ADVERTISEMENT

ಆಗಸದತ್ತ ಮುಖ ಮಾಡಿದ ಜನರು!

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 6:15 IST
Last Updated 19 ಫೆಬ್ರುವರಿ 2012, 6:15 IST

ತೀರ್ಥಹಳ್ಳಿ: ಬಿಸಿಲಿನ ಝಳ ಹೆಚ್ಚಿದಂತೆ ಮಂಗನಕಾಯಿಲೆ ಭೀತಿ ಹೆಚ್ಚಾಗತೊಡಗಿದೆ.
 ಕಳೆದ ಒಂದು ತಿಂಗಳಿನಿಂದ ಮಂಗನ ಕಾಯಿಲೆಯಿಂದ ತಾಲ್ಲೂಕಿನ ಜನರು ಹೈರಾಣಾಗಿ ಹೋಗಿದ್ದಾರೆ. ಇಡೀ ಊರಿಗೆ ಊರು, ಹೋಬಳಿಗೆ ಹೋಬಳಿಯೇ ಹೊದ್ದು ಮಲಗುವಂತಾಗಿದೆ.
 
ಕೆಲವು ಮನೆಗಳಲ್ಲಿ ಕಾಯಿಲೆಯಿಂದ ಮಲಗಿದವರಿಗೆ ಅನ್ನ, ನೀರು ಕಾಣಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿರುವ ಮಂಗನ ಕಾಯಿಲೆಯನ್ನು ನಿಯಂತ್ರಿಸಲು ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದ್ದಾರೆ. ರೋಗ ಹರಡದಂತೆ ಮುಂಜಾಗೃತಾ ಕ್ರಮವಾಗಿ ಈಗಾಗಲೇ ರೋಗಪೀಡಿತ ಕೆಲವು ಪ್ರದೇಶಗಳಲ್ಲಿ ಎರಡು ಸುತ್ತಿನ ಲಸಿಕೆ ಹಾಕಿದ್ದಾರೆ.
 
ಕಾಡಿಗೆ ಜನರು ಹೋಗದಂತೆ ಸಲಹೆ ಸೂಚನೆ ನೀಡುತ್ತಿದ್ದಾರೆ. ಆದಷ್ಟು ಕಾಡಿನ ಸಂಪರ್ಕದಿಂದ ದೂರ ಉಳಿಯುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಮಂಗಗಳು ಊರಿನಲ್ಲಿಯೇ ಸಾಯುತ್ತಿವೆ. ರೋಗ ಈಗ ಮನೆಯಂಗಳದಲ್ಲಿಯೇ ಇದೆ ಎನ್ನುವಂತಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಮಂಗಗಳ ಸಂಖ್ಯೆ ವಿಪರೀತ ಹೆಚ್ಚಿದೆ. ಕೇವಲ ಮಲೆನಾಡಿನ ಕಾಡಿನಲ್ಲಿ ಮಾತ್ರ ಕಾಣಿಸುತ್ತಿದ್ದ ಮಂಗಗಳ ಹಿಂಡು ಈಗ ಊರುಕಡೆ ಮುಖ ಮಾಡಿವೆ. ಸಹಜವಾಗಿ ಕಾಡಿನಲ್ಲಿ ಸಿಗುತ್ತಿದ್ದ ಆಹಾರಕ್ಕೆ ಅಂಟಿಕೊಂಡ ಮಂಗಗಳಿಗೆ ಕಾಡಿನಲ್ಲಿ ಆಹಾರ ಸಿಗದಾಗಿದೆ. 
 

