ADVERTISEMENT

ಎಚ್‌ಡಿಕೆ ದಂಪತಿಯಿಂದ ಹಸುಗಳಿಗೆ ಪೂಜೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 5:19 IST
Last Updated 7 ನವೆಂಬರ್ 2021, 5:19 IST
ಕೇತಗಾನಹಳ್ಳಿಯ ತೋಟದಲ್ಲಿ ಶಾಸಕ ಎಚ್.ಡಿ. ಕುಮಾರಸ್ವಾಮಿ‌ ದಂಪತಿ‌ ಗೋಪೂಜೆ ನೆರವೇರಿಸಿದರು
ಕೇತಗಾನಹಳ್ಳಿಯ ತೋಟದಲ್ಲಿ ಶಾಸಕ ಎಚ್.ಡಿ. ಕುಮಾರಸ್ವಾಮಿ‌ ದಂಪತಿ‌ ಗೋಪೂಜೆ ನೆರವೇರಿಸಿದರು   

ಬಿಡದಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಶಾಸಕ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಹೋಬಳಿಯ ಕೇತಗಾನಹಳ್ಳಿ ತೋಟದಲ್ಲಿ ಗೋಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಕುಮಾರಸ್ವಾಮಿ, ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲ ಪಾಡ್ಯಮಿಯು ಶ್ರೀಕೃಷ್ಣ ಪರಮಾತ್ಮ ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋವುಗಳ ಸಮೂಹ ರಕ್ಷಿಸಲು ಗೋಪಾಲನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಇಂದು ಗೋಪೂಜೆ ಮತ್ತು ಗೋವರ್ಧನ ಪೂಜೆ ಆಚರಿಸಲಾಗುತ್ತದೆ. ಕೆಲವೆಡೆ ರೈತರು ಇದನ್ನು ಹಟ್ಟಿ ಹಬ್ಬವೆಂದು ಆಚರಿಸುತ್ತಾರೆ ಎಂದರು.

‘ಬೆಳಕಿನ ಹಬ್ಬ ದೀಪಾವಳಿ ವೇಳೆ ಗೋವಿನ ಪೂಜೆಗೆ ವಿಶೇಷ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಬಿಡದಿಯ ನನ್ನ ತೋಟದಲ್ಲಿ ಗೋಪೂಜೆ ನೆರವೇರಿಸಲಾಯಿತು’ ಎಂದು ತಿಳಿಸಿದರು.

ADVERTISEMENT

‘ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸುಡುವ ಸಮಯದಲ್ಲಿ ಕೆಲವರು ದೃಷ್ಟಿಗೆ ಹಾನಿ ಮಾಡಿಕೊಂಡಿರುವ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯಾರೂ ಕೂಡ ಈ ಎಚ್ಚರ ತಪ್ಪಬಾರದು. ಮಕ್ಕಳ ಬಗ್ಗೆ ಪೋಷಕರು ಗಮನ ಇಟ್ಟಿರಬೇಕು. ಇನ್ನೂ ಮಕ್ಕಳಿಗೆ ಕೋವಿಡ್‌ ಲಸಿಕೆ ಬಂದಿಲ್ಲ ಎನ್ನುವುದನ್ನು ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.