ADVERTISEMENT

ಅಮಾಯಕರ ಮೇಲೆ ಶಾಂತಿಭಂಗ ಪ್ರಕರಣ: ನಕ್ಸಲ್ ಪೀಡಿತ ಉಳ್ತಿಗಾ, ಕರಿಗಲ್ ಗ್ರಾಮಸ್ಥರ ದೂರು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 9:05 IST
Last Updated 17 ಆಗಸ್ಟ್ 2012, 9:05 IST

ಹೊಸನಗರ: ನಕ್ಸಲ್ ಪೀಡಿತ ಸುಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಮಾಯಕರ ಮೇಲೆ ಶಾಂತಿ ಭಂಗದ ಕೇಸು ದಾಖಲು ಮಾಡಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸುಳಗೊಡು ಗ್ರಾ.ಪಂ. ವ್ಯಾಪ್ತಿಯ ನಕ್ಸಲ್ ಪೀಡಿತ ಉಳ್ತಿಗ ಮತ್ತು ಕರಿಗಲ್ ಗ್ರಾಮದ ನಾಲ್ವರು ಪರಿಶಿಷ್ಟ ವರ್ಗದವರು ಸೇರಿದಂತೆ 9 ಅಮಾಯಕರ ಮೇಲೆ ಐಪಿಸಿ 107ರ ಅನ್ವಯ ಶಾಂತಿ ಭಂಗದ ಕೇಸನ್ನು ಪೊಲೀಸರು ದಾಖಲು ಮಾಡಿರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಉಳ್ತಿಗಾ-ಕರಿಗಲ್ ಗ್ರಾಮದ ಮಂಜಪ್ಪ, ರವಿ, ಉಮೇಶ, ಕುಮಾರ, ವೆಂಕಟೇಶ, ವಾಸಪ್ಪ ಗೌಡ, ನಾಗೇಶ, ಶ್ರೀಧರ, ಜಯಶೀಲಪ್ಪ ಗೌಡ ಎಂಬುವವರ ಮೇಲೆ ಪ್ರಕರಣ ದಾಖಲೆ ಮಾಡಲಾಗಿದೆ ಎನ್ನಲಾಗಿದೆ.

ADVERTISEMENT

ಇದರಲ್ಲಿ ಶ್ರೀಧರ ಎಂಬುವವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಮಂಜಪ್ಪ ಎಂಬುವವರಿಗೆ ಕ್ಯಾನ್ಸರ್ ಆಪರೇಷನ್ ಆಗಿದ್ದು, ಕೂಲಿ ನಾಲಿ ಮಾಡುವ ಪರಿಶಿಷ್ಟ ವರ್ಗದವರ ಮೇಲೆ ಪೊಲೀಸರು ವಿನಾಕಾರಣ ಶಾಂತಿ ಭಂಗದ ಕೇಸು ದಾಖಲೆ ಮಾಡಿದ್ದಾರೆ.

ಬಸ್ ಸಂಚಾರವಿಲ್ಲದ ಉಳ್ತಿಗಾದಿಂದ ಸುಮಾರು 12 ಕಿ.ಮೀ ಕಾಲು ನಡಿಗೆಯಲ್ಲಿ ಯಡೂರು ತಲುಪಬೇಕು. ಅಲ್ಲಿಂದ 2 ಬಸ್‌ಗಳನ್ನು ಹಿಡಿದು ಹೊಸನಗರ ಪ್ರತಿ ಸಾರಿ ಬಂದು ಹೋಗಲು ಕಷ್ಟವಾಗುತ್ತಿದೆ ಎಂಬುದು ಅವರ ಅಹವಾಲು.

ನಕ್ಸಲ್ ಪೀಡಿತ ಗ್ರಾಮಕ್ಕೆ ಹೆಚ್ಚುವರಿ ಅನುದಾನ ನೀಡುವ ಮೂಲಕ ಅಭಿವೃದ್ಧಿಪಡಿಸಿ, ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನ ನೀಡಬೇಕು. ಗ್ರಾಮದ ಅಮಾಯಕರ ಮೇಲೆ ಅನಾವಶ್ಯಕ ಪೊಲೀಸರು ಕೇಸು ದಾಖಲೆ ಮಾಡಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.