ADVERTISEMENT

ಅಡಿಕೆ ಸುಲಿಯುವ ಯಂತ್ರಕ್ಕೆ ಹೆಚ್ಚಿದ ಬೇಡಿಕೆ

ಪ್ರತಿ ಯಂತ್ರಕ್ಕೆ ಸರ್ಕಾರದಿಂದ ₹ 50 ಸಾವಿರ ಸಬ್ಸಿಡಿ: ಕ್ಷೀಣಿಸುತ್ತಿರುವ ಮಲೆನಾಡು ಮಾದರಿಯ ಹಸ, ಬೆಟ್ಟೆ ಅಡಿಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 8:45 IST
Last Updated 21 ಡಿಸೆಂಬರ್ 2017, 8:45 IST
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಹಿಳೆಯರು ಸಾಂಪ್ರದಾಯಿಕ ಅಡಿಕೆ ಹಸ, ಬೆಟ್ಟೆ ಸಿದ್ಧಪಡಿಸಲು ಅಡಿಕೆ ಸುಲಿಯುವ ಕೆಲಸದಲ್ಲಿ ನಿರತರಾಗಿರುವುದು.
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಹಿಳೆಯರು ಸಾಂಪ್ರದಾಯಿಕ ಅಡಿಕೆ ಹಸ, ಬೆಟ್ಟೆ ಸಿದ್ಧಪಡಿಸಲು ಅಡಿಕೆ ಸುಲಿಯುವ ಕೆಲಸದಲ್ಲಿ ನಿರತರಾಗಿರುವುದು.   

ತೀರ್ಥಹಳ್ಳಿ: ಅಡಿಕೆ ಚಪ್ಪರದ ನೆರಳಿನಲ್ಲಿ ಮೆಟ್ಟುಗತ್ತಿ ಮಣೆ ಮೇಲೆ ಕುಳಿತು ಕರಕರ ಶಬ್ದ ಮಾಡುತ್ತಾ ಹತ್ತಾರು ಕೈಗಳು ಅಡಿಕೆ ಸುಲಿಯುವ ದೃಶ್ಯ ನಿಧಾನಕ್ಕೆ ಮಲೆನಾಡಿನಿಂದ ಸರಿಯುತ್ತಿದೆ. ಹೆಂಗಸರು, ಮಕ್ಕಳು ಹಾಡು, ಕಥೆ ಹೇಳುತ್ತಾ, ತಮಾಷೆ ಮಾಡಿಕೊಳ್ಳುತ್ತಾ ಅಡಿಕೆ ಸುಲಿಯುವ ಜಾಗದಲ್ಲಿ ಇಂದು ಅಡಿಕೆ ಸುಲಿಯುವ ಯಂತ್ರ ಸದ್ದು ಮಾಡುತ್ತಿದೆ.

ಈ ಯಂತ್ರಗಳಿಂದ ಇಂದು ರೈತರು ಅಡಿಕೆ ಸುಲಿಯುವ ದೊಡ್ಡ ಹೊರೆಯಿಂದ ತಪ್ಪಿಸಿಕೊಂಡಿದ್ದಾರೆ. ಎಷ್ಟಾದರೂ ಅಡಿಕೆ ಬೆಳೆಯಬಹುದು ಆದರೆ, ಕೊಯಿಲಾದ ಫಸಲನ್ನು ಹೇಗೆ ಸಂಸ್ಕರಣೆ ಮಾಡುವುದು ಎಂಬ ಚಿಂತೆ ಅಡಿಕೆ ಬೆಳೆಗಾರರನ್ನು ಕಾಡಿತ್ತು. ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಅಡಿಕೆ ಸುಲಿಯುವುದು ಸವಾಲಿನ ಕೆಲಸವಾಗಿ ಪರಿಣಮಿಸಿತ್ತು. ಈಗ ಅಡಿಕೆ ಸುಲಿಯಲು ಸುಧಾರಿತ ಯಂತ್ರಗಳು ರೈತರ ಮನೆಯಂಗಳದಲ್ಲಿ ಸ್ಥಾಪನೆಯಾಗಿವೆ. ವಿವಿಧ ಮಾದರಿಗಳ ಯಂತ್ರಗಳು ಹತ್ತಾರು ಜನರು ಮಾಡಬಹುದಾದ ಕೆಲಸವನ್ನು ಕೆಲವೇ ಗಂಟೆಗಳಲ್ಲಿ ಮಾಡಿ ಮುಗಿಸುತ್ತಿವೆ.

ಮಲೆನಾಡಿನ ಸಾಂಪ್ರದಾಯಿಕ ಅಡಿಕೆಯಾದ ಹಸ, ಬೆಟ್ಟಿ ಮಾದರಿಯ ಅಡಿಕೆ ಮಾರುಕಟ್ಟೆಯಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದವು. ಆದರೆ, ಅವುಗಳನ್ನು ಸಿದ್ಧ ಮಾಡುವವರ ಸಂಖ್ಯೆ ಬಹಳಷ್ಟು ಕ್ಷೀಣಿಸಿದೆ. ಇಡಿ ಅಡಿಕೆಗೆ ಮಾತ್ರ ಸೀಮಿತಗೊಳ್ಳುವಂತಾಗಿದೆ.

ADVERTISEMENT

ಗೊನೆ ಕೀಳುವುದು, ಅಡಿಕೆ ಸುಲಿಯುವುದು, ಬೇಯಿಸಿ ಒಣಗಿಸುವ ಎಲ್ಲ ಹಂತಕ್ಕೂ ಕಾರ್ಮಿಕರು ಅನಿವಾರ್ಯ. ಇಂಥ ಪರಿಸ್ಥಿತಿಯಲ್ಲಿ ಅಡಿಕೆ ಸುಲಿಯುವುದನ್ನು ಸುಲಭ ಮಾಡಿಕೊಳ್ಳಲು ಬಹುತೇಕ ರೈತರು ಅಡಿಕೆ ಸುಲಿಯುವ ಯಂತ್ರಗಳಿಗೆ ಮೊರೆ ಹೋಗಿದ್ದಾರೆ. ಸಾಂಪ್ರದಾಯಿಕವಾಗಿ ಅಡಿಕೆ ಸಂಸ್ಕರಣೆ ಮಾಡುವ ರೈತರು ಮಾತ್ರ ಇಂದಿಗೂ ಹಸ, ಬೆಟ್ಟೆ ಮಾದರಿಯ ಅಡಿಕೆಯನ್ನು ಸಿದ್ಧಪಡಿಸುತ್ತಿದ್ದಾರೆ.

2016–17ನೇ ಸಾಲಿನಲ್ಲಿ ತೋಟಗಾರಿಕಾ ಇಲಾಖೆ ಮುಖಾಂತರ 85 ಫಲಾನುಭವಿ ರೈತರಿಗೆ ಅಡಿಕೆ ಸುಲಿಯುವ ಯಂತ್ರವನ್ನು ಸಬ್ಸಿಡಿ ದರದಲ್ಲಿ ನೀಡಲಾಗಿತ್ತು. 2017–18ನೇ ಸಾಲಿನಲ್ಲಿ ಕೇವಲ ಒಂಬತ್ತು ಯಂತ್ರಗಳನ್ನು ರೈತರಿಗೆ ನೀಡಲಾಗಿದೆ. ರಿಯಾಯಿತಿ ದರದ ಯಂತ್ರಗಳಿಗಾಗಿ ರೈತರಿಂದ 350 ಅರ್ಜಿಗಳು ಸಲ್ಲಿಕೆಯಾಗಿದೆ. ಇದುವರೆಗೆ ಕೇವಲ ₹ 5 ಲಕ್ಷ ಬಂದಿದೆ. ಪ್ರತಿ ಯಂತ್ರಕ್ಕೆ ಸರ್ಕಾರ ₹ 50 ಸಾವಿರ ಸಬ್ಸಿಡಿ ನೀಡುತ್ತಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಡಿಕೆ ಸುಲಿಯಲು ಮಲೆನಾಡಿಗೆ ಬಯಲುಸೀಮೆಯಿಂದ ಕಾರ್ಮಿಕರನ್ನು ಕರೆತರುತ್ತಿದ್ದರು. ಈಗ ಬಯಲುಸೀಮೆಯಿಂದ ಅಷ್ಟಾಗಿ ಮಲೆನಾಡಿಗೆ ಅಡಿಕೆ ಸುಲಿಯಲು ಕಾರ್ಮಿಕರು ಬರುತ್ತಿಲ್ಲ. ದೊಡ್ಡ ರೈತರ ಮನೆಗಳಲ್ಲಿ ಯಂತ್ರಗಳು ನೆಲೆ ನಿಂತ ಕಾರಣ ಸ್ಥಳೀಯವಾಗಿ ಅಡಿಕೆ ಸುಲಿಯಲು ಕಾರ್ಮಿಕರಿಗೆ ಕೊರತೆ ತಪ್ಪಿದೆ.
– ಶಿವಾನಂದ ಕರ್ಕಿ

*
ಅಡಿಕೆ ಸುಲಿಯಲು ನಾವು ಸ್ಥಳೀಯ ಕಾರ್ಮಿಕರನ್ನೇ ಅವಲಂಬಿಸಿದ್ದೇವೆ. ಇದರಿಂದ ಅವರಿಗೆ ಕೆಲಸವೂ ಸಾಂಪ್ರದಾಯಿಕ ಹಸ, ಬೆಟ್ಟೆ ಸಿದ್ಧವೂ ಆಗುತ್ತದೆ.
–ಕೊಪ್ಪಲು ರಾಮಚಂದ್ರ,
ಅಡಿಕೆ ಬೆಳೆಗಾರ

*
ಅಡಿಕೆ ಸುಲಿಯುವ ಯಂತ್ರಗಳಿಂದ ರೈತರಿಗೆ ಅನುಕೂಲವಾಗಿದೆ. ಈಗ ಪ್ರತಿ ರೈತರೂ ಪ್ರತ್ಯೇಕ ಯಂತ್ರ ಬಳಸುತ್ತಾರೆ.‘
–ಸಿದ್ದಲಿಂಗೇಶ್ವರ್‌, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.