ADVERTISEMENT

ಅಡುಗೆಯವರಿಗೆ ಬೆವರಿಳಿಸುತ್ತಿರುವ ಪೂರಿ!

ರಿಪ್ಪನ್‌ಪೇಟೆ: ಶಾಲೆಯಲ್ಲಿ ಮಕ್ಕಳಿಗೆ ಪೂರಿ ಭಾಗ್ಯ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 8:55 IST
Last Updated 11 ಡಿಸೆಂಬರ್ 2013, 8:55 IST

ರಿಪ್ಪನ್‌ಪೇಟೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ನಡೆಯುತ್ತಿರುವ ಬಿಸಿಯೂಟದಲ್ಲಿ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ಮಕ್ಕಳಿಗೆ ಮಂಗಳವಾರ ಪೂರಿ ಭಾಗ್ಯ ಲಭ್ಯವಾಗಿದೆ.

ಆದರೆ, ಈ ಶಾಲೆಯ 730ಕ್ಕೂ ಅಧಿಕ ಮಕ್ಕಳಿಗೆ ಬಿಸಿಯೂಟದೊಂದಿಗೆ ಸಮಯಕ್ಕೆ ಸರಿಯಾಗಿ ಪೂರಿ ಸರಬರಾಜು ಮಾಡುವುದರಲ್ಲಿ 6ಜನ ಮಹಿಳಾ ಸಿಬ್ಬಂದಿಗೆ ಮಾತ್ರ ಬೆವರಿಳಿಯಿತ್ತಿದೆ.

ಸರ್ಕಾರವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು  ಇರುವ ಅಡಿಗೆ ಸಿಬ್ಬಂದಿಗೆ ಹೆಚ್ಚಿನ ಹೊಣೆಗಾರಿಕೆ ನೀಡಿರುವುದು ಸಮಂಜಸವಲ್ಲ ಎಂಬುವುದು ಪೋಷಕರ ಅಭಿಪ್ರಾಯ. ಕ್ಷೀರ ಭಾಗ್ಯ ಯೋಜನೆಯಡಿ ಹಾಲಿನ ಸರಬರಾಜು, ವಾರದಲ್ಲಿ ಮೂರು ದಿನ ಗೋಧಿಯಿಂದ ತಯಾರಿಸಿದ ಅಡಿಗೆ ಜೊತೆಗೆ ಮಾಮೂಲಿ ಬಿಸಿ ಊಟ ನೀಡಬೇಕಾದದ್ದು ಈಗಿನ ನಿಯಮ.

ಈ ಪರಿಶ್ರಮಕ್ಕೆ ಕೇವಲ ಆರು ಜನ ಸಿಬ್ಬಂದಿ ಅವರಿಂದ ಸಮಯಕ್ಕೆ ಸರಿಯಾಗಿ ಪೂರಿಯನ್ನು ತಯಾರಿಸಿ ಒದಗಿಸುವುದು ಕಷ್ಟವಾಗಿದೆ. ಇಷ್ಟಕ್ಕೂ ಈ ಶ್ರಮಕ್ಕೆ ಸರ್ಕಾರ ನೀಡುವ ಮಾಸಿಕ ವೇತನ ಮಾತ್ರ ಪ್ರತಿಯೊಬ್ಬರಿಗೂ ತಲಾ ₨ 1,100  ಮಾತ್ರ ಎಂಬುದೇ ಬೇಸರದ ವಿಷಯ. 

ಅಗ್ಗದ ಪ್ರಚಾರ ಪಡೆಯುವ ಸರ್ಕಾರವು ಈ ಯೋಜನೆಗಳನ್ನು ಸೃಷ್ಟಿ ಮಾಡುವ ಭರಾಟೆಯಲ್ಲಿ ಗ್ರಾಮೀಣ ಪ್ರದೇಶದ ಕಾರ್ಮಿಕರ ಶೋಷಣೆ ಯಾಗುತ್ತಿರುವ ಬಗ್ಗೆ ಪರ್ಯಾಯ ಆಲೋಚನೆ ಮಾಡಬೇಕು. ಮಕ್ಕಳ ಸಂಖ್ಯೆ ಹೆಚ್ಚಳ ಇರುವ ಶಾಲೆಗಳಿಗೆ ಅಡುಗೆ ತಯಾರಿಕೆಗೆ ಆಧುನಿಕ ಯಂತ್ರೋಪರಕಣ ನೀಡಿದಲ್ಲಿ ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಬಿಸಿಯೂಟ ತಯಾರಿಕೆ ಸಾಧ್ಯ ಎಂಬುದು  ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ  ಸಿ.ಚಂದ್ರುಬಾಬು ಅವರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.