ADVERTISEMENT

ಅನ್ನದಾತರ ಕಡೆಗಣಿಸಿದವರು ಉದ್ದಾರ ಆಗಲ್ಲ: ಇಮ್ಮಡಿ ಬಸವರಾಜ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 6:46 IST
Last Updated 13 ಏಪ್ರಿಲ್ 2024, 6:46 IST
ಮಾಗಡಿಯ ರಂಗಯ್ಯನ ದನಗಳ ಪರಿಷೆಯಲ್ಲಿ ಉತ್ತಮ ತಳಿಯ ದನಕರು ಸಾಕಣಿಕೆ ಮಾಡಿರುವ ಹೈನುದಾರರನ್ನು ಸನ್ಮಾನಿಸಲಾಯಿತು
ಮಾಗಡಿಯ ರಂಗಯ್ಯನ ದನಗಳ ಪರಿಷೆಯಲ್ಲಿ ಉತ್ತಮ ತಳಿಯ ದನಕರು ಸಾಕಣಿಕೆ ಮಾಡಿರುವ ಹೈನುದಾರರನ್ನು ಸನ್ಮಾನಿಸಲಾಯಿತು   

ಮಾಗಡಿ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಲ್ಲದೆ ಜನ–ಜಾನುವಾರುಗಳು ಪರಿತಪಿಸುತ್ತಿವೆ. ಜನಪ್ರತಿನಿಧಿ ಮತ್ತು ಅಧಿಕಾರಿಗಳು ಕನಿಷ್ಠ ಕುಡಿಯುವ ನೀರು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಅನ್ನದಾತ ರೈತರನ್ನು ಕಡೆಗಣಿಸಿದವರು ಎಂದಿಗೂ ಉದ್ದಾರ ಆಗುವುದಿಲ್ಲ ಎಂದು ಜಡೇದೇವರ ಮಠಾಧ್ಯಕ್ಷ ಇಮ್ಮಡಿ ಬಸವರಾಜ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ನಡೆಯುತ್ತಿರುವ ರಂಗಯ್ಯನ ದನಗಳ ಪರಿಷೆಯಲ್ಲಿ ಉತ್ತಮ ತಳಿಯ ದನಕರುಗಳನ್ನು ಮಾರಾಟಕ್ಕೆ ತಂದಿರುವ ಹೈನುದಾರರನ್ನು ಶುಕ್ರವಾರ ಸನ್ಮಾನಿಸಿ ಅವರು ಮಾತನಾಡಿದರು.

ಕೆಂಪೇಗೌಡ ಅವರ ವಂಶಜರು ರೈತರ ಬದುಕು ಹಸನುಗೊಳಿಸಲು ಕೆರೆಕಟ್ಟೆ, ಕಲ್ಯಾಣಿ, ಗುಂಡುತೋಪು, ದೇವರಕಾಡು, ಗೋಮಾಳ ರಕ್ಷಿಸಿ, ಅರವಟಿಕೆಗಳನ್ನು ಕಟ್ಟಿಸಿದ್ದರು. ಇದರಿಂದ 1965ರಲ್ಲಿ ಮಾಗಡಿ ಸೀಮೆಯಲ್ಲಿ ಬಂದಿದ್ದ ಬರಗಾಲದಿಂದ ಜನ–ಜಾನುವಾರುಗಳು ತೊಂದರೆಯಿಂದ ಪಾರಾದವು‌ ಎಂದು ಸ್ಮರಿಸಿದರು.

ADVERTISEMENT

ಆದರೆ ಪ್ರಸ್ತುತ ದೇಶದಲ್ಲಿ ನಿತ್ಯ ಸರ್ವರೂ ಋಣಿ ಆಗಿರಬೇಕಾದ ರೈತರನ್ನು ಕಡೆಗಣಿಸಿರುವುದು ದುರಂತ ಎಂದು ಬೇಸರಿಸಿದರು.

ಗೋಪೂಜೆ ಮಾಡಿದರೆ ಸಾಲದು ಕಷ್ಟದಲ್ಲಿರುವ ಗೋಪಾಲಕರ ರಕ್ಷಣೆಗೆ ಮುಂದಾಗಬೇಕು. ಗೋಮಾಳ, ಗೋಕಟ್ಟೆ, ಗುಂಡುತೋಪು ಉಳಿಸಲು ಹಾಗೂ ರೈತರ ಪರವಾದ ಕಾನೂನು ಜಾರಿಯಾಗಬೇಕು ಎಂದು ಹೇಳಿದರು.

ದನಗಳ ಜಾತ್ರೆಯಲ್ಲಿ ರಾಸುಗಳಿಗೆ ಉಚಿತವಾಗಿ ಕುಡಿಯುವ ನೀರು ಒದಗಿಸುತ್ತಿರುವ ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳ ಕಾರ್ಯ ಮೆಚ್ಚುವಂತದ್ದು ಎಂದು ಶ್ಲಾಘಿಸಿದರು.

ವಿವಿಧ ಜಿಲ್ಲೆಗಳಿಂದ ರಂಗಯ್ಯನ ಪರಿಷೆಗೆ ಆಗಮಿಸಿರುವ ಪಶುಪಾಲಕರನ್ನು ಗುರುತಿಸಿ, ಸನ್ಮಾನಿಸಿರುವ ರೈತ ಸಂಘದ ಸೇವೆ ಸ್ಮರಣೀಯ. ಮುಂದಿನ ವರ್ಷ ಜಡೇದೇವರ ಮಠದಿಂದ ರೈತರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿ, ಉತ್ತಮ ರಾಸುಗಳನ್ನು ಮಾರಾಟಕ್ಕೆ ಇಟ್ಟಿರುವ 12 ರೈತರನ್ನು ಸನ್ಮಾನಿಸಲಾಗಿದೆ ಎಂದು ತಿಳಿಸಿದರು.

ರೈತ ಸಂಘದ ಮುಖಂಡರಾದ ಶಿವಲಿಂಗಯ್ಯ, ಅಮ್ಜದ್‍ಪಾಷಾ, ಚನ್ನರಾಯಪ್ಪ, ಬುಡೇನ್ ಸಾವ್, ರವಿಕುಮಾರ್ ಇದ್ದರು.

ಉತ್ತಮ ತಳಿಯ ರಾಸು ಮಾಲೀಕರಾದ ಪಣಕನಕಲ್ಲು ಗ್ರಾಮದ ಮೀಸೆ ಸೀನಪ್ಪ, ಜೀವನ್ ಗೌಡ, ಶಿರಾ ತಾಲ್ಲೂಕಿನ ಸೀಬಿ ಗ್ರಾಮದ ಹೋರಿ ಕೃಷ್ಣಪ್ಪ, ರಾಮನಗರ ತಾಲ್ಲೂಕಿನ ಜಯಪುರ ಕಾಡುಗೊಲ್ಲರ ಹಟ್ಟಿ ಚಿಕ್ಕಣ್ಣ, ವಿರುಪಸಂದ್ರದ ಹೊನ್ನಗಂಗಯ್ಯ, ಬಾಲಾಜಿ ಬಡಾವಣೆಯ ಲೋಕೇಶ್, ಗೊರೂರಿನ ಜಯಕುಮಾರ್, ನೆಲಮಂಗಲದ ನಾಗಣ್ಣ, ಕಪನಯ್ಯನಪಾಳ್ಯದ ಅಂಕಪ್ಪ‌ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.