ಕನಕಪುರ: ಚನ್ನಪಟ್ಟಣದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ತ್ರೀ ಶಕ್ತಿ ಸಂಘದ ಮಹಿಳಾ ಸದಸ್ಯರು ಕನಕಪುರ ತಾಲ್ಲೂಕಿನ ಕೇರಳಾಳುಸಂದ್ರ ಗ್ರಾಮದಲ್ಲಿರುವ ಹೋಟೆಲ್ ನಾಗರಾಜು ಅವರ ತೋಟಕ್ಕೆ ಕೃಷಿ ಅಧ್ಯಯನಕ್ಕಾಗಿ ಭೇಟಿ ನೀಡಿದ್ದರು.
ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳಿ ಮತ್ತು ಸೋಗಾಲ ವಲಯದ 50 ಮಂದಿ ರೈತ ಮಹಿಳೆಯರು ಒಂದು ದಿನದ ಕ್ಷೇತ್ರ ಪ್ರವಾಸಕ್ಕಾಗಿ ಗುರುವಾರ ಹೋಟಲ್ ನಾಗರಾಜ್ ಅವರ ತೋಟಕ್ಕೆ ಭೇಟಿ ನೀಡಿ ಕೃಷಿ ಅಧ್ಯಯನ ನಡೆಸಿದರು.
ಹೋಟೆಲ್ ನಾಗರಾಜ್ ಅವರು ತಮ್ಮ 16 ಎಕರೆ ಜಮೀನಿನಲ್ಲಿ ವೈವಿಧ್ಯಮಯ ಮತ್ತು ಸಮಗ್ರ ಕೃಷಿ ಮಾಡಿದ್ದಾರೆ. ತೆಂಗು, ಅಡಿಕೆ, ಮಾವು, ಸಪೋಟ, ಸೀಬೆ, ಹಲಸು, ಬಾಳೆ, ರಾಗಿ, ಬತ್ತ ಸೇರಿದಂತೆ ಹಲವು ರೀತಿಯ ಬೆಳೆಗಳನ್ನು ಬೆಳೆದಿದ್ದಾರೆ. ರಸಗೊಬ್ಬರ ಬಳಸದೆ ಸಾವಯವ ಕೃಷಿಯಲ್ಲಿ, ಇರುವ ನೀರನ್ನೆ ಬಳಸಿಕೊಂಡು ಸಮಗ್ರ ಕೃಷಿ ಮಾಡಿದ್ದಾರೆ. ಅದರ ಬಗ್ಗೆ ಅಧ್ಯಯನ ಮಾಡಲು ಸಂಘ ಈ ಪ್ರವಾಸ ಆಯೋಜಿಸಿರುವುದಾಗಿ ಶ್ವೇತಾ ಹುಣಸನಹಳ್ಳಿ ತಿಳಿಸಿದರು.
ತಂದೆಯಿಂದ ಪಿತ್ರಾಜಿತವಾಗಿ ಬಂದಿದ್ದ ಜಮೀನು ಖಾಲಿಯಿತ್ತು, ಅದನ್ನು ನನಗೆ ಬೇಕಾದಂತೆ ಅಭಿವೃದ್ಧಿಪಡಿಸಿ ಕೃಷಿ ಮಾಡಿದ್ದೇನೆ. ಮಳೆ ನೀರು ವ್ಯರ್ಥವಾಗದಂತೆ ಜಮೀನಿನಲ್ಲಿ ಕೃಷಿ ಹೊಂಡಗಳನ್ನು ಮಾಡಲಾಗಿದೆ. ಸಾವಯವ ಕೃಷಿ ಪದ್ಧತಿಯಲ್ಲಿ ಸಿರಿಧಾನ್ಯ, ಸಮಗ್ರ ಬೇಸಾಯವನ್ನು ಮಾಡಲಾಗಿದೆ ಎಂದು ಪ್ರಗತಿಪರ ರೈತ ಹೋಟೆಲ್ ನಾಗರಾಜು ಮಾಹಿತಿ ನೀಡಿದರು.
ಎಷ್ಟೋ ಜನ ರೈತರು ಅರ್ಧ, ಒಂದು ಎಕರೆಯಷ್ಟು ಸಣ್ಣ ಸಣ್ಣ ಭೂಮಿಯನ್ನು ಪಾಳು ಬಿಟ್ಟಿದ್ದಾರೆ. ಅಂತಹ ಭೂಮಿಯಲ್ಲಿಯೂ ಬೆಳೆ ತೆಗೆಯಬಹುದು ಎನ್ನುವುದನ್ನು ತೋರಿಸಲು ಚನ್ನಪಟ್ಟಣದ ರೈತ ಮಹಿಳೆಯರನ್ನು ಇಲ್ಲಿಗೆ ಕರೆತರಲಾಗಿದೆ. ಕೃಷಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಿದರೆ ಅಭಿವೃದ್ಧಿ ಸಾಧ್ಯ.
ಶ್ರೀಕಂಠು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.