ADVERTISEMENT

‘ವಿದೇಶಿ ಉದ್ಯೋಗದ ಮೋಹ ಬೇಡ’

ಸ್ಪಂದನ ಟ್ರಸ್ಟ್‌ ಉದ್ಘಾಟನೆ: ಡ್ರೋಣ್‌ ತಂತ್ರಜ್ಞ ಪ್ರತಾಪ್‌ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 12:51 IST
Last Updated 7 ಫೆಬ್ರುವರಿ 2019, 12:51 IST
 ಎಂ.ಎಚ್. ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಯುವ ವಿಜ್ಞಾನಿ ಪ್ರತಾಪ್‌ ಅವರನ್ನು ಸನ್ಮಾನಿಸಲಾಯಿತು
 ಎಂ.ಎಚ್. ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಯುವ ವಿಜ್ಞಾನಿ ಪ್ರತಾಪ್‌ ಅವರನ್ನು ಸನ್ಮಾನಿಸಲಾಯಿತು   

ರಾಮನಗರ: ‘ದೇಶದಲ್ಲಿ ಓದಿ ಬೆಳೆದ ನಾವು ಕೆಲಸಕ್ಕೆಂದು ವಿದೇಶಕ್ಕೆ ಹೋಗುತ್ತೇವೆ ಎಂದರೆ ಅದು ಹೆತ್ತ ತಾಯಿಗೆ ಮಾಡುವ ದ್ರೋಹ’ ಎಂದು ಡ್ರೋಣ್‌ ತಂತ್ರಜ್ಞ ಖ್ಯಾತಿಯ ಯುವ ವಿಜ್ಞಾನಿ ಪ್ರತಾಪ್‌ ಅಭಿಪ್ರಾಯಪಟ್ಟರು.

ನಗರದ ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ನಡೆದ ಸ್ಪಂದನಾ ಚಾರಿಟಬಲ್ ಟ್ರಸ್ಟ್‌ನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಹಲವು ಅಪಮಾನ, ಕಷ್ಟಗಳನ್ನು ಎದುರಿಸಿ ಏನನ್ನಾದರೂ ಸಾಧಿಸಬೇಕು ಎನ್ನುವ ಛಲದಿಂದ ಮುನ್ನುಗ್ಗಿ ಈ ಸಾಧನೆ ಮಾಡಿದ್ದೇನೆ. ಇದರಿಂದ ಜಾಗತಿಕ ಮಟ್ಟದ ಮನ್ನಣೆ ಸಿಗುತ್ತಿದೆ. ವಿದೇಶಗಳಿಂದ ಅವಕಾಶಗಳು ಬಂದಿವೆ. ಆದರೆ ನನ್ನ ದೇಶಕ್ಕಾಗಿ ದುಡಿಯುವ ನಿರ್ಧಾರ ಮಾಡಿದ್ದೇನೆ’ ಎಂದರು.

ಭಾಷೆಯ ವಿಚಾರದಲ್ಲಿ ತಮಗೆ ಆದ ಅನುಭವಗಳನ್ನು ಅವರು ವಿವರಿಸಿದರು. ‘ಬಿ.ಎಸ್ಸಿ ಸೇರುವವರೆಗೆ ನಾನು ಕನ್ನಡ ಮಾಧ್ಯಮದಲ್ಲಿ ಓದಿದ್ದೆ. ಸಾಕಷ್ಟು ಸಾಧಕರು ತಮ್ಮ ಮಾತೃಭಾಷೆಯಲ್ಲಿಯೇ ಸಂಶೋಧನೆಗಳನ್ನು ಮಂಡಿಸುತ್ತಾರೆ. ಭಾಷೆ ಎನ್ನುವುದು ಒಂದು ಮಾಧ್ಯಮವಷ್ಟೇ. ನಮ್ಮ ಸಾಧನೆಗಳನ್ನು ತಿಳಿಸುವ ಕೌಶಲ ಬೇಕು ಅಷ್ಟೇ’ ಎಂದರು.

ADVERTISEMENT

ಸ್ಪಂದನ ಹೆಲ್ತ್‌ ಕೇರ್‌ ಕೇಂದ್ರದ ಆಪ್ತ ಸಮಾಲೋಚಕಿ ಡಾ. ಎಸ್‌ಕೆ. ಪೂರ್ಣಿಮಾ ದೇವಿ ಮಾತನಾಡಿ ‘ಪ್ರತಿಯೊಬ್ಬರೊಳಗೂ ಪ್ರತಾಪ್‌ ಇದ್ದೇ ಇರುತ್ತಾರೆ. ನಮ್ಮೊಳಗಿನ ಸಾಧಕರನ್ನು ನಾವೇ ಗುರುತಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಋಣಾತ್ಮಕ ಚಿಂತನೆಗಳನ್ನು ಬಿಟ್ಟು ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.

ಟ್ರಸ್ಟ್‌ನ ಗೌರವ ಅಧ್ಯಕ್ಷ ಎಂ. ಬೈರೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಮುತ್ತಣ್ಣ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.