
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ವಿರೋಧಿಸಿ ಬಿಡದಿ ಹೋಬಳಿಯ ಭೈರಮಂಗಲದಲ್ಲಿ ಭಾನುವಾರ ನಡೆದ ಮಹಿಳಾ ಮತ್ತು ಮಕ್ಕಳ ಸಮಾವೇಶದ
ಬಿಡದಿ (ರಾಮನಗರ): ಹೋಬಳಿಯ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲೆ ಎತ್ತಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ (ಜಿಬಿಐಟಿ) ವಿರೋಧಿಸಿ, ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 50 ದಿನಗಳನ್ನು ಪೂರೈಸಿದೆ. ಅದರ ಪ್ರಯುಕ್ತ ಭಾನುವಾರ ಮಹಿಳಾ ಮತ್ತು ಮಕ್ಕಳ ಸಮಾವೇಶ ನಡೆದಿದ್ದು, ಯೋಜನೆ ವಿರುದ್ಧ ನಾರಿಯರು ಮತ್ತು ಮಕ್ಕಳ ದನಿ ಮೊಳಗಿತು.
ಹಿರಿಯ ರೈತ ನಾಯಕಿ ಅನಸೂಯಮ್ಮ, ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ಸಹ ಕಾರ್ಯದರ್ಶಿ ಪ್ರಭಾ ಎನ್. ಬೆಳವಂಗಲ, ಪರಿಸರಕ್ಕಾಗಿ ನಾವು ಸಂಘಟನೆ ರಾಜ್ಯ ಕಾರ್ಯದರ್ಶಿ ಅರ್ಚನಾ ರಾವ್, ದೇವನಹಳ್ಳಿಯ ಚನ್ನರಾಯಪಟ್ಟಣ ಮತ್ತು ಆನೇಕಲ್ ಭೂ ಸ್ವಾಧೀನ ವಿರೋಧಿಸಿ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಸಮಾವೇಶಕ್ಕೆ ಬಲ ತುಂಬಿದರು.
ರೈತರು ತಮ್ಮ ಭೂಮಿಯನ್ನು ಕೊಡುವುದಿಲ್ಲ ಎಂದು ಹೇಳಿದ ಮೇಲೂ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಸರಿಯಲ್ಲ. ಸರ್ಕಾರದ ನಡೆದ ವಿರೋಧಿಸಿ ರೈತರು ನಡೆಸುತ್ತಿರುವ ‘ನಮ್ಮ ಭೂಮಿ, ನಮ್ಮ ಹಕ್ಕು’ ಅನಿರ್ದಿಷ್ಟಾವಧಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಸರ್ಕಾರ ಈ ಭಾಗದ ಅಳಲು ಆಲಿಸಬೇಕು. ಅವರ ಪಾಲಿಗೆ ಮುಳುವಾಗಲಿರುವ ಯೋಜನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಯೋಜನಾ ಪ್ರದೇಶದಲ್ಲಿ ಸೆ. 11ರಿಂದ ಜಂಟಿ ಅಳತೆ ಮೌಲ್ಯಮಾಪನ (ಜೆಎಂಸಿ) ಶುರುವಾಗಿದೆ. ಮಾರನೇಯ ದಿನದಿಂದಲೇ ಭೈರಮಂಗಲ– ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಭೈರಮಂಗಲದ ರಾಮ ಮಂದಿರದ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಇದರ ನಡುವೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಹ ಸ್ಥಳಕ್ಕೆ ಬಂದು ಬೆಂಬಲ ವ್ಯಕ್ತಪಡಿಸಿ, ಯೋಜನೆ ಕೈಬಿಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸಂಘದ ಅಧ್ಯಕ್ಷ ಕೆ. ರಾಮಯ್ಯ, ಮುಖಂಡರಾದ ಪ್ರಕಾಶ್, ಮಂಡಲಹಳ್ಳಿ ನಾಗರಾಜು, ಶ್ರೀನಿವಾಸ ರೆಡ್ಡಿ ಹಾಗೂ ಇತರರು ಇದ್ದರು.
‘ರೈತರ ವಿರುದ್ದ ನಿಂತ ಇಡೀ ವ್ಯವಸ್ಥೆ’
'ಅಭಿವೃದ್ಧಿ ಹೆಸರಿನ ಜಿಬಿಐಟಿ ಯೋಜನೆಯಿಂದ ಕೃಷಿ ತೋಟಗಾರಿ ಹಾಗೂ ಹೈನುಗಾರಿಕೆ ನಂಬಿ ಬದುಕುತ್ತಿರುವ ಈ ಭಾಗದ ರೈತರು ಬೀದಿ ಪಾಲಾಗುತ್ತಾರೆ. ಯೋಜನೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಹಾಗೂ ಇಡೀ ವ್ಯವಸ್ಥೆಯೇ ರೈತರ ವಿರುದ್ಧ ನಿಂತಿದೆ. ರೈತರು ಎದೆಗುಂದದೆ ಹೋರಾಟ ತೀವ್ರಗೊಳಿಸಬೇಕು’ ಎಂದು ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಸಲಹೆ ನೀಡಿದರು. ‘ಸರ್ಕಾರ ಯೋಜನೆ ಕೈ ಬಿಡಬೇಕು’ ‘ರೈತರ ಫಲವತ್ತಾದ ಭೂಮಿಯನ್ನೇ ಕಿತ್ತುಕೊಂಡು ಉಪನಗರ ಯೋಜನೆ ನಿರ್ಮಿಸುವ ಸರ್ಕಾರದ ನಿರ್ಧಾರ ಸರಿಯಲ್ಲ. ಭೂಮಿ ಕಳೆದುಕೊಳ್ಳುವ ರೈತರ ಸ್ಥಿತಿ ಮುಂದೇನಾಗಲಿದೆ ಎಂಬುದರ ಬಗ್ಗೆ ಸರ್ಕಾರ ಯೋಚಿಸಿಲ್ಲ. ರೈತರ ಹಿತಾಸಕ್ತಿಗೆ ವಿರುದ್ಧವಾಗಿರುವ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು’ ಎಂದು ಹಿರಿಯ ರೈತ ನಾಯಕಿ ಅನಸೂಯಮ್ಮ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.