ADVERTISEMENT

ಅಕ್ರಮ ಗಣಿಗಾರಿಕೆಗೆ ವಿರೋಧ 22ರಿಂದ ಗದಗ ಚಲೋ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 10:45 IST
Last Updated 7 ಜನವರಿ 2012, 10:45 IST

ಶಿವಮೊಗ್ಗ: `ಗದಗ ಚಲೋ... ನೈಸರ್ಗಿಕ ಸಂಪನ್ಮೂಲ ಬಚಾವೋ~ ಎಂಬ ಜನ ಜಾಗೃತಿ ಜಾಥಾವನ್ನು ಗ್ರಾಮ ಗಣರಾಜ್ಯ ವೇದಿಕೆಯಡಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಜ. 22ರಿಂದ 25ವರೆಗೆ ಹಮ್ಮಿಕೊಂಡಿದೆ.

ಗದಗದ ಕಪ್ಪತಗುಡ್ಡದಲ್ಲಿ ಭಾರಿ ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸಂಸ್ಥೆ ಈ ಜಾಥಾ ಆಯೋಜಿಸಿದೆ ಎಂದು ಸಂಸ್ಥೆ ಹಿರಿಯ ಸಲಹೆಗಾರ ಎಸ್.ಆರ್. ಹಿರೇಮಠ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಜಾಥಾ ರಾಜ್ಯದ ವಿವಿಧ ಭಾಗಗಳಿಂದ ಮೂರು ಮಾರ್ಗಗಳಿಂದ ಆರಂಭಗೊಂಡುಜ. 25ರಂದು ಗದಗದಲ್ಲಿ ಸಮಾಪನಗೊಳ್ಳುವುದು. ಜ. 23ರಂದು ಶಿವಮೊಗ್ಗ, ಸಾಗರ, ಸೊರಬ, ಶಿರಸಿ, ಯಲ್ಲಾಪುರ, ಕಲಗಘಗಿ, ಧಾರವಾಡ, ಹುಬ್ಬಳ್ಳಿ ನಂತರ ಗದಗದಲ್ಲಿ ಸಮಾವೇಶ ಗೊಳ್ಳುವುದು. ಜಾಥಾದಲ್ಲಿ ಪರಿಸರ ಆಸಕ್ತರು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸುವರು ಎಂದು ಹೇಳಿದರು.

25ರಂದು ಬೆಳಿಗ್ಗೆ 10ಕ್ಕೆ ಜಾಥಾ ಮುಖಾಂತರ ಹಾಡು- ಘೋಷಣೆಗಳೊಂದಿಗೆ ಕರಪತ್ರಗಳನ್ನು ವಿತರಿಸುತ್ತಾ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಾಗೃತಿ ರೇಖೆ ಮಾಡಿ, ಪ್ರಧಾನ ಮಂತ್ರಿಗೆ, ಮುಖ್ಯಮಂತ್ರಿ ಅವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.

ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ವ್ಯವಸ್ಥಿತ ಸಂಚು ಸರ್ಕಾರದಿಂದ ನಡೆದಿದೆ. ದಕ್ಷ ಲೋಕಾಯುಕ್ತ ಅಧಿಕಾರಿಗಳಾದ ಪ್ರಣವ್ ಹಾಗೂ ಗಾವಂಕರ್ ಅವರನ್ನು ಮಾಜಿ ಮುಖ್ಯಮಂತ್ರಿಯೊಬ್ಬರ ಅಣತಿ ಮೇರೆಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿದರು.

ಸರ್ಕಾರದ ಕಡೆಯಿಂದ ಲೋಕಾಯುಕ್ತ ಹುದ್ದೆಗೆ ಶಿಫಾರಸುಗೊಂಡಿರುವ ನ್ಯಾಯ ಮೂರ್ತಿ ಬನ್ನೂರು ಮಠ ಅವರು ಈಗ ಎದ್ದಿರುವ ಗೊಂದಲದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅವರಂತೆ ತಮಗೆ ಈ ಸ್ಥಾನ ಬೇಡ ಎಂದು ಸ್ಪಷ್ಟಪಡಿಸಬೇಕು ಎಂದು ಹಿರೇಮಠ ಸಲಹೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜನ ಸಂಗ್ರಾಮ ಪರಿಷತ್ ಮುಖಂಡ ರಾಘವೇಂದ್ರ ಕುಷ್ಟಗಿ, ರೈತ ಮುಖಂಡರಾದ ಕಡಿದಾಳು ಶಾಮಣ್ಣ, ಎಚ್.ಆರ್. ಬಸವರಾಜಪ್ಪ, ವಿವಿಧ ಸಂಘಟನೆಗಳ ಮುಖಂಡರಾದ ರಮೇಶ್ ಕರ್ಕಿ,ಕೆ.ವಿ. ವಸಂತಕುಮಾರ್, ಶಂಕರಪ್ಪ, ರಾಘವೇಂದ್ರ ಹಾದಿಗಲ್ಲು, ಶ್ರೀಧರ್, ಸರ್ಜಾ ಶಂಕರ ಹರಳಿಮಠ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.