ADVERTISEMENT

ಕುತ್ತಿನಗೆರೆ: ಕಾರ್ಮಿಕರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 14:14 IST
Last Updated 11 ಜುಲೈ 2019, 14:14 IST

ರಾಮನಗರ: ಮಾಗಡಿ ತಾಲ್ಲೂಕಿನ ಕುತ್ತಿನಗೆರೆ ಗ್ರಾಮದ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಕನಿಷ್ಠ ಕೂಲಿಗೆ ದುಡಿಯುತ್ತಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಇವರಲ್ಲಿ ಒಬ್ಬ ಬಾಲ ಕಾರ್ಮಿಕ ಸಹ ಸೇರಿದ್ದಾನೆ.

ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಾಗಡಿ ತಹಶೀಲ್ದಾರ್ ನರಸಿಂಹಮೂರ್ತಿ ಸೂಚನೆ ಮೇರೆಗೆ ಕಂದಾಯ ನಿರೀಕ್ಷಕ ರೆಹಮಾನ್, ಗ್ರಾಮ ಲೆಕ್ಕಾಧಿಕಾರಿ ಸುರೇಶ್‌ಕುಮಾರ್ ಹಾಗೂ ಕಾರ್ಮಿಕ ಇಲಾಖೆ ನಿರೀಕ್ಷಕರಾದ ಸುಷ್ಮಾ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಇದೇ ತಿಂಗಳ 8ರಂದು ದಾಳಿ ನಡೆಸಿತು. ಇಂಟರ್ ನ್ಯಾಷನಲ್‌ ಜಸ್ಟಿಸ್‌ ಮಿಷನ್‌ ಸಿಬ್ಬಂದಿ ಸಾಥ್ ನೀಡಿದರು.

ಕಾರ್ಖಾನೆಯಲ್ಲಿ ತಮಿಳುನಾಡಿನ ಕೃಷ್ಣಪುರಿ ಮತ್ತು ಧರ್ಮಪುರಿ ಜಿಲ್ಲೆಯ ಎಂಟು ಮಂದಿ ಇದ್ದರು. ಇವರಲ್ಲಿ 14ರಿಂದ 18 ವಯಸ್ಸಿನ ಮೂವರು ಸೇರಿದ್ದರು. "ನಮ್ಮನ್ನು ಕನಿಷ್ಠ ಕೂಲಿಗೆ ದುಡಿಸಿಕೊಳ್ಳಲಾಗುತ್ತಿದೆ. ಮಾತುಕತೆಯಾದಂತೆ ಕೂಲಿ ನೀಡಿಲ್ಲ. ಹೊರಗೆ ಹೋಗಲು ನಿರ್ಬಂಧ ಹೇರುತ್ತಿದ್ದಾರೆ' ಎಂದು ಕಾರ್ಖಾನೆಯ ಕಾರ್ಮಿಕರು ಅಧಿಕಾರಿಗಳಿಗೆ ದೂರಿದರು. ಈ ಹಿನ್ನೆಲೆಯಲ್ಲಿ ಕಾರ್ಮಿಕರ ರಕ್ಷಣೆ ಮಾಡಿದ ಅಧಿಕಾರಿಗಳು ಅವರನ್ನು ಅಲ್ಲಿಂದ ಸ್ಥಳಾಂತರಿಸಿದರು. ಕಾರ್ಖಾನೆಯಲ್ಲಿ 14 ವರ್ಷದ ಒಳಗಿನಒಬ್ಬ ಬಾಲಕನನ್ನು ದುಡಿಸಿಕೊಂಡ ಹಿನ್ನೆಲೆಯಲ್ಲಿ ಮಾಲೀಕರ ವಿರುದ್ಧ ಬಾಲಕಾರ್ಮಿಕ ಕಾಯ್ದೆ ಅಡಿ ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

"ಈ ಎಲ್ಲ ಕಾರ್ಮಿಕರನ್ನು ಜೀತದಾಳುಗಳಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ವಿಚಾರಣೆ ಸಂದರ್ಭ ಅಂತಹ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ' ಎಂದು ಮಾಗಡಿ ತಹಶೀಲ್ದಾರ್‌ ನರಸಿಂಹಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.