. ಅರಣ್ಯ ಪ್ರದೇಶದಲ್ಲಿ ಬಿದಿರು ಬೆಳೆಸಿದರೆ, ಕಾಡಾನೆಗಳು ರೈತರ ಬೆಳೆ ನಾಶಮಾಡುವುದು ತಪ್ಪಬಹುದು. ವನ್ಯ ಪ್ರಾಣಿಗಳಿಗೆ ಅರಣ್ಯದಲ್ಲಿ ಕುಡಿಯುವ ನೀರು ಸಂಗ್ರಹಿಸಲು ಹೊಂಡಗಳನ್ನು ನಿರ್ಮಿಸಬೇಕು’ ಎಂದರು.

ADVERTISEMENT

ವಲಯ ಅರಣ್ಯ ಅಧಿಕಾರಿ ತಿಮ್ಮರಾಯಪ್ಪ ಮಾತನಾಡಿ, ‘ಅರಣ್ಯ ರಕ್ಷಿಸುವ ಹೊಣೆ ಎಲ್ಲರಿಗೂ ಸೇರಿದೆ. ಕಾಡಿದ್ದರೆ ನಾಡು ಎಂಬ ಹಿರಿಯರ ಮಾತಿನಂತೆ ಮುಂದಿನ ಪೀಳಿಗೆಗೆ ವನ ಸಂಪತ್ತು ರಕ್ಷಿಸಿ, ಪರಿಸರ ಉಳಿಸದಿದ್ದರೆ ಮಾಗಡಿ ತಾಲ್ಲೂಕು ಮರಳುಗಾಡಾದೀತು’ ಎಂದು ಎಚ್ಚರಿಸಿದರು.

ನಿವೃತ್ತ ಶಿಕ್ಷಕ ರಂಗಸ್ವಾಮಯ್ಯ ಮಾತನಾಡಿ ‘ಸಾವನದುರ್ಗದ ಅರಣ್ಯದಲ್ಲಿ ಬೇಲ ಮತ್ತು ಹುಣಿಸೆ ಮರಗಳು ಹೆಚ್ಚಾಗಿದ್ದವು. ಇರುಳಿಗ, ಸೋಲಿಗ, ಕಾಡುಗೊಲ್ಲ, ಶಿಳ್ಳೇಕ್ಯಾತ, ಮೇದ, ದೊಂಬ ಇತರೆ ಬುಡಕಟ್ಟು ಆದಿವಾಸಿ ಸಮುದಾಯದವರು ಕಾಡನ್ನು ತಾಯಿ ಎಂದು ರಕ್ಷಿಸುತ್ತಿದ್ದರು. ಕೆಲವರು ಕಾಡು ಕಡಿದು ನಾಶ ಮಾಡುತ್ತಿರುವುದು ದುರಂತಕ್ಕೆ ಕಾರಣವಾಗಿದೆ’ ಎಂದರು.

ಉಪವಲಯ ಅರಣ್ಯ ಅಧಿಕಾರಿ ಕೆಂಪೇಗೌಡ, ದೇವಾಲಯ ಟ್ರಸ್ಟ್‌ನ ತ್ಯಾಗದೆರೆಪಾಳ್ಯದ ರಾಮಣ್ಣ, ಬಿಆರ್‌ಸಿ ಸಂಯೋಜಕ ರೂಪಾಕ್ಷ, ಬಿಆರ್‌ಪಿ ಮಂಜಪ್ಪ, ಪರಿಸರವಾದಿಗಳಾದ ಬೆಂಗಳೂರಿನ ವಿಜಯಲಕ್ಷ್ಮೀ, ವಿಜಯಮ್ಮ, ಮಂಡ್ಯದ ಸೌಮ್ಯ, ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಟಿ.ಆರ್‌.ರಾಮು, ಎಚ್‌.ಆರ್‌.ಮಾದೇಶ್‌, ಸಿದ್ದಲಿಂಗೇಶ್ವರ, ಕೆರೆಬೀದಿ ಈಶ, ಗಂಗಾಧರ್‌, ಪವನ್‌, ಗಿರೀಶ್‌, ದೊಡ್ಡಿ ವೀರೇಶ್‌, ಅರಣ್ಯ ರಕ್ಷಕರಾದ ನಾಗೇಶ್‌ ಕೆ.ಜಿ, ಮಹೇಶ್‌ ಎ.ಸಿ, ಉಮೇಶ್‌ ನಾಯ್ಕ್‌, ದೊಡ್ಡಯ್ಯ, ಶಿವರಾಜು, ನಾಗೇಂದ್ರ, ಚಿಕ್ಮಳಿಯ ಸರ್ಕಾರಿ ಕಿರಿಯ ಶಾಲೆ ಮುಖ್ಯ ಶಿಕ್ಷಕಿ ಜಿ.ವಿ.ಜಾನಕಿ, ಶಿಕ್ಷಕಿ ಎ.ಬಿ.ಪಾರ್ವತಮ್ಮ ವನಮಹೋತ್ಸವದಲ್ಲಿ ಮಾತನಾಡಿದರು.

ಶಾಲೆಯ ಮಕ್ಕಳಿಗೆ ಸಸಿ ವಿತರಿಸಲಾಯಿತು. ದೇವಾಲಯದ ರಥಬೀದಿಯ ಸುತ್ತಲೂ ದೇಶೀಯ ಹಣ್ಣಿನ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.