ADVERTISEMENT

ರಾಮನಗರ: ಹೆಲ್ಮೆಟ್‌ ಧರಿಸದೇ ಪೊಲೀಸರಿಗೆ ಅವಾಜ್‌, ಜೈಲು ಪಾಲಾದ ಯುವಕರು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 13:45 IST
Last Updated 17 ಅಕ್ಟೋಬರ್ 2019, 13:45 IST
   

ರಾಮನಗರ: ಹೆಲ್ಮೆಟ್‌ ಧರಿಸದೇ ನಿಯಮ ಉಲ್ಲಂಘಿಸಿದ ಜೊತೆಗೆ ಪೊಲೀಸರಿಗೆ ಧಮಕಿ ಹಾಕಿದ ಇಬ್ಬರು ಇದೀಗ ಜೈಲು ಅತಿಥಿಗಳಾಗಿದ್ದಾರೆ.

ಬುಧವಾರ ಮಧ್ಯಾಹ್ನ ರಾಮನಗರದ ಸಂಚಾರಿ ಪೊಲೀಸ್ ಠಾಣೆ ಮುಂಭಾಗ ಹೆಲ್ಮೆಟ್ ತಪಾಸಣೆ ಮಾಡುತ್ತಿದ್ದ ಪೊಲೀಸರಿಗೆ ರೆಹಮಾನಿಯ ನಗರದ ನದೀಮ್ ಪಾಶ (29) ಎಂಬ ಯುವಕ ಹೆಲ್ಮೆಟ್‌ ಧರಿಸದೇ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ₹500 ದಂಡ ವಿಧಿಸಿದ್ದಾರೆ. ಈ ಸಂದರ್ಭ ಆತ ಪೊಲೀಸರು ಕೊಟ್ಟ ರಸೀದಿ ಹರಿದು ಹಾಕಿದ್ದಲ್ಲದೇ ‘ಅದೇನು ಮಾಡ್ಕೋತೀರಾ ಮಾಡಿಕೊಳ್ಳಿ’ ಎಂದು ಅವಾಜ್‌ ಹಾಕಿ ಬೈಕ್‌ ಏರಿದ್ದಾನೆ. ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಫೇಸ್‌ಬುಕ್‌ ಲೈವ್‌: ಮಂಗಳವಾರ ಮಧ್ಯಾಹ್ನ ಕುದೂರು ಬೈಪಾಸ್‌ನಲ್ಲಿ ಪೊಲೀಸ್ ಕಾರ್ಯಾಚರಣೆಯನ್ನು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಿದ ಕಿರಣ್‌ಕುಮಾರ್ ಅಲಿಯಾಸ್‌ ಮೈಕಲ್‌ (35) ಎಂಬಾತ ಸಹ ಪೊಲೀಸರ ಅತಿಥಿಯಾಗಿದ್ದಾನೆ.

ADVERTISEMENT

ಕಿರಣ್‌ ಹೆಲ್ಮೆಟ್‌ ಧರಿಸದ ಹಿನ್ನೆಲೆಯಲ್ಲಿ ಪೊಲೀಸರು ₹500 ದಂಡ ವಿಧಿಸಿದ್ದಾರೆ. ಇದರಿಂದ ಕೋಪಗೊಂಡ ಕಿರಣ್‌ ಪೊಲೀಸರನ್ನು ನಿಂದಿಸಿದ್ದಲ್ಲದೇ ಪೊಲೀಸರು ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಫೇಸ್‌ಬುಕ್‌ ಲೈವ್‌ ಮಾಡಿದ್ದ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.