ನೆಡು ತೋಪಿನಿಂದ ಸಹಜ ಕಾಡು ನಾಶವಾದ ಕಾರಣ ಮಂಗಗಳಿಗೆ ಆಹಾರ ಸಿಗುತ್ತಿಲ್ಲ. ಇನ್ನೊಂದೆಡೆ ಬಯಲು ಸೀಮೆಯಿಂದ ಮಂಗಗಳನ್ನು ಮಲೆನಾಡಿನ ಕಾಡಿಗೆ ತಂದು ಬಿಡಲಾಗುತ್ತಿದೆ. ಊರಿನಜತೆ ಹೊಂದಿಕೊಂಡ ಮಂಗಗಳ ಹಿಂಡು ಕಾಡಿನ ಕಡೆ ಮುಖ ಮಾಡದೇ ಊರಿನಲ್ಲಿಯೇ ಉಳಿಯುತ್ತಿವೆ. ಇಂಥ ಮಂಗಗಳಿಗೆ ರೋಗ ತಗುಲಿದ್ದರಿಂದ ಅವುಗಳಿಗೆ ಕಚ್ಚಿದ ಉಣ್ಣೆಗಳು ಸುಲಭವಾಗಿ ಹತ್ತಿರದಲ್ಲಿರುವ ಜನರಿಗೆ ಕಡಿಯುತ್ತಿರುವುದರಿಂದ ರೋಗ ತೀವ್ರವಾಗಿ ಹರಡುತ್ತಿದೆ ಎಂದು ಜನರು ಹೇಳುತ್ತಾರೆ.
 

ನೂರಾರು ಸಂಖ್ಯೆಯಲ್ಲಿ ಮಂಗಗಳು ಸತ್ತಿವೆ. ಅಲ್ಲಲ್ಲಿ ಸತ್ತ ಮಂಗಗಳನ್ನು ಆರೋಗ್ಯ ಇಲಾಖೆ ಗುಡ್ಡೆಹಾಕಿ ಸುಡುತ್ತಿದೆ. ಹೊಸ ಹೊಸ ಪ್ರದೇಶದಲ್ಲಿ ಮಂಗಗಳು ಸತ್ತಿದ್ದು ಗಮನಕ್ಕೆ ಬಂದರೆ ಅವುಗಳನ್ನು ಪ್ರಯೋಗಾಲಕ್ಕೆ ಕಳುಹಿಸಲಾಗುತ್ತಿದೆ. ಮಂಡಗದ್ದೆ ಹೋಬಳಿ, ಅಗ್ರಹಾರ ಹೋಬಳಿಯಲ್ಲಿ ರೋಗ ಹರಡುವ ಭೀತಿ ಈಗ ಮತ್ತಷ್ಟು ಹೆಚ್ಚಿದೆ.

ಈಗಾಗಲೇ ತಾಲ್ಲೂಕಿನಲ್ಲಿ 37 ಮಂದಿಗೆ ಮಂಗನಕಾಯಿಲೆ ಇರುವುದು ದೃಢಪಟ್ಟಿದೆ. ಇದರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕಿರಣ್ ತಿಳಿಸಿದ್ದಾರೆ. ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸುವ ಕಾರ್ಯ ಪ್ರತಿ ನಿತ್ಯ ನಡೆಯುತ್ತಲೇ ಇದೆ.  ನಿತ್ಯ ಆರೋಗ್ಯ ಇಲಾಖೆ ಮೂಲಕ ಎಷ್ಟು ಮಂದಿಗೆ ರೋಗ ಇದೆ ಎಂಬುದು ತಿಳಿಯತ್ತಿದೆ. ಆದರೆ, ಈ ಎಲ್ಲಾ ಪರೀಕ್ಷೆಗಳಿಗೆ ಹೆಚ್ಚು ಕಾಲ ಹಿಡಿಯುವುದರಿಂದ ಮಂಗನ ಕಾಯಿಲೆ ಇರುವ ಪ್ರದೇಶದ ರೋಗಿಗಳಿಗೆ ಕಾಯಿಲೆಯನ್ನು ಊಹಿಸಿ ಚಿಕಿತ್ಸೆ ನೀಡಬೇಕಾಗಿದೆ ಎನ್ನುತ್ತಾರೆ ವೈದ್ಯಕೀಯ ಸಿಬ್ಬಂದಿಗಳು.

ADVERTISEMENT


ತಾಲ್ಲೂಕು ಕೇಂದ್ರವಾದ ಜೇಸಿ ಆಸ್ಪತ್ರೆಯಲ್ಲಿ ಈಗಾಗಲೇ ಕೆಎಫ್‌ಡಿ ವಾರ್ಡ್ ತೆರೆಯಲಾಗಿದೆ. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆ ತುಂಬಿದೆ. ನೆಲದ ಮೇಲೆಯೇ ರೋಗಿಗಳಿಗೆ ಹಾಸಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಮಲೆನಾಡಿನಲ್ಲಿ ಜಾನುವಾರು ಕಾಡಿಗೆ ಮೇವಿಗಾಗಿ ಬಿಡುವ ಪದ್ಧತಿ ಜಾರಿಯಲ್ಲಿ ಇರುವುದರಿಂದ ಜಾನುವಾರುಗಳಿಂದ ಮಂಗನ ಕಾಯಿಲೆ ಹರಡುವ ಸಾಧ್ಯತೆ ಇದೆ. ಜಾನುವಾರುಗಳಿಗೆ ಸುಲಭವಾಗಿ ಅಂಟಿಕೊಳ್ಳುವ ಉಣ್ಣೆಗಳು ಮನುಷ್ಯರಿಗೆ ಕಚ್ಚುವುದರಿಂದ ರೋಗ ಹರಡುತ್ತಿವೆ. ಬೇಸಿಗೆಯ ಸಮಯದಲ್ಲಿ ಜಾನುವಾರುಗಳಿಗೆ ಆಹಾರವನ್ನು ಒದಗಿಸುವುದು ಸಾಧ್ಯವಾಗುವುದಿಲ್ಲ. ಹಾಗಾಗಿ, ಅವುಗಳನ್ನು ಮನೆಯಲ್ಲಿ ಕಟ್ಟಿಸಾಕುವುದು ಅಸಾಧ್ಯದ ಮಾತು ಎನ್ನುತ್ತಾರೆ ರೈತರು.

ಹಿಂದೆಂದಿಗಿಂತಲೂ ಭೀಕರವಾಗಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆಯಿಂದ ತಾಲ್ಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಜನರನ್ನು ಬಲಿ ತೆಗೆದುಕೊಳ್ಳತ್ತಲೇ ಬಂದಿರುವ ಮಂಗನ ಕಾಯಿಲೆಯನ್ನು ನಿಯಂತ್ರಿಸಲು ಹೊಸ ವೈದ್ಯಕೀಯ ವ್ಯವಸ್ಥೆ ಜಾರಿಗೆ ಬರಬೇಕು. ರೋಗ ಬರುವು ಮುನ್ನವೇ ಮುಂಜಾಗೃತಾ ಕ್ರಮಗಳನ್ನು ಅನುಸರಿಸಲು ಸೂಕ್ತ ಕ್ರಮಗಳ ಅಳವಡಿಕೆಯಾಗಬೇಕು.
 

ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸುವ ಪ್ರಯೋಗಾಲಯ ಸ್ಥಳೀಯವಾಗಿ ಇರಬೇಕು ಎನ್ನುತ್ತಾರೆ ರೋಗ ಪೀಡಿತ ಜನತೆ.

ಮಂಗನ ಕಾಯಿಲೆಗೆ ಸದ್ಯ ಪರಿಹಾರ ಕಾಣದಾಗಿದೆ. ಇದಕ್ಕೆ ಮಳೆ ಸುರಿಯುವುದೊಂದೇ ಪರಿಹಾರ ಎನ್ನುತ್ತಾರೆ ರೋಗ ಪೀಡಿದ ಪ್ರದೇಶದ ಜನರು. ಆದಷ್ಟು ಬೇಗ ಮಳೆ ಬಿದ್ದರೆ ರೋಗ ತನ್ನಂತೆ ತಾನೇ ಕಡಿಮೆಯಾಗುತ್ತದೆ ಎನ್ನುವ ಜನರು ಈಗ ರೋಗ ನಿವಾರಣೆಗೆ ಆಗಸದತ್ತ ಮುಖ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.