ADVERTISEMENT

ಅಂಜನಾಪುರ ಜಲಾಶಯ ಭರ್ತಿ: ರೈತರ ಸಂತಸ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 10:39 IST
Last Updated 10 ಜುಲೈ 2013, 10:39 IST

ಶಿಕಾರಿಪುರ: ತಾಲ್ಲೂಕಿನ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯಲು ನೀರು ಒದಗಿಸುವ ಅಂಜನಾಪುರ ಜಲಾಶಯ ಮಂಗಳವಾರ ಭರ್ತಿಯಾಗಿದ್ದು, ಜಲಾಶಯದ ಕೋಡಿ ಮೇಲೆ ನೀರು ಹರಿದು ಬರುತ್ತಿದೆ.

ತಾಲ್ಲೂಕಿನ ಬಹುತೇಕ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಲು ಅಂಜನಾಪುರ ಜಲಾಶಯ ಭರ್ತಿಯಾಗಬೇಕು ಎಂಬ ನಿರೀಕ್ಷೆಯ ಲ್ಲಿರುತ್ತಾರೆ.  ಪಕ್ಕದ ತೀರ್ಥಹಳ್ಳಿ ತಾಲ್ಲೂಕಿನ ಹುಂಚ, ರಿಪ್ಪನ್‌ಪೇಟೆ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಸುರಿಯುವ ಬಹುತೇಕ ಮಳೆಯ ನೀರು ಈ ಜಲಾಶಯಕ್ಕೆ ಹರಿದು ಬರುವುದರಿಂದ ಜಲಾಶಯ ಭರ್ತಿಯಾಗುತ್ತದೆ.

ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಮಳೆಗೆ ಅಂಜನಾಪುರ ಜಲಾಶಯ ಭರ್ತಿಯಾಗುವ ನಿರೀಕ್ಷೆಯನ್ನು ರೈತರು ಹೊಂದಿದ್ದರು. ರೈತರ ನಿರೀಕ್ಷೆಯಂತೆ ಜಲಾಶಯ ಭರ್ತಿಯಾಗಿ ಕೋಡಿ ಮೇಲೆ ನೀರು ಹರಿಯುತ್ತಿದೆ. ಜತೆಗೆ ಕಾಲುವೆ ಮೂಲಕ ಜಲಾಶಯ ನೀರನ್ನು ಬಿಡಲಾಗುತ್ತಿದ್ದು, ಅಚ್ಚುಕಟ್ಟು ರೈತರ ಮೊಗದಲ್ಲಿ ಹರ್ಷ ತಂದಿದೆ. 

ಅಂಜನಾಪುರ ಜಲಾಶಯ ಭರ್ತಿಯಾಗಿರುವುದರಿಂದ ರೈತರು ಧೈರ್ಯದಿಂದ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗಿದೆ ಎಂದು ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತ ಜೆ.ಎಸ್. ಮಂಜುನಾಥ್ ಅಭಿಪ್ರಾಯಪಡುತ್ತಾರೆ.

ಅಂಜನಾಪುರ ಜಲಾಶಯದ ಎಡನಾಲೆ ಸಂಪೂರ್ಣ ಗಿಡ ಗಂಟಿಗಳಿಂದ ಕೂಡಿದ್ದು, ನಾಲೆ ಸಂಪೂರ್ಣ ಮುಚ್ಚಿ ಹೋಗಿದೆ ಹಾಗೂ ಜಲಾಶಯದ ನೀರು ಸಾಗುವ ಕಾಲುವೆ ಸಮೀಪದ ಬಹಳಷ್ಟು ತೂಬುಗಳಲ್ಲಿ ಗೇಟುಗಳಿಲ್ಲದ ಕಾರಣ ನೀರು ಪೋಲಾಗುತ್ತಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಾಗಿದೆ ಎಂಬುದು ಚುರ್ಚಿಗುಂಡಿ ಗ್ರಾಮದ ಸಾವಯವ ಕೃಷಿಕ ಬಿ.ಎನ್. ನಂದೀಶ್‌ರವರ ಅಭಿಪ್ರಾಯ.

ರೈತರು ಮಳೆಗಾಲದಲ್ಲಿ ಪ್ರಮುಖವಾಗಿ ಭತ್ತ ಬೆಳೆಯಲು ಈ ಜಲಾಶಯದ ನೀರು ಉಪಯುಕ್ತವಾಗಲಿದ್ದು, ಶಿಕಾರಿಪುರ ಪಟ್ಟಣ ಸಮೀಪವಿರುವ ಕೃಷಿ ಭೂಮಿ ಸೇರಿದಂತೆ ತಾಲ್ಲೂಕಿನ ಕಲ್ಮನೆ, ಹಿತ್ತಲ, ಚುರ್ಚಿಗುಂಡಿ, ಈಸೂರು, ಗಾಮ, ನೆಲವಾಗಿಲು, ಹೊಸಗೊದ್ದನಕೊಪ್ಪ ಮತ್ತಿಕೋಟೆ ಹಾಗೂ ನಿಂಬೆಗೊಂದಿ, ಮುಗಳಗೇರಿ ಸೇರಿದಂತೆ ಹಲವು ಗ್ರಾಮಗಳ ರೈತರ ಕೃಷಿ ಭೂಮಿಗೆ ಭತ್ತ ಸೇರಿದಂತೆ ಇತರ ಬೆಳೆ ಬೆಳೆಯಲು ಜಲಾಶಯದ ನೀರು ಸಹಕಾರಿಯಾಗುತ್ತದೆ. 

ಪಟ್ಟಣದ ಹುಚ್ಚರಾಯಸ್ವಾಮಿ ಕೆರೆ ಸೇರಿದಂತೆ ತಾಲ್ಲೂಕಿನ ಬಹುತೇಕ ಕೆರೆ ಕಟ್ಟೆಗಳು ತುಂಬಿಕೊಳ್ಳುವಲ್ಲಿ ಅಂಜನಾಪುರ ಜಲಾಶಯದ ನೀರು ಪ್ರಮುಖ ಪಾತ್ರ ವಹಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.