ADVERTISEMENT

‘ದೇಶದಲ್ಲಿ ಕಾನೂನಿಗಿಂತ ದ್ವೇಷದ್ದೇ ಮೇಲುಗೈ’

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 13:11 IST
Last Updated 5 ಸೆಪ್ಟೆಂಬರ್ 2019, 13:11 IST
ಹೂಕುಂದ ಗ್ರಾಮದ ರಸ್ತೆಯಲ್ಲಿ ಬೆಂಕಿಹಚ್ಚಿ ಪ್ರತಿಭಟನೆ ನಡೆಸಲಾಯಿತು
ಹೂಕುಂದ ಗ್ರಾಮದ ರಸ್ತೆಯಲ್ಲಿ ಬೆಂಕಿಹಚ್ಚಿ ಪ್ರತಿಭಟನೆ ನಡೆಸಲಾಯಿತು   

ಉಯ್ಯಂಬಳ್ಳಿ (ಕನಕಪುರ): ‘ಕಾಂಗ್ರೆಸ್‌ ಪಕ್ಷದ ಪ್ರಬಲ ನಾಯಕರಾಗಿರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತಿರುವ ಡಿ.ಕೆ.ಶಿ ಬೆಳವಣಿಗೆ ಸಹಿಸದ ಮೋದಿ ಮತ್ತು ಅಮಿತ್‌ ಶಾ ಸಂಚು ರೂಪಿಸಿ ಅವರನ್ನು ಹಗರಣದಲ್ಲಿ ಸಿಲುಕಿಸುತ್ತಿದ್ದಾರೆ’ ಎಂದು ಹೂಕುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಹೀರ್‌ ಅಹಮ್ಮದ್‌ ಆರೊಪಿಸಿದರು.

ಇಲ್ಲಿನ ಉಯ್ಯಂಬಳ್ಳಿ ಹೋಬಳಿ ಹೂಕುಂದ ಗ್ರಾಮದ ಕೋಡಿಹಳ್ಳಿ ಸಾತನೂರು ಹೆದ್ದಾರಿಯಲ್ಲಿ ಡಿ.ಕೆ.ಶಿವಕುಮಾರ್‌ ಬಂಧನ ವಿರೋಧಿಸಿ ಪಂಚಾಯಿತಿ ವತಿಯಿಂದ ಗುರುವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

‘ಕೇಂದ್ರ ಸರ್ಕಾರದ ವರ್ತನೆ ಸರ್ವಾಧಿಕಾರಿ ಧೋರಣೆಯಾಗಿದೆ. ಶಿವಕುಮಾರ್‌ ಯಾರಿಗೂ ಹೆದರದೆ ಗುಜರಾತ್‌ ಶಾಸಕರನ್ನು ಹಿಡಿದಿಟ್ಟುಕೊಂಡು, ಅಹಮ್ಮದ್‌ ಪಟೇಲ್‌ ಅವರನ್ನು ಗೆಲ್ಲಿಸಿದ್ದಾರೆ. ಇದನ್ನು ಮನಸಿನಲ್ಲಿಟ್ಟುಕೊಂಡು ಅವರಿಗೆ ಕಿರುಕುಳ ಕೊಡುತ್ತಿದ್ದಾರೆ. ಇಡಿ ಅಧಿಕಾರಿಗಳಿಗೆ ಸಮರ್ಪಕ ಉತ್ತರ ನೀಡುತ್ತಿದ್ದರೂ ಉದ್ದೇಶಪೂರ್ವಕವಾಗಿ ಬಂಧಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತ‍ಪಡಿಸಿದರು.

ADVERTISEMENT

‘ದೇಶದಲ್ಲಿ ಕಾನೂನಿಗಿಂತ ದ್ವೇಷವೇ ಕೆಲಸ ಮಾಡುತ್ತಿದ್ದು, ಮೇಲುಗೈ ಸಾಧಿಸುತ್ತಿದೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಶಿವಕುಮಾರ್‌ ಮೇಲೆ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ವಿರೋಧಿಗಳನ್ನು ಈ ರೀತಿ ದಮನಿಸುತ್ತಿದ್ದಾರೆ’ ಎಂದು ದೂರಿದರು.

5 ಗಂಟೆಗಳ ಕಾಲ ರಸ್ತೆತಡೆ ನಡೆಸಲಾಯಿತು. ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಕುಳ್ಳೀರೇಗೌಡ, ಕೋಡಿಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಿವಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್‌ ಕುಮಾರ್‌, ರಾಜು, ಗಿರೀಶ್‌, ಮಾದೇಗೌಡ, ಕಾಂಗ್ರೆಸ್‌ ಮುಖಂಡರಾದ ಬೋಜೇಗೌಡ, ನಂಜುಂಡೇಗೌಡ, ರಾಮಗುಂಡೇಗೌಡ, ಗೋವಿಂದಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.