ADVERTISEMENT

ತ್ಯಾಗ, ಬಲಿದಾನದ ಹಬ್ಬ ಬಕ್ರೀದ್ ಆಚರಣೆ

ಜಿಲ್ಲೆಯಾದ್ಯಂತ ಈದ್ಗಾ, ಮಸೀದಿಯಲ್ಲಿ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 15:38 IST
Last Updated 12 ಆಗಸ್ಟ್ 2019, 15:38 IST
ತುಮಕೂರಿನಲ್ಲಿ ಈದ್ಗಾ ಮೈದಾನದ ಮುಂಭಾಗ ಬಲೂನ್ ಸೇರಿದಂತೆ ಮಕ್ಕಳ ಆಟಿಕೆ ವಸ್ತುಗಳ ಮಾರಾಟದ ನೋಟ ಗಮನ ಸೆಳೆಯಿತು
ತುಮಕೂರಿನಲ್ಲಿ ಈದ್ಗಾ ಮೈದಾನದ ಮುಂಭಾಗ ಬಲೂನ್ ಸೇರಿದಂತೆ ಮಕ್ಕಳ ಆಟಿಕೆ ವಸ್ತುಗಳ ಮಾರಾಟದ ನೋಟ ಗಮನ ಸೆಳೆಯಿತು   

ತುಮಕೂರು: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ( ಈದ್ ಉಲ್‌ ಅದ್‌ಹಾ) ಹಬ್ಬವನ್ನು ಸೋಮವಾರ ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ಸಂಭ್ರಮದಿಂದ ಆಚರಣೆ ಮಾಡಿದರು.

ಬೆಳಿಗ್ಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಈದ್ಗಾಗಳಲ್ಲಿ ಸಾಮೂಹಿಕ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಮಕ್ಕಳು, ಹಿರಿಯರು ಹೊಸ ಉಡುಗೆ ತೊಟ್ಟು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಸಂಬಂಧಿಕರು, ಸ್ನೇಹಿತರ ಮನೆಗೆ ಭೇಟಿ ನೀಡಿ ಹಬ್ಬದ ಶುಭಾಶಯ ಹೇಳಿದರು.

ತುಮಕೂರು ನಗರದ ಕುಣಿಗಲ್ ರಸ್ತೆಯ ಈದ್ಗಾದಲ್ಲಿ ನಗರದ ವಿವಿಧ ಬಡಾವಣೆಯ ಮುಸ್ಲಿಮರು ಬೆಳಿಗ್ಗೆ 10 ಗಂಟೆಗೆ ಬಂದು ಸಾಮೂಹಿಕ ವಿಶೇಷ ಪ್ರಾರ್ಥನೆ ಮಾಡಿದರು.

ADVERTISEMENT

ಈದ್ಗಾ ಮೈದಾನದೊಳಗಡೆ ಹಾಗೂ ಹೊರ ಭಾಗದ ರಸ್ತೆಯಲ್ಲಿ ಸಾವಿರಾರು ಮುಸ್ಲಿಮರು ಪ್ರಾರ್ಥನೆ ಮಾಡಿದರು.

ಹಿರಿಯರೊಂದಿಗೆ ಮಕ್ಕಳು ಪಾಲ್ಗೊಂಡು ಶ್ರದ್ಧೆ ಮೆರೆದರು. ಈದ್ಗಾ ಮುಂದೆ ಮಾರಾಟ ಮಾಡುತ್ತಿದ್ದ ಬಣ್ಣ ಬಣ್ಣದ ಬಲೂನ್‌ಗಳು ಮಕ್ಕಳನ್ನು ಆಕರ್ಷಿಸಿದವು. ಬಲೂನ್‌ ಹಿಡಿದು ಮಕ್ಕಳು ಹಬ್ಬದ ಸಂಭ್ರಮದಲ್ಲಿ ಮುಳುಗಿದರು.

ಗಣ್ಯರ ಶುಭಾಶಯ: ಸಂಸದ ಜಿ.ಎಸ್. ಬಸವರಾಜ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಹಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ತುಮಕೂರು ನಗರ ಡಿವೈಎಸ್ಪಿ ತಿಪ್ಪೇಸ್ವಾಮಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಈದ್ಗಾ ಮುಂಭಾಗ ಮುಸ್ಲಿಮರಿಗೆ ಹಬ್ಬದ ಶುಭಾಶಯ ಕೋರಿದರು.

‘ಬಕ್ರೀದ್ ಹಬ್ಬ ಶಾಂತಿ ಸೌಹಾರ್ದತೆಯ ಸಂಕೇತವಾಗಿದೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಸಹೋದರತೆ ಬೆಳೆಸಿಕೊಳ್ಳುವುದು ಹಬ್ಬವಾಗಿದೆ. ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿಕೊಂಡು ಹೋಗುತ್ತಿರುವುದು ನಾಡಿನ ಶಾಂತಿಯ ಪ್ರತೀಕವಾಗಿದೆ’ ಎಂದು ಡಾ.ರಫೀಕ್ ಅಹಮ್ಮದ್ ಹೇಳಿದರು.

ಶುಭಾಶಯ ಕೋರಿದ ಗಣ್ಯರು, ಅಧಿಕಾರಿಗಳನ್ನು ಮುಸ್ಲಿಂ ಸಮುದಾಯದ ಮುಖಂಡರಾದ ಮಾಜಿ ಶಾಸಕರಾದ ಡಾ.ರಫೀಕ್ ಅಹಮ್ಮದ್, ಶಫಿ ಅಹಮ್ಮದ್, ವಕ್ಫ್ ಜಿಲ್ಲಾ ಸಮಿತಿ ಅಧ್ಯಕ್ಷ ಮುಷ್ತಾಕ್ ಅಹಮ್ಮದ್ ಹಾಗೂ ಇತರರು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.