ADVERTISEMENT

ಅತಿಕ್ರಮಣ ತೆರವಿಗೆ ಒತ್ತಾಯ

ಸಂಪರ್ಕ ರಸ್ತೆಯಲ್ಲಿ ಗುಡಿಸಲು ನಿರ್ಮಾಣ: ಆರೋಪ

​ಪ್ರಜಾವಾಣಿ ವಾರ್ತೆ
Published 19 ಮೇ 2018, 6:55 IST
Last Updated 19 ಮೇ 2018, 6:55 IST

ತ್ಯಾಗರ್ತಿ: ‘ಸಾಗರ ತಾಲ್ಲೂಕಿನ ಗೌತಮಪುರದ ಜನತಾ ಕಾಲೊನಿಯ ಕುಟುಂಬಗಳಿಗೆ ಓಡಾಡಲು 8-10 ವರ್ಷಗಳ ಹಿಂದೆ ಗ್ರಾಮ ಪಂಚಾಯ್ತಿ ನಿರ್ಮಿಸಿದ್ದ ಸಂಪರ್ಕ ರಸ್ತೆಯನ್ನು ಅತಿಕ್ರಮಣ ಮಾಡಲಾಗಿದೆ’ ಎಂದು ನೊಂದ ಕುಟುಂಬದ ದೇವರಾಜ ಅವರು ಗ್ರಾಮ ಪಂಚಾಯಿತಿ ಕಚೇರಿಗೆ ದೂರು ನೀಡಿದ್ದಾರೆ.

‘ಗಿಳಾಲಗುಂಡಿ ಕನ್ನಮ್ಮ, ರಾಜಮ್ಮ ಮತ್ತು ದೇವರಾಜ ಅವರ ಕುಟುಂಬಗಳಿಗಾಗಿ ರಸ್ತೆ ನಿರ್ಮಿಸಿದ್ದು, ರಸ್ತೆ ಮಧ್ಯದಲ್ಲಿಯೇ ರಾತ್ರೋರಾತ್ರಿ ಗುಡಿಸಲು ನಿರ್ಮಿಸಿ ತಮಗೆ ರಸ್ತೆ ಸಂಪರ್ಕ ಶಾಶ್ವತವಾಗಿ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ’ ಎಂದು ದೂರಿದ್ದಾರೆ.

ಈ ಸ್ಥಳದಲ್ಲಿ ಗ್ರಾಮ ಪಂಚಾಯ್ತಿಯಿಂದ ನಿರ್ಮಾಣವಾದ ರಸ್ತೆಯಲ್ಲಿ 10 ವರ್ಷಗಳ ಹಿಂದೆ ಉಗಳಮಕ್ಕಿ ಗಂಗಾಧರ, ನಾಗಪ್ಪ ಮತ್ತು ಭರ್ಮಪ್ಪ ಎಂಬವರು ತಮ್ಮ ಮನೆಯ ಹಿಂಭಾಗದ ಜಾಗ ಎಂದು ಅತಿಕ್ರಮಣ ಮಾಡಿದ್ದರು. ಈ ಬಗ್ಗೆ ಕುಟುಂಬಗಳು  ಸಾಗರ ನ್ಯಾಯಾಲಯದ ಮೊರೆ ಹೋಗಿದ್ದವು. ಅತಿಕ್ರಮಣದ ರಸ್ತೆಯನ್ನು ತೆರವುಗೊಳಿಸಬೇಕು ಎಂದು ಸಾಗರ ನ್ಯಾಯಾಲಯ ಮಾರ್ಚ್‌ 16 ರಂದು ತಡೆಯಾಜ್ಞೆ ನೀಡಿತ್ತು.

ADVERTISEMENT

‘ನ್ಯಾಯಾಲಯ ರಸ್ತೆ ತೆರವಿಗೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ರಸ್ತೆ ಮಧ್ಯೆ ಕಂಬ ನಿಲ್ಲಿಸಿ, ಗೋಡೆ ಕಟ್ಟಿ ಬಳಕೆಯ ಕಟ್ಟಡ ಎಂಬಂತೆ ಬಿಂಬಿಸಲು ಯತ್ನ ನಡೆದಿದೆ’ ಎಂದು ದೇವರಾಜ ಆರೋಪಿಸಿದ್ದಾರೆ.

‘ಗ್ರಾಮ ಪಂಚಾಯ್ತಿ ಪಿಡಿಒ ಮತ್ತು ಸಾಗರ ತಾಲ್ಲೂಕು ಪಂಚಾಯ್ತಿ ಇಒ ಮತ್ತು ಅರಣ್ಯ ಇಲಾಖೆ ಮೇಲಧಿಕಾರಿಗಳು ನ್ಯಾಯಾಲಯದ ಆದೇಶ ಜಾರಿಗೊಳಿಸಿ ನಿತ್ಯದ ಓಡಾಟಕ್ಕೆ ಸಂಪರ್ಕ ರಸ್ತೆಯಿಲ್ಲದೆ ಸಂಕಷ್ಟದಲ್ಲಿರುವ ತಮ್ಮ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಮ್ಮ ಕುಟುಂಬಗಳಿಗೆ ರಸ್ತೆಯಿಲ್ಲದ ಕಾರಣ ವಿದ್ಯುತ್ ಕಂಬ ನೆಟ್ಟು ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ. ರಸ್ತೆ ಮತ್ತು ವಿದ್ಯುತ್ ಸೌಲಭ್ಯ ಸಿಗದ ಕಾರಣ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದೆವು. ಆಗ ಗ್ರಾಮ ಕರ್ತವ್ಯದಲ್ಲಿದ್ದ ಕಾರ್ಯನಿರ್ವಹಣಾಧಿಕಾರಿ ಸ್ಥಳ ಪರಿಶೀಲಿದ್ದರು. ತಕ್ಷಣ ರಸ್ತೆ ಅತಿಕ್ರಮಣ ತೆರವಿಗೆ ಸೂಚಿಸಿದ್ದರು. ಆದರೆ, ಅವರ ವರ್ಗಾವಣೆಯಾದ ನಂತರ ಈ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

‘ಅಧಿಕಾರಿಗಳು ಮನೆಗೆ ಭೇಟಿ ನೀಡಿ ಮತದಾನಕ್ಕೆ ಮನವೊಲಿಸಿ ಚುನಾವಣೆ ಮುಗಿದ ನಂತರ ಕೋರ್ಟ್‌ ಆದೇಶ ಪಾಲನೆ ಮಾಡುವುದಾಗಿ ಭರವಸೆ ನೀಡಿದ್ದರು. ಈಗ ಯಾವ ಅಧಿಕಾರಿಗಳೂ ನಮ್ಮ ಅಳಲು ಆಲಿಸುತ್ತಿಲ್ಲ. ಅತಿಕ್ರಮಣದಾರರು ರಸ್ತೆ ಮಧ್ಯೆ ಗುಡಿಸಲು ನಿರ್ಮಿಸಿದ್ದಾರೆ. ತಕ್ಷಣ ನ್ಯಾಯಯುತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

**
‘ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಲು ಯತ್ನಿಸಲಾಗುತ್ತಿದೆ. ಆಧುನಿಕ ಕಾಲ ಘಟ್ಟದಲ್ಲಿ ಬದುಕುತ್ತಿರುವ ಪ್ರತಿಯೊಂದು ಕುಟುಂಬಕ್ಕೂ ರಸ್ತೆ, ವಿದ್ಯುತ್ ದೀಪ ಇತ್ಯಾದಿ ಮೂಲ ಸೌಲಭ್ಯ ಕಲ್ಪಿಸುವುದು ಗ್ರಾಮಾಡಳಿತದ ಜವಾಬ್ದಾರಿಯಾಗಿದೆ’
- ಗಾಯತ್ರಿ ರೇವಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೌತಮಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